ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್ ಮನೆಗೆ ಬೆಂಕಿ ಬಿದ್ದಿದೆ‘–ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯ
Last Updated 16 ಜುಲೈ 2021, 15:08 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಕಾಂಗ್ರೆಸ್ ಮನೆಗೆ ಬೆಂಕಿ ಬಿದ್ದಿದ್ದು, ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇರುವಾಗಲೇ ಅಧಿಕಾರಕ್ಕಾಗಿ ಕಾಂಗ್ರೆಸ್‌ ನಾಯಕರ ನಡುವೆ ದೊಡ್ಡ ಕಿತ್ತಾಟವೇ ನಡೆಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದರು.

ಇಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಮನೆ ಈಗ ಧಗಧಗ ಉರಿಯುತ್ತಿದೆ. ಆದರೂ ಆ ಪಕ್ಷದ ಮುಖಂಡರು ಬೇರೆಯವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮೊದಲು ಅವರ ಮನೆ ನೋಡಿಕೊಳ್ಳಲಿ’ ಎಂದು ಕುಟುಕಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ. ಎಐಸಿಸಿಯಲ್ಲಿ ಅಧ್ಯಕ್ಷರಿಲ್ಲ. ರಾಜ್ಯದಲ್ಲಿ ಯುವ ಕಾಂಗ್ರೆಸ್‌ಗೆ ಇಬ್ಬರು ಅಧ್ಯಕ್ಷರು. ಆ ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲೂ ಲಾಬಿ ನಡೆಯುತ್ತದೆ. ಮುಖ್ಯಮಂತ್ರಿ ಕುರ್ಚಿಗಾಗಿ ಪರಸ್ಪರ ಕಚ್ಚಾಡುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ನಾಚಿಕೆಯಾಗಬೇಕು’ ಎಂದು ಗುಡುಗಿದರು.

‘ರಾಜ್ಯ ಸರ್ಕಾರ ಕೋವಿಡ್‌ ನಿರ್ವಹಣೆಯಲ್ಲಿ ನಿರತವಾಗಿದ್ದರೆ ಕಾಂಗ್ರೆಸ್ ನಾಯಕರು ಸಿ.ಎಂ ಕುರ್ಚಿಗಾಗಿ ಗುದ್ದಾಡುತ್ತಿದ್ದಾರೆ. ದೇಶದಲ್ಲಿ 7 ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಕೇವಲ 7 ವರ್ಷದಲ್ಲಿ ಮಾಡಿ ತೋರಿಸಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಅಧಿಕಾರದ ದಾಹವಿಲ್ಲ’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಯಾವ ಸಮಾಜಕ್ಕೂ ನ್ಯಾಯ ಕೊಡಿಸಲಿಲ್ಲ. ಈಗ ಮತ್ತೆ ಅಹಿಂದ ಜಪ ಮಾಡುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೇಳುವವರು ಇರಲಿಲ್ಲ. ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಯೋಗ್ಯತೆ ಕಾಂಗ್ರೆಸ್‌ಗೆ ಇರಲಿಲ್ಲ. ಆದರೆ, ಈಗ ರಾಜಕೀಯ ದುರುದ್ದೇಶಕ್ಕಾಗಿ ರೈತರ ಪರ ಮಾತನಾಡುತ್ತಾರೆ’ ಎಂದು ಟೀಕಿಸಿದರು.

ಹೀನ ರಾಜಕಾರಣ: ‘ಕಾಂಗ್ರೆಸ್ ಕೋವಿಡ್ ಹೆಸರಿನಲ್ಲಿ ಹೀನ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ಮತದಾರರ ಓಲೈಕೆಗಾಗಿ ಗಿಮಿಕ್ ರಾಜಕಾರಣ ಮಾಡುವುದನ್ನು ಮೊದಲು ನಿಲ್ಲಿಸಲಿ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬರುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಮಂಗಳೂರಿನಲ್ಲಿ ಕಾಂಗ್ರೆಸ್‌ ಮುಖಂಡರು ಬಿಜೆಪಿ ಸೇರುತ್ತಿದ್ದು, ಆ ವಾತಾವರಣ ಇಲ್ಲಿಯೂ ಸೃಷ್ಟಿಯಾಗಬೇಕು’ ಎಂದು ಹೇಳಿದರು.

‘ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯಿಂದ ಧೃತಿಗೆಟ್ಟಿರುವ ವಿಪಕ್ಷ ನಾಯಕರು ಕೋವಿಡ್‌ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಟೀಕಿಸಿದರು. ಆದರೆ, ಮೋದಿ ಹಂತಹಂತವಾಗಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ಮಾಡಿದರು. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನು ಸಾಧನೆ ಮಾಡಿತ್ತು. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಿಲ್ಲ, ವೈದ್ಯರ ಕೊರತೆ ನೀಗಿಸಲಿಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್ ವಿರೋಧಿ ಅಲೆ: ‘ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದ್ದು, ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು. ಶಹಬಾಸ್‌ಗಿರಿ ಪಡೆಯುವುದು ಬಿಟ್ಟು ಮುಂದಿನ ಚುನಾವಣೆಗಳನ್ನು ಎದುರಿಸಲು ಸಜ್ಜಾಗಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ಸ್ವಯಂಪ್ರೇರಿತ ಟಿಕೆಟ್‌ ಅಕಾಂಕ್ಷಿಗಳ ಪರ ನಾವು ಕೆಲಸ ಮಾಡಲ್ಲ. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗಳಿಗೆ ಸಹಕಾರ ನೀಡುತ್ತೇವೆ. ಬಂಗಾರಪೇಟೆ, ಮಾಲೂರು, ಕೆಜಿಎಫ್‌ನ ಕಾಂಗ್ರೆಸ್ ಶಾಸಕರು ಏನು ಕೆಲಸ ಮಾಡಿದ್ದಾರೆ, ಅವರ ಯೋಗ್ಯತೆ ಏನೆಂದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ಶಾಸಕರ ವೈಫಲ್ಯದಿಂದ ಬಿಜೆಪಿಗೆ ಅನುಕೂಲವಾಗಲಿದೆ’ ಎಂದರು.

ಮುಳಬಾಗಿಲು ಶಾಸಕ ಹಾಗೂ ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ನಾಗೇಶ್, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ್, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಪ್ರಭಾರಿ ಜಯಚಂದ್ರರೆಡ್ಡಿ, ಸಹ ಪ್ರಭಾರಿ ಪುಷ್ಪಾ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT