ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಹೆರಿಗೆ ಬಳಿಕ ಮಹಿಳೆ ದೇಹದಲ್ಲಿ ಬಟ್ಟೆ ಬಿಟ್ಟ ವೈದ್ಯರು!

Published 17 ಮೇ 2024, 6:49 IST
Last Updated 17 ಮೇ 2024, 6:49 IST
ಅಕ್ಷರ ಗಾತ್ರ

ಕೋಲಾರ: ನಗರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯು ಹೆರಿಗೆ ನಂತರ ರಕ್ತಸ್ರಾವ ತಡೆಯಲು ಮಹಿಳೆ ದೇಹದೊಳಗೆ ಮೂರು ಮೀಟರ್‌ ಡ್ರೆಸ್ಸಿಂಗ್‌ ಬ್ಯಾಂಡೇಜ್‌ ಬಟ್ಟೆಯನ್ನು ಹಾಗೆಯೇ ಬಿಟ್ಟು ಎಡವಟ್ಟು ಮಾಡಿದ್ದಾರೆ.

ಜಿಲ್ಲೆಯ ಮಾಲೂರು ತಾಲ್ಲೂಕಿನ ರಾಮಸಾಗರದ ಚಂದ್ರಿಕಾ ಎಂಬುವರು ಹೆರಿಗೆಗಾಗಿ ಮೇ 5ರಂದು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಸಹಜ ಹೆರಿಗೆ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ರಕ್ತಸ್ರಾವ ತಡೆಗೆ ಆಕೆಯ ದೇಹದಲ್ಲಿ ಡ್ರೆಸ್ಸಿಂಗ್‌ ಬ್ಯಾಂಡೇಜ್‌ ಬಟ್ಟೆ ಇಟ್ಟ ವೈದ್ಯರು ಹಾಗೂ ಸಿಬ್ಬಂದಿ ಬಳಿಕ ಅದನ್ನು ಅಲ್ಲಿಯೇ ಮರೆತು ಮಹಿಳೆಯನ್ನು ಮನೆಗೆ ಕಳಿಸಿದ್ದಾರೆ.

ಮನೆಗೆ ಹೋದ ಮಹಿಳೆಗೆ ನಾಲ್ಕೈದು ದಿನದ ನಂತರ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಆರೋಗ್ಯ ಬಿಗಡಾಯಿಸಿದೆ. ತಕ್ಷಣ ಸ್ಥಳೀಯ ನರ್ಸಿಂಗ್‌ ಹೋಂ ವೈದ್ಯರ ಬಳಿ ತೋರಿಸಿದ್ದಾರೆ. ಹೆರಿಗೆಯಾದ ಸ್ಥಳದ ಗಾಯಕ್ಕೆ ಮುಲಾಮು ಹಚ್ಚುವಾಗ ಬ್ಯಾಂಡೇಜ್ ಬಟ್ಟೆ ಕಂಡು ಬಂದಿದೆ. ವೈದ್ಯರು ಬಟ್ಟೆಯನ್ನು ಹೊರ ತೆಗೆದ ಬಳಿಕ ಬಾಣಂತಿ ಚೇತರಿಸಿಕೊಂಡಿದ್ದಾಳೆ.

ಈ ಬಗ್ಗೆ ಬಾಣಂತಿಯ ಪತಿ ರಾಜೇಶ್‌ ಅವರು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಎಸ್‌.ಎನ್‌.ವಿಜಯಕುಮಾರ್‌ ಅವರಿಗೆ ದೂರು ನೀಡಿದ್ದಾರೆ.

ತನಿಖೆಗೆ ಸಮಿತಿ ರಚನೆ

ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದೆ. ಸೋಮವಾರ ವರದಿ ಸಿಗಲಿದ್ದು ನಿರ್ಲಕ್ಷ್ಯ ಆಗಿದ್ದರೆ ಕ್ರಮ ವಹಿಸಲಾಗುವುದು. ವೈದ್ಯರ ತಪ್ಪಿಲ್ಲ ಜೊತೆಗಿದ್ದ ಸಿಬ್ಬಂದಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ರಕ್ತ ಬಾರದಂತೆ ನಿಯಂತ್ರಿಸುವ ಪ್ರಕ್ರಿಯೆ ವೇಳೆ ಈ ಲೋಪ ಉಂಟಾಗಿರುವ ಸಾಧ್ಯತೆ ಇದೆ. ಬಾಣಂತಿ ಈಗ ಆರೋಗ್ಯವಾಗಿದ್ದಾರೆ ಡಾ.ಎಸ್‌.ಎನ್‌.ವಿಜಯಕುಮಾರ್‌ ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್‌ಎನ್‌ಆರ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT