ಬುಧವಾರ, ಅಕ್ಟೋಬರ್ 21, 2020
22 °C
ವಿಶ್ವ ದೃಷ್ಟಿ ದಿನಾಚರಣೆಯಲ್ಲಿ ಡಿಎಚ್‌ಒ ವಿಜಯ್‌ಕುಮಾರ್ ಕಿವಮಾತು

ನೇತ್ರದಾನದಿಂದ ಅಂಧರ ಬಾಳು ಬೆಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು. ನೇತ್ರದಾನವು ಜನಾಂದೋಲನದ ರೀತಿ ಆಗಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಆಶಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ದೃಷ್ಟಿ ದಿನಾಚರಣೆಯಲ್ಲಿ ಮಾತನಾಡಿ, ‘ದೃಷ್ಟಿ ದೋಷ ಸಮಸ್ಯೆಯಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನೇತ್ರದಾನ ಮಹಾದಾನ. ಮನುಷ್ಯನ ದೇಹದ ಜತೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳು ಬೆಳಗಬೇಕು’ ಎಂದು ಸಲಹೆ ನೀಡಿದರು.

‘ಮನುಷ್ಯನ ದೇಹಕ್ಕೆ ಸಾವು ಬರುತ್ತದೆ. ಆದರೆ, ಕಣ್ಣಿಗೆ ಸಾವಿಲ್ಲ. ಕಣ್ಣುಗಳು ಅಮೂಲ್ಯ ಅಂಗಗಳು. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ದೃಷ್ಟಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕಣ್ಣು ಇದ್ದವರು ಮಾತ್ರ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ಜನರು ಸ್ವಪ್ರೇರಣೆಯಿಂದ ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು’ ಎಂದು ಕಿವಿಮಾತು ಹೇಳಿದರು.

‘ಮನುಷ್ಯನ ಸಾವಿನ ನಂತರ ಕಣ್ಣುಗಳನ್ನು ಸುಡದೆ ಅಥವಾ ಮಣ್ಣು ಮಾಡದೆ ಅಂಧರಿಗೆ ದಾನ ಮಾಡುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಿ. ಯಾವುದೇ ವಯೋಮಾನದವರು ನೇತ್ರದಾನ ಮಾಡಬಹುದು. ಸಾವಿನ ನಂತರ 6 ತಾಸಿನೊಳಗೆ ನೇತ್ರದಾನ ಮಾಡಬೇಕು’ ಎಂದು ವಿವರಿಸಿದರು.

1.50 ಕೋಟಿ ಮಂದಿಗೆ ದೋಷ: ‘ಜಗತ್ತಿನೆಲ್ಲೆಡೆ ಪ್ರತಿ ವರ್ಷ ಅ.8ರಂದು ವಿಶ್ವ ದೃಷ್ಟಿ ದಿನ ಆಚರಿಸಲಾಗುತ್ತದೆ. ದೇಶದಲ್ಲಿ 1.50 ಕೋಟಿ ಮಂದಿ, ಕರ್ನಾಟಕದಲ್ಲಿ 1.20 ಲಕ್ಷ ಹಾಗೂ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಮಂದಿ ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ’ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ ಎನ್.ಸಿ.ನಾರಾಯಣಸ್ವಾಮಿ ಹೇಳಿದರು.

‘ದೃಷ್ಟಿ ದೋಷ ನಿವಾರಣೆಗಾಗಿ 9 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ವಿಟಮಿನ್ ಎ ಮಾತ್ರೆ ನೀಡಲಾಗುತ್ತಿದೆ. ಮಕ್ಕಳು ಪೌಷ್ಟಿಕ ಆಹಾರ ಸೇವಿಸಬೇಕು ಹಾಗೂ ಹಸಿ ತರಕಾರಿ ಹೆಚ್ಚಾಗಿ ಸೇವಿಸಬೇಕು. ಕಂಪ್ಯೂಟರ್‌ ಮುಂದೆ ಕೆಲಸ ಮಾಡುವವರು 20 ನಿಮಿಷಕ್ಕೊಮ್ಮೆ ಕಣ್ಣುಗಳಿಗೆ 20 ಸೆಕೆಂಡ್‌ ವಿಶ್ರಾಂತಿ ನೀಡಬೇಕು. ವರ್ಷಕೊಮ್ಮೆ ಕಡ್ಡಾಯವಾಗಿ ಕಣ್ಣುಗಳ ತಪಾಸಣೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಬಾಳಿನಲ್ಲಿ ಬೆಳಕು: ‘ಜನರಿಗೆ ನೇತ್ರದಾನದ ಮಹತ್ವ ತಿಳಿಸಿ ಅಂಧರ ಬಾಳಿನಲ್ಲಿ ಬೆಳಕು ತರುವ ಕೆಲಸ ಮಾಡಬೇಕು. ವ್ಯಕ್ತಿಗೆ ಕಣ್ಣು ಇಲ್ಲದಿದ್ದರೆ ಜೀವನವೇ ಇಲ್ಲದಂತಾಗುತ್ತದೆ. ಪ್ರತಿನಿತ್ಯ ಸಾವಿರಾರು ಮಂದಿ ಸಾಯುತ್ತಾರೆ. ಆದರೆ, ಕಣ್ಣಿನ ಮಹತ್ವ ತಿಳಿಯದೆ ಅವರೆಲ್ಲಾ ನೇತ್ರದಾನ ಮಾಡುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ.ಕಮಲಾ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ, ಹಾಗೂ ಗ್ಲೋಬ್ ಐ ಪ್ರತಿಷ್ಠಾನದ ಪ್ರತಿನಿಧಿ ರಾಕೇಶ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.