ಮಂಗಳವಾರ, ಜನವರಿ 26, 2021
25 °C

ಸೇವೆ ನಿಲ್ಲಿಸಿದ ಕೃಷಿ ಯಂತ್ರಧಾರೆ: ರೈತರಿಗೆ ಸಂಕಷ್ಟ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ರೈತರ ಕೃಷಿ ಭೂಮಿಯಲ್ಲಿ ಬಳಸಬೇಕಾದ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಕೊಡುವ ಕೃಷಿ ಇಲಾಖೆಯ ಕೃಷಿ ಯಂತ್ರಧಾರೆ ಯೋಜನೆ ಕ್ಯಾಸಂಬಳ್ಳಿಯಲ್ಲಿ ವಿಫಲವಾಗಿದ್ದು, ರೈತರು ಸಂಕಷ್ಟವನ್ನು ಅನುಭವಿಸುವಂತಾಗಿದೆ.

ನಾಲ್ಕು ವರ್ಷಗಳ ಹಿಂದೆ ಕೃಷಿಗೆ ಸಂಬಂಧಿಸಿದ ಯಂತ್ರಗಳನ್ನು ರೈತರಿಗೆ ಬಾಡಿಗೆಗೆ ಕೊಡಲು ಕೃಷಿ ಇಲಾಖೆ ಜಾನ್ಡೀರ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ನಾಲ್ಕು ಟ್ರಾಕ್ಟರ್ ಸೇವೆಯನ್ನು ನೀಡಬೇಕಾಗಿದ್ದ ಕಂಪನಿ ಕೇವಲ ಒಂದು ಟ್ರಾಕ್ಟರ್‌ನ್ನು ರೈತರಿಗೆ ನೀಡುತ್ತಿದೆ. ಅದು ಕೂಡ ನಿಯಮಿತವಾಗಿಲ್ಲ. ಟ್ರಾಕ್ಟರ್‌ಗೆ ನೇಮಿಸಿಕೊಂಡಿರುವ ಚಾಲಕ ಕೈಕೊಟ್ಟರೆ, ಅಂದು ಟ್ರಾಕ್ಟರ್ ಸೇವೆ ರೈತರಿಗೆ ಸಿಗುವುದಿಲ್ಲ. ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ದರ ನಿಗದಿ ಪಟ್ಟಿ ಇಲ್ಲ. ಸಿಬ್ಬಂದಿ ಕೂಡ ಇರುವುದಿಲ್ಲ ಎಂದು ಕ್ಯಾಸಂಬಳ್ಳಿ ಮತ್ತು ಸುತ್ತಮುತ್ತಲಿನ ರೈತರು ಆರೋಪಿಸುತ್ತಾರೆ.

ಈಗ ಒಂದು ಟ್ರಾಕ್ಟರ್ ಮಾತ್ರ ಇದೆ. ಅದೂ ಕೂಡ ದುರಸ್ತಿಯಲ್ಲಿದೆ. ರಾಗಿ ಬೆಳೆ ಮುಗಿದಿದೆ. ಭೂಮಿ ಹದ ಮಾಡಲು ಟ್ರಾಕ್ಟರ್ ಬೇಕಾಗಿದೆ. ಅನೇಕ ಬಾರಿ ಕೇಂದ್ರಕ್ಕೆ ಬಂದು ಹೋಗಿದ್ದೇನೆ. ಒಂದಲ್ಲ ಒಂದು ನೆಪ ಹೇಳಿ ಸಾಗಿ ಹಾಕುತ್ತಿದ್ದಾರೆ. ಟ್ರಾಕ್ಟರ್ ಮಾತ್ರ ಸಿಗುತ್ತಿಲ್ಲ ಎಂದು ರೈತರೂ ಆಗಿರುವ ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ರೈತರು ಉಪಯೋಗಿಸಬಹುದಾಗಿದ್ದ ಸೀಡ್ ಕಂ ಫರ್ಟಿಲೈಸರ್ ಡ್ರಿಲ್, ರೊಟೊವೇಟರ್, ಕಲ್ಟಿವೇಟರ್ಸ್, ಫರೋ ಆಪರೇಟರ್, ಬ್ಲೇಡ್, ಡಿಸ್ಕ್ ಮೊದಲಾದ ಉಪಕರಣಗಳನ್ನು ಹೊಂದಿದ ಟ್ರಾಕ್ಟರ್‌ಗಳನ್ನು ಕಂಪನಿ ರೈತರಿಗೆ ನೀಡಬೇಕಾಗಿತ್ತು. ರೊಟೋವೇಟರ್ ಹೊಂದಿದ ಟ್ರಾಕ್ಟರ್‌ಗೆ ಪ್ರತಿ ಗಂಟೆಗೆ ₹700  ನಿಗದಿ ಮಾಡಲಾಗಿತ್ತು. ರೈತರು ಉಳುಮೆ ಮಾಡಲು
ಕೃಷಿಯಂತ್ರ ಧಾರೆ ಕೇಂದ್ರಕ್ಕೆ ಬಂದು ಟ್ರಾಕ್ಟರ್‌ಗಳನ್ನು ಅದರ ಚಾಲಕನ ಸಮೇತ ತಮ್ಮ ಜಮೀನಿಗೆ ಕರೆದುಕೊಂಡು ಹೋಗಬಹುದಾಗಿತ್ತು. ಹೆಚ್ಚುವರಿ ರೈತರು ಸೇವೆ ಕೇಳಿದರೆ ಆದ್ಯತೆ ಮೇರೆಗೆ ಟ್ರಾಕ್ಟರ್
ಕಳಿಸಲಾಗುತ್ತಿತ್ತು.

ಕಡ್ಲೆಕಾಯಿ, ಟೊಮೆಟೊ ಮತ್ತು ಆಲೂಗಡ್ಡೆ ಉಳುಮೆ ಮಾಡಲು ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಕೃಷಿ ಸಮಯದಲ್ಲಿ ಒಮ್ಮೆಲೆ ಟ್ರಾಕ್ಟರ್‌ಗಳಿಗೆ ಬೇಡಿಕೆ ಬಂದಾಗ, ಖಾಸಗಿ ಟ್ರಾಕ್ಟರ್ ಮಾಲೀಕರು ಬೆಲೆಯನ್ನು ಏರಿಸುತ್ತಿದ್ದರು. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಖಾಸಗಿ ಟ್ರಾಕ್ಟರ್ ಗಳನ್ನು ಬಾಡಿಗೆಗೆ ಪಡೆಯಲು ಕಷ್ಟವಾಗುತ್ತಿತ್ತು.

ಗುತ್ತಿಗೆ ಪಡೆದಿರುವ ಕಂಪನಿ ವಿರುದ್ಧ ರೈತರು ದೂರುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಸಾಲಿನಲ್ಲಿ 492 ಫಲಾನುಭವಿಗಳು ಕೇಂದ್ರದ ಉಪಯೋಗ ಪಡೆದಿದ್ದಾರೆ ಎಂದು ಕೃಷಿ ಅಧಿಕಾರಿ ಅಕ್ಷಯ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು