ಶುಕ್ರವಾರ, ಸೆಪ್ಟೆಂಬರ್ 17, 2021
22 °C
ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಅಭಿಪ್ರಾಯ

ಆರೋಗ್ಯಕರ ಪರಿಸರ ಸಮಾಜಕ್ಕೆ ಅಡಿಪಾಯ: ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಾನವ ಆರೋಗ್ಯಯುತವಾಗಿ ಜೀವನ ನಡೆಸಲು ಪ್ರಕೃತಿಯಲ್ಲಿನ ನೀರು, ಗಾಳಿ, ಗಿಡ, ಮರ ಮುಖ್ಯ. ಹೀಗಾಗಿ ಆರೋಗ್ಯಕರ ಪರಿಸರವು ಆರೋಗ್ಯಯುತ ಮಾನವ ಸಮಾಜಕ್ಕೆ ಅಡಿಪಾಯ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು ಅಭಿಪ್ರಾಯಪಟ್ಟರು.

ನೇತಾಜಿ ಇಕೋ ಕ್ಲಬ್ ವತಿಯಿಂದ ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿ, ‘ಮನುಷ್ಯನ ಜೀವನ ಶೈಲಿಯಿಂದ ಭೂಮಿ ಮೇಲಿನ ಎಲ್ಲಾ ಜೀವರಾಶಿಗಳಿಗೂ ಅಪಾಯವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಾಡಿಗೆ ಬೆಂಕಿ ಹಚ್ಚುವುದು, ಮೋಜ ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣದಿಂದಾಗಿ ನೆಮ್ಮದಿಯಿಂದ ಜೀವಿಸುತ್ತಿದ್ದ ವನ್ಯಜೀವಿಗಳು ಆಹಾರ ಹುಡುಕುತ್ತಾ ನಾಡಿಗೆ ಬಂದು ಮನಷ್ಯನ ಕೈಯಲ್ಲಿ ಬಲಿಯಾಗುತ್ತಿವೆ. ಅರಣ್ಯ ರಕ್ಷಿಸದಿದ್ದರೆ ಮನುಕುಲ ಸರ್ವನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಪರಿಸರದ ಮೇಲಿನ ಕಾಳಜಿ ದೂರವಾಗುತ್ತಿದೆ. ಪ್ಲಾಸ್ಟಿಕ್ ಬಳಕೆ, ಮರಗಳ ನಾಶ, ಅಂತರ್ಜಲದ ಅತಿಯಾದ ಬಳಕೆಯಿಂದ ಭೂಮಿ ಬರಡಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಅರಣ್ಯ ನಾಶದಿಂದ ನೈಸರ್ಗಿಕ ಅಸಮತೋಲನವಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಕೃಷಿ ಕ್ಷೇತ್ರ ನಾಶವಾಗಿ ಆಹಾರದ ಅಭದ್ರತೆ ಎದುರಾಗಿದೆ’ ಎಂದು ಹೇಳಿದರು.

‘ಕಾಡುಗಳು ಭೂಮಿಯ ಶ್ವಾಸಕೋಶವಿದ್ದಂತೆ. ಮರಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್‌ ಹೀರಿಕೊಂಡು ಆಮ್ಲಜನಕದ ಸಮತೋಲನ ಕಾಪಾಡುತ್ತವೆ. ಆದರೆ, ಮನುಷ್ಯ ದುರಾಸೆಯಿಂದ ಅಭಿವೃದ್ಧಿ ಹೆಸರಿನಲ್ಲಿ ನಗರೀಕರಣ, ಕೈಗಾರೀಕರಣ, ಗಣಿಗಾರಿಕೆ ನಡೆಸಿ ಅರಣ್ಯ ನಾಶ ಮಾಡುತ್ತಿದ್ದೇನೆ’ ಎಂದು ಹರಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ನಾಗರಾಜ್ ತಿಳಿಸಿದರು.

‘ಭೂಮಿಯ ನೈಸರ್ಗಿಕ ಪರಿಸರದಿಂದ ದೂರವಾಗುತ್ತಿರುವ ಪ್ರಾಣಿ ಪಕ್ಷಿ ಮತ್ತು ಮರಗಳನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ಮಾದರಿಯಲ್ಲಿ ಮರಗಳನ್ನು ಬೆಳೆಸಿದರೆ ಉತ್ತಮ ಮಳೆಯಾಗುವ ಅವಕಾಶವಿದೆ. ಮರಗಳು ಮೋಡಗಳನ್ನು ಆಕರ್ಷಿಸುತ್ತವೆ ಮತ್ತು ಮರದ ಕಣಗಳಿಂದ ಮಳೆಯಾಗುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ’ ಎಂದು ಕಿವಿಮಾತು ಹೇಳಿದರು.

ಉಳಿವಿನ ಪ್ರಶ್ನೆ: ‘ಪರಿಸರ ಸಂರಕ್ಷಣೆ ಬಹಳ ಮುಖ್ಯ. ವಿಜ್ಞಾನಿಗಳು ಸಹ ಪರಿಸರ ನಾಶದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಪರಿಸರ ಸಂರಕ್ಷಣೆಯು ಕೇವಲ ನೈತಿಕತೆಯ ಪ್ರಶ್ನೆಯಲ್ಲ. ಬದಲಿಗೆ ಅದು ಮನುಕುಲದ ಉಳಿವಿನ ಪ್ರಶ್ನೆ’ ಎಂದು ಗ್ರಾ.ಪಂ ಉಪಾಧ್ಯಕ್ಷ ಎನ್.ವಿ.ನರೇಂದ್ರಬಾಬು ತಿಳಿಸಿದರು.

‘ಜನಸಂಖ್ಯೆ ಹೆಚ್ಚಳ, ಪರಿಸರ ಮಾಲಿನ್ಯ, ನಗರೀಕರಣ, ಕೈಗಾರೀಕರಣ ಹಾಗೂ ಅರಣ್ಯ ನಾಶದಿಂದ ತಾಪಮಾನ ಏರುತ್ತಿದೆ. ಮಳೆ ಇಳಿಮುಖವಾಗುತ್ತಿದೆ. ಪರಿಸರ ಮಾಲಿನ್ಯ, ಪ್ರಾಕೃತಿಕ ವಿಕೋಪ ಉಂಟಾಗುತ್ತಿವೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಇಕೋ ಕ್ಲಬ್ ಸದಸ್ಯರಾದ ಎಚ್.ಮುನಿಯಪ್ಪ, ಕೆ.ಮಮತಾ, ಕೆ.ಆರ್.ಸೊಣ್ಣೇಗೌಡ, ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು