ಬುಧವಾರ, ಜೂನ್ 16, 2021
21 °C

ಕೋಲಾರ: ಮಾಂಸ–ಮದ್ಯದ ಭರ್ಜರಿ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಾದ್ಯಂತ ಭಾನುವಾರ ಜನತಾ ಕರ್ಫ್ಯೂ ನಡುವೆಯೂ ಮಾಂಸ ಹಾಗೂ ಮೀನಿನ ವಹಿವಾಟು ಭರ್ಜರಿಯಾಗಿ ನಡೆಯಿತು. ಕೋವಿಡ್‌ 2ನೇ ಅಲೆ ಭೀತಿ ನಡುವೆಯೂ ಗ್ರಾಹಕರು ಮಾಂಸ ಖರೀದಿಗೆ ಮುಗಿಬಿದ್ದರು. ಮಾಂಸದ ಜತೆಗೆ ಮದ್ಯದ ವಹಿವಾಟು ಹೆಚ್ಚಿತ್ತು.

ಕೋಳಿ, ಕುರಿ ಮಾಂಸ ಹಾಗೂ ಮೀನಿನ ಅಂಗಡಿ ಮಾಲೀಕರು ನಸುಕಿನಲ್ಲೇ ಮಳಿಗೆಗಳ ಬಾಗಿಲು ತೆರೆದು ವಹಿವಾಟು ಆರಂಭಿಸಿದರು. ಗ್ರಾಮೀಣ ಭಾಗದಲ್ಲಿ ಮುಂಜಾನೆಯೇ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಲಾಯಿತು.

ಜಿಲ್ಲಾ ಕೇಂದ್ರದ ಅಮ್ಮವಾರಿಪೇಟೆ, ಕ್ಲಾಕ್‌ಟವರ್‌, ಎಂ.ಬಿ ರಸ್ತೆ ಸುತ್ತಮುತ್ತಲಿನ ಕೋಳಿ, ಮೀನು ಹಾಗೂ ಕುರಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಅಂಗಡಿಗಳ ಮುಂದೆ ಗ್ರಾಹಕರು ಮಾಂಸ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಎಂ.ಬಿ ರಸ್ತೆಯ ಅಕ್ಕಪಕ್ಕ ನಾಟಿ ಕೋಳಿ ವಹಿವಾಟು ಭರ್ಜರಿಯಾಗಿತ್ತು. ಮೀನಿನ ವ್ಯಾಪಾರವೂ ಜೋರಾಗಿತ್ತು. ಅಮ್ಮವಾರಿಪೇಟೆ ಮಾರುಕಟ್ಟೆಯಲ್ಲಿ ಜನ ಜಾತ್ರೆಯೇ ಕಂಡುಬಂತು.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಂಗಳೂರಿನಿಂದ ತರಿಸಲಾಗಿದ್ದ ಮೀನುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಗ್ರಾಮೀಣ ಪ್ರದೇಶದಿಂದ ರೈತರು ತಂದಿದ್ದ ನಾಟಿ ಕೋಳಿಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಕುರಿ ಹಾಗೂ ಕೋಳಿ ಮಾಂಸದ ಅಂಗಡಿ ಮಾಲೀಕರು ಗ್ರಾಹಕರಿಂದ ಮುಂಗಡ ಹಣ ಪಡೆದು ಟೋಕನ್‌ ನೀಡಿ ನಂತರ ಮಾಂಸ ವಿತರಿಸಿದರು.

ಸೋಮವಾರದಿಂದ (ಮೇ 10) ಲಾಕ್‌ಡೌನ್‌ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮದ್ಯ ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದರು. ಲಾಕ್‌ಡೌನ್‌ ಸಂದರ್ಭದಲ್ಲೂ ಪ್ರತಿನಿತ್ಯ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮದ್ಯದ ವಹಿವಾಟಿಗೆ ಸರ್ಕಾರ ಅನುಮತಿ ನೀಡಿದೆ.

ಆದರೂ ಮದ್ಯಪ್ರಿಯರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್‌ ಆಗುತ್ತವೆ ಎಂಬ ಕಾರಣಕ್ಕೆ ಮದ್ಯ ಖರೀದಿಗೆ ಮುಗಿಬಿದ್ದರು. ಮದ್ಯದಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು