ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಏರು ಗತಿಯಲ್ಲಿ ಸಾಗಿದ ಸೋಂಕು

ಜಿಲ್ಲೆಯಲ್ಲಿ 147ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
Last Updated 11 ಜುಲೈ 2020, 14:59 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಏರು ಗತಿಯಲ್ಲೇ ಸಾಗಿದ್ದು, ಶನಿವಾರ ಹೊಸದಾಗಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಕೋಲಾರ ತಾಲ್ಲೂಕಿನಲ್ಲಿ 8 ಮಂದಿಗೆ, ಮಾಲೂರು ಮತ್ತು ಕೆಜಿಎಫ್‌ ತಾಲ್ಲೂಕಿನಲ್ಲಿ ಇಬ್ಬರಿಗೆ, ಬಂಗಾರಪೇಟೆ 3 ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.

ಕೋಲಾರದಲ್ಲಿ ಸೋಂಕಿತ ವ್ಯಕ್ತಿಯ ಸಂಖ್ಯೆ 15,409ರ ಸಂಪರ್ಕದಿಂದ 4 ವರ್ಷದ ಹೆಣ್ಣು ಮಗುವಿಗೆ, ಪೋಷಕರ ಜತೆ ಹೊರ ಜಿಲ್ಲೆಗೆ ಹೋಗಿ ಬಂದಿದ್ದ 3 ವರ್ಷದ ಗಂಡು ಮಗುವಿಗೆ, ವಿಷಮ ಶೀತ ಜ್ವರದಿಂದ ಬಳಲುತ್ತಿರುವ 4 ಮಂದಿ ಪುರುಷರು ಹಾಗೂ ಒಬ್ಬರು ಮಹಿಳೆಗೆ, ಕೊರೊನಾ ಸೋಂಕಿತ ವ್ಯಕ್ತಿ 31,612ರ ಸಂಪರ್ಕದಿಂದ 60 ವರ್ಷದ ವೃದ್ಧೆಗೆ ಸೋಂಕು ತಗುಲಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರು ಪುರುಷರು ಮತ್ತು ಹೊರ ಜಿಲ್ಲೆಗೆ ಹೋಗಿ ಬಂದಿದ್ದ 22 ವರ್ಷದ ಮಹಿಳೆಗೆ ಸೋಂಕು ಹರಡಿರುವುದು ಖಚಿತವಾಗಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ಸೋಂಕಿತ ವ್ಯಕ್ತಿ ಸಂಖ್ಯೆ 27,036ರ ಸಂಪರ್ಕದಿಂದ ಪುರುಷರೊಬ್ಬರಿಗೆ ಮತ್ತು ವಿಷಮ ಶೀತ ಜ್ವರದಿಂದ ಬಳಲುತ್ತಿರುವ 52 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.

ಮಾಲೂರು ತಾಲ್ಲೂಕಿನಲ್ಲಿ ಇಬ್ಬರು ಪುರುಷರಿಗೆ ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ 40 ವರ್ಷದ ವ್ಯಕ್ತಿಗೆ ಸೋಂಕು ಹರಡಿದೆ. ಈ ಮೂವರು ಸೋಂಕಿತರು ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸಕ್ರಿಯ ಸೋಂಕಿತರ ಪೈಕಿ ಮೂವರ ದೇಹ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಸೋಂಕಿತರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಇಡೀ ಪ್ರದೇಶಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.ಆರೋಗ್ಯ ಇಲಾಖೆ ಸಿಬ್ಬಂದಿಯು ಸೋಂಕಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಿದ್ದಾರೆ.

ಎಡವಟ್ಟು: ಕೆಜಿಎಫ್‌ನ ಸುಮತಿ ನಗರದಲ್ಲಿ ಜುಲೈ 8ರಂದು ಪತ್ತೆಯಾಗಿದ್ದ ಬೆಮಲ್‌ನ ಸೋಂಕಿತ ಉದ್ಯೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತ್ನಿ ಮತ್ತು ಮಗನನ್ನು ಜಿಲ್ಲಾ ಕೇಂದ್ರದ ಆರ್‌.ಎಲ್‌ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆತರಲಾಗಿತ್ತು. ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಈ ಇಬ್ಬರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಶುಕ್ರವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಮಗನಿಗೆ ಸೋಂಕು ಇರುವುದು ದೃಢಪಟ್ಟಿತ್ತು. ತಾಯಿಗೆ ಸೋಂಕು ತಗುಲಿಲ್ಲ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿತ್ತು. ಆದರೆ, ವೈದ್ಯಕೀಯ ಸಿಬ್ಬಂದಿಯು ಸೋಂಕಿತ ಮಗನ ಬದಲು ತಾಯಿಯನ್ನು ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಿ ಎಡವಟ್ಟು ಮಾಡಿದ್ದರು.

ಈ ಸಂಗತಿ ತಿಳಿದ ಮಗ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡು ಸಿಬ್ಬಂದಿಯು ಮಗನನ್ನು ಕೋವಿಡ್‌ ವಾರ್ಡ್‌ಗೆ ಸ್ಥಳಾಂತರಿಸಿದರು. ಇದೀಗ ಕೋವಿಡ್‌ ವಾರ್ಡ್‌ಗೆ ಹೋಗಿ ಬಂದಿರುವ ತಾಯಿಗೂ ಸೋಂಕು ತಗುಲಿರುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT