ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪಲ್ಲಕ್ಕಿ ಹೊತ್ತ ಜನ!

Last Updated 4 ಜೂನ್ 2021, 2:20 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕೊರೊನಾಗೆ ತಣಿವು ಮುದ್ದೆ ಇಟ್ಟು ತಣಿಸುವ ಆಚರಣೆ ಗರಿಗೆದರಿದೆ. ಜೇಡಿಮಣ್ಣಿನಿಂದ ಕೊರೊನಾ ಮೂರ್ತಿ ಮಾಡಿ ಪಲ್ಲಕ್ಕಿಯಲ್ಲಿಟ್ಟು, ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಗಡಿ ದಾಟಿಸುವ ಕಾರ್ಯ ನಡೆಯುತ್ತಿದೆ.

ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿ ಸಂಚರಿಸುವವರಿಗೆ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವ ಪಲ್ಲಕ್ಕಿಗಳ ದರ್ಶನವಾಗುತ್ತವೆ. ನಿಧಾನವಾಗಿ ಗಮನಿಸಿದರೆ ನೂರಾರು ತೆಂಗಿನ ಚಿಪ್ಪುಗಳು ಕಣ್ಣಿಗೆ ಬೀಳುತ್ತವೆ. ನಾಯಿ ಕಾಟ ಇಲ್ಲದಿದ್ದರೆ ಕೋಳಿ ತಲೆಗಳೂ ಕಂಡು
ಬರಬಹುದು.

ಕೋವಿಡ್ ಭೀತಿಯಿಂದ ತಲ್ಲಣಗೊಂಡಿರುವ ಜನರು, ಹಿಂದೆ ಪ್ಲೇಗ್ ಬರುತ್ತಿದ್ದ ಕಾಲದಲ್ಲಿ ಪ್ಲೇಗಮ್ಮ, ಪುಲೇಕಮ್ಮ, ಪ್ಲೇಗ್ ಮಾರೆಮ್ಮ ಎಂಬೆಲ್ಲಾ ಹೆಸರುಗಳಿಂದ ಗುಡಿಗಳನ್ನು ಕಟ್ಟಿ ಪೂಜೆ ಸಲ್ಲಿಸಿ, ಬೇನೆ ಬರದಂತೆ ನೋಡಿಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ‘ಕೊರೊನಮ್ಮ’ನ ಕಲ್ಪನೆ ಜನರ ಮನಸ್ಸಿನಲ್ಲಿ ಮೂಡಿದಂತಿದೆ.

ಗ್ರಾಮಸ್ಥರು ಸಾಂಘಿಕವಾಗಿ ಮನೆ ಮನೆಯಿಂದ ಹಣ ಸಂಗ್ರಹಿಸಿ ಅಕ್ಕಿ, ಪೂಜೆ ಸಾಮಗ್ರಿ ತಂದು ತರುತ್ತಾರೆ. ಕೊರೊನಮ್ಮನ ಪಲ್ಲಕ್ಕಿ ನಿರ್ಮಿಸಿ ಗ್ರಾಮದ ಮಧ್ಯಭಾಗದಲ್ಲಿ ಇಡುತ್ತಾರೆ. ಪಲ್ಲಕ್ಕಿಯ ಮುಂದೆ ಅನ್ನದಿಂದ ದೊಡ್ಡದಾದ ತಣಿವು ಮುದ್ದೆ ಇಟ್ಟು ಅದರಲ್ಲಿ ಮಜ್ಜಿಗೆ ಸುರಿದು, ಪೂಜೆ ಸಲ್ಲಿಸುತ್ತಾರೆ. ಕೆಲವು ಗ್ರಾಮಗಳಲ್ಲಿ ಕುರಿ, ಕೋಳಿ ಬಲಿ ನೀಡುವುದುಂಟು.

ಗ್ರಾಮಸ್ಥರು ಸಾಂಘಿಕವಾಗಿ ಪೂಜೆ ಸಲ್ಲಿಸಿದ ಬಳಿಕ ತೆಂಗಿನ ಚಿಪ್ಪುಗಳನ್ನು ಪಲ್ಲಕ್ಕಿಯಲ್ಲಿ ತುಂಬುತ್ತಾರೆ. ಅಮದನ್ನವನ್ನು ಕೊಂಡೊಯ್ದು ಮನೆಗಳ ಮೇಲೆ ಎರಚುತ್ತಾರೆ. ಅಂತಿಮವಾಗಿ ಕೊರೊನಾ ಪಲ್ಲಕ್ಕಿಯನ್ನು ನಾಲ್ಕು ಮಂದಿ ಹೊತ್ತು ಗ್ರಾಮದ ಗಡಿಯ ಆಚೆ ಇಟ್ಟು ಬರುತ್ತಾರೆ. ರೋಗ ದೇವತೆಯನ್ನು ಗ್ರಾಮದಿಂದ ಗೌರವಪೂರ್ವಕವಾಗಿ ಕಳುಹಿಸಿದ ಸಂತೋಷದಲ್ಲಿ ತೇಲಾಡುತ್ತಾರೆ.

ಈ ಆಚರಣೆ ಕುರಿತು ಮೂಢನಂಬಿಕೆ ಎನ್ನುವವರು ಕೆಲವರಾದರೆ, ಅವರವರ ನಂಬಿಕೆ ಅವರದು. ಮಾನಸಿಕವಾಗಿ ಕೊರೊನಾ ಭಯ ಹೋಗುವುದಾದರೆ ಮಾಡಲಿ ಬಿಡಿ ಎನ್ನುವವರಿಗೂ ಕೊರತೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT