ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಯೋಜನೆ: ವಂಶವೃಕ್ಷ ಕಡ್ಡಾಯಗೊಳಿಸಿ ಎಂದ ಕುಮಾರ್ ಬಂಗಾರಪ್ಪ

ವಿಧಾನಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರ್ ಬಂಗಾರಪ್ಪ ಸೂಚನೆ
Last Updated 8 ಜನವರಿ 2020, 15:49 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಫಲಾನುಭವಿ ಕುಟುಂಬದ ವಂಶವೃಕ್ಷ ಕಡ್ಡಾಯಗೊಳಿಸಿ’ ಎಂದು ರಾಜ್ಯ ವಿಧಾನಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರ್ ಬಂಗಾರಪ್ಪ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ವಂಶವೃಕ್ಷ ಕಡ್ಡಾಯ ಮಾಡಿದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ಪ್ರಯೋಜನ ಕಲ್ಪಿಸಲು ಸಹಾಯವಾಗುತ್ತದೆ. ಜತೆಗೆ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ’ ಎಂದು ಹೇಳಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ವಂಶವೃಕ್ಷ ಕಡ್ಡಾಯ ಮಾಡಿರುವುದರಿಂದ ಒಂದು ಬಾರಿ ಯೋಜನೆ ಪ್ರಯೋಜನ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದರಿಂದ ಒಂದೇ ಕುಟುಂಬದಲ್ಲಿ ಇಬ್ಬರು ಮೂವರು ಅರ್ಜಿ ಹಾಕುವುದನ್ನು ತಡೆಯಬಹುದು’ ಎಂದು ಸಲಹೆ ನೀಡಿದರು.

‘ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿ ನೀಡಿದ ಕೀರ್ತಿ ಕೋಲಾರ ಜಿಲ್ಲೆಗಿದೆ. ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಬೇಕು. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ನಿವಾರಣೆಗೆ ಹೆಚ್ಚು ಆದ್ಯತೆ ಕೊಡಬೇಕು’ ಎಂದು ತಿಳಿಸಿದರು.

ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ ಸರ್ಕಾರಿ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ, ‘ಹಾಸ್ಟೆಲ್‌ಗಳ ವಿಚಾರದಲ್ಲಿ ಅಧಿಕಾರಿಗಳು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ನಾನು ಇತ್ತೀಚೆಗೆ ಕೆಲ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು. ಮೂಲಸೌಕರ್ಯ ಸಮಸ್ಯೆ, ಶಿಥಿಲ ಕಟ್ಟಡ, ಸ್ವಚ್ಛತೆ ಸಮಸ್ಯೆ ಹಾಗೂ ಹಾಸಿಗೆ ದಿಂಬು ಇಲ್ಲದೆ ಹಾಸ್ಟೆಲ್‌ ವಿದ್ಯಾರ್ಥಿಗಳು ನರಕ ಅನುಭವಿಸುತ್ತಿದ್ದಾರೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ, ‘ಉಪಾಧ್ಯಕ್ಷರು ಹಾಸ್ಟೆಲ್‌ಗಳ ವಸ್ತುಸ್ಥಿತಿ ಹೇಳುತ್ತಿದ್ದಾರೆ. ಚಿತ್ರ ಸಮೇತ ಹಾಸ್ಟೆಲ್‌ಗಳ ಶೋಚನೀಯ ಸ್ಥಿತಿ ತೋರಿಸುತ್ತಿದ್ದಾರೆ ಎಂದರೆ ಅಧಿಕಾರಿಗಳ ವೈಫಲ್ಯ ಕಾಣುತ್ತಿದೆ. ವಿದ್ಯಾರ್ಥಿನಿಲಯಗಳಿಗೆ ಸೌಕರ್ಯ ಕಲ್ಪಿಸಿಲ್ಲವೆ?’ ಎಂದು ಪ್ರಶ್ನಿಸಿದರು.

ತಡವಾಗಿದೆ: ‘ಪ್ರತಿ ಹಾಸ್ಟೆಲ್‌ಗೆ ಹಾಸಿಗೆ ದಿಂಬು ಸೇರಿದಂತೆ ಕಟ್ಟಡ ದುರಸ್ತಿಗೆ ಹಣ ಮಂಜೂರು ಮಾಡಲಾಗಿದೆ. ಆಯಾ ಜಿಲ್ಲೆ ಹಂತದಲ್ಲಿ ಟೆಂಡರ್ ಕರೆಯಲಾಗಿದೆ, ಸಾಮಗ್ರಿ ಸರಬರಾಜಿನಲ್ಲಿ ತಡವಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ವಸಂತಕುಮಾರ್‌ ಉತ್ತರಿಸಿದರು.

ಇದಕ್ಕೆ ಸಿಡಿಮಿಡಿಗೊಂಡ ಜಿ.ಪಂ ಉಪಾಧ್ಯಕ್ಷೆ ಯಶೋದಾ, ‘ನಾವೆಲ್ಲಾ ಹಾಸ್ಟೆಲ್‌ಗಳನ್ನು ಸುಧಾರಿಸಲು ಭೇಟಿ ಕೊಟ್ಟಿದ್ದೆವು. ಅಲ್ಲಿನ ಮಕ್ಕಳು ಸಮಸ್ಯೆ ಹೇಳುತ್ತಿದ್ದರೆ ಬೇಸರವಾಗುತ್ತದೆ. ಮಕ್ಕಳು ವಿಧಿಯಿಲ್ಲದೆ ಅಲ್ಲಿ ವಾಸವಿದ್ದಾರೆ. ಬಾಲಕಿಯರ ಹಾಸ್ಟೆಲ್‌ಗಳಲ್ಲಿ ನ್ಯಾಪ್‌ಕಿನ್ ಬರ್ನಿಂಗ್ ಉಪಕರಣವಿಲ್ಲ. ಅಧಿಕಾರಿಗಳು ಪ್ರತಿ ಸಭೆಯಲ್ಲೂ ತಪ್ಪು ಮಾಹಿತಿ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಾಸ್ಟೆಲ್‌ಗಳ ಪರಿಸ್ಥಿತಿ ಸುಧಾರಿಸಬೇಕು. ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು. ಸ್ವಚ್ಛತೆಗೆ ಒತ್ತು ಕೊಡಬೇಕು. ವಿದ್ಯಾರ್ಥಿಗಳಿಗೆ ಹಾಸಿಗೆ ದಿಂಬು ಕೊಟ್ಟಿರಬೇಕು. ಜತೆಗೆ ಸೂಕ್ತ ಭದ್ರತೆ ಕಲ್ಪಿಸಬೇಕು’ ಎಂದು ಕುಮಾರ್ ಬಂಗಾರಪ್ಪ ಸೂಚಿಸಿದರು.

ಜಾಗ ಮಂಜೂರು: ‘ಜಿಲ್ಲೆಯಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಪ್ರತಿ ವಾರ ಇಲಾಖೆವಾರು ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗ ಮಂಜೂರು ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ಸ್ಮಶಾನ ಮತ್ತು ಭವನಕ್ಕೆ ಜಾಗ ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ವಸತಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಸರ್ಕಾರ ಅನುದಾನ ವಾಪಸ್ ಪಡೆದಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆ ಬಾವಿಗೆ ಪಂಪ್‌ ಮೋಟರ್‌ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವಷ್ಟರಲ್ಲಿ ನೀರು ಬತ್ತಿ ಹೋಗಿರುತ್ತದೆ’ ಎಂದು ಸಮಿತಿ ಸದಸ್ಯ ಟಿ.ವೆಂಕಟರಾಮಯ್ಯ ಹೇಳಿದರು.

ಸಹಕಾರ ನೀಡುತ್ತಿಲ್ಲ: ‘ಸರ್ಕಾರದ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಸಾಲ ನೀಡಲು ಖಾಸಗಿ ಬ್ಯಾಂಕ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ದೂರಿದರು.

ಸಮಿತಿ ಅಧ್ಯಕ್ಷ ಕುಮಾರ್ ಬಂಗಾರಪ್ಪ ಪ್ರತಿಕ್ರಿಯಿಸಿ, ‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ಇತರೆ ಬ್ಯಾಂಕ್‌ಗಳ ವಿಲೀನವಾದ ನಂತರ ವ್ಯವಸ್ಥೆ ಅಧ್ವಾನಗೊಂಡಿದೆ. ಹೊರ ರಾಜ್ಯದವರೆ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳಾಗಿರುವುದರಿಂದ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಯೋಜನೆಗಳ ಜಾರಿಗೂ ಸಹಕಾರ ನೀಡುತ್ತಿಲ್ಲ’ ಎಂದು ಕುಮಾರ್‌ ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ಸದಸ್ಯರಾದ ದಿನಕರ್ ಕೇಶವಶೆಟ್ಟಿ, ಸುಭಾಷ್ ರುಕ್ಮಯ್ಯ ಗುತ್ತೇದಾರ್, ಡಿ.ವೇದವ್ಯಾಸ ಕಾಮತ್, ಉಮಾನಾಥ್ ಎ.ಕೋಟ್ಯಾನ್, ವಿರೂಪಾಕ್ಷ ರುದ್ರಪ್ಪ, ಬಿ.ಹರ್ಷವರ್ಧನ್, ಎನ್.ಎ ಹ್ಯಾರಿಸ್, ಕುಸುಮಾವತಿ ಶಿವಳ್ಳಿ, ಬಿ.ಶಿವಣ್ಣ, ಯತೀಂದ್ರ ಸಿದ್ದರಾಮಯ್ಯ, ದೇವಾನಂದ್ ಫುಲಸಿಂಗ್ ಚವ್ಹಾಣ್, ರಾಜಾ ವೆಂಕಟಪ್ಪ ನಾಯ್ಕ್, ಕೆ.ಮಹದೇವ, ಐವನ್ ಡಿಸೋಜಾ, ರಿಜ್ವಾನ್ ಅರ್ಷದ್, ವಿವೇಕ್‌ರಾವ್ ವಸಂತರಾವ್ ಪಾಟೀಲ್, ಎನ್.ರವಿಕುಮಾರ್, ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸಿಇಒ ಎಚ್.ವಿ.ದರ್ಶನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT