ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರು–ಶಾಲೆ ನಡುವಿನ ಸಾಮರಸ್ಯ ಮಾಯ: ಸಚಿವ ಸುರೇಶ್‌ಕುಮಾರ್‌ ವಿಷಾದ

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ವಿಷಾದ
Last Updated 12 ಜೂನ್ 2021, 12:20 IST
ಅಕ್ಷರ ಗಾತ್ರ

ಕೋಲಾರ: ‘ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವಿನ ಸಾಮರಸ್ಯ ಮಾಯವಾಗುತ್ತಿದೆ. ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ನಡುವಿನ ಜಗಳದಲ್ಲಿ ಮಕ್ಕಳು ಬಡವಾಗುತ್ತಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ವಿಷಾದಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಮತ್ತು ಚಿದಾನಂದ ಎಂ.ಗೌಡ ಅಭಿಮಾನಿಗಳ ಬಳಗವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ ದಿನಸಿ ವಿತರಿಸಿ ಮಾತನಾಡಿದರು.

‘ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಸಮಾಜದಲ್ಲಿ ಆತ್ಮಸ್ಥೈರ್ಯ ತುಂಬುವವರಿಗಿಂತ ಭಯ ಬಿತ್ತುವವರೇ ಹೆಚ್ಚಿದ್ದಾರೆ. ಮಕ್ಕಳು ಮತ್ತು ಪೋಷಕರಿಗೆ ಧೈರ್ಯ ತುಂಬುವ ಅಗತ್ಯವಿದೆ’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಕರಿಗೆ ದಿನಸಿ ಕಿಟ್ ನೀಡುವ ಸನ್ನಿವೇಶ ಬರುತ್ತದೆ ಎಂದು ಊಹಿಸಿರಲಿಲ್ಲ. ಒಂದೂವರೆ ವರ್ಷದಿಂದ ಖಾಸಗಿ ಶಾಲಾ ಶಿಕ್ಷಕರು ಕಷ್ಟ ಅನುಭವಿಸುತ್ತಿದ್ದಾರೆ. ನನ್ನ ತಾಯಿ ಶಿಕ್ಷಕಿಯಾಗಿದ್ದು, ಶಿಕ್ಷಕರ ನೋವಿನ ಅರಿವಿದೆ. ಕೆಲ ಶಿಕ್ಷಕರು ತರಕಾರಿ ಮಾರುತ್ತಿರುವ, ನರೇಗಾದಡಿ ಕೂಲಿ ಕೆಲಸ ಮಾಡುತ್ತಿರುವ ಸುದ್ದಿ ನೋಡಿದ್ದೇನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜವೇ ಶಿಕ್ಷಕರ ಹಿತ ಕಾಯಲು ಎದ್ದು ನಿಲ್ಲಬೇಕು’ ಎಂದು ಸಲಹೆ ನೀಡಿದರು.

‘ಖಾಸಗಿ ಶಾಲಾ ಶಿಕ್ಷಕರಿಗೆ ಕಳೆದ ವರ್ಷವೇ ಕೋವಿಡ್ ಸಂದರ್ಭದಲ್ಲಿ ಪ್ಯಾಕೇಜ್‌ ನೀಡುವ ಪ್ರಯತ್ನ ನಡೆದಿತ್ತು. ಆದರೆ, ಈಗ ಕೊಡುತ್ತಿದೇವೆ. ವೈ.ಎ.ನಾರಾಯಣಸ್ವಾಮಿ ಮತ್ತು ಚಿದಾನಂದಗೌಡರು ದಿನಸಿ ನೀಡುವ ದೊಡ್ಡ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕರ ಮನೆಗೆ ಹೋಗಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ₹ 10 ಸಾವಿರ ಹಣಕಾಸು ನೆರವು ನೀಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇತನ ಕಡಿತವಿಲ್ಲ: ‘ಕೋವಿಡ್‌ನಿಂದ ಎಲ್ಲಾ ಕ್ಷೇತ್ರಗಳಿಗೂ ಹಿನ್ನಡೆಯಾಗಿದೆ. 1 ಕೋಟಿ ಮಕ್ಕಳು ಓದುತ್ತಿರುವ ಶಾಲೆಗಳು, 7 ಲಕ್ಷ ಶಿಕ್ಷಕರ ಹಿತ ಕಾಯುವುದು ನಿಜಕ್ಕೂ ಕಷ್ಟದ ಕೆಲಸ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಸರ್ಕಾರ ಶಿಕ್ಷಕರ ವೇತನ ಕಡಿತ ಮಾಡಲಿಲ್ಲ’ ಎಂದು ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ನುಡಿದಂತೆ ನಡೆದು ಖಾಸಗಿ ಶಾಲಾ ಶಿಕ್ಷಕರಿಗೆ ₹ 5 ಸಾವಿರ ಪ್ಯಾಕೇಜ್‌ ಘೋಷಿಸಿದ್ದಾರೆ. ಎಲ್ಲರೂ ಸೇರಿ ಸಮಾಜ ಕಟ್ಟೋಣ, ಆಶಾಭಾವನೆಯಿಂದ ಬದುಕೋಣ. ಶಿಕ್ಷಕರನ್ನು ಕೋವಿಡ್ ವಾರಿಯರ್ಸ್‌ ಎಂದು ಪರಿಗಣಿಸಬೇಕು. ಮೃತ ಶಿಕ್ಷಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಎಲ್ಲಾ ಶಿಕ್ಷಕರಿಗೂ ಲಸಿಕೆ ಹಾಕಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಚಿದಾನಂದ ಎಂ.ಗೌಡ, ಬಳಗದ ಅಧ್ಯಕ್ಷ ಹಾಗೂ ಬೆಂಗಳೂರು ವಿ.ವಿ ಸಿಂಡಿಕೇಟ್‌ ಸದಸ್ಯ ಉದಯಕುಮಾರ್, ಆರ್‍ಎಸ್‍ಎಸ್ ತುಮಕೂರು ವಿಭಾಗೀಯ ಸಂಚಾಲಕ್ ಡಾ.ಶಂಕರ್‌ನಾಯಕ್, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೇಶವಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಪುಷ್ಪಾ, ಡಿಡಿಪಿಐ ಕೃಷ್ಣಮೂರ್ತಿ, ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT