ಸೋಮವಾರ, ಜುಲೈ 26, 2021
26 °C
ಸಂಸದ ಮುನಿಸ್ವಾಮಿ ವಿರುದ್ಧ ಶಾಸಕ ಶ್ರೀನಿವಾಸಗೌಡ ವಾಗ್ದಾಳಿ

ಬಾಯಿ ಚಪಲದ ಮಾತು ಸರಿಯಲ್ಲ: ಶಾಸಕ ಕೆ.ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯ ಆಧಾರ ಸ್ತಂಭಗಳು. ಅವುಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಬಾಯಿ ಚಪಲಕ್ಕೆ ಮನಬಂದಂತೆ ಮಾತನಾಡುವುದು ಸರಿಯಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅವರು ಸಂಸದ ಎಸ್‌.ಮುನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ಬಡ ಜನರ ವೈದ್ಯಕೀಯ ಚಿಕಿತ್ಸೆಗೆ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಕೋಚಿಮುಲ್‌ ರೈತರ ಜೀವನಾಡಿಯಾಗಿ ಹಾಗೂ ಡಿಸಿಸಿ ಬ್ಯಾಂಕ್‌ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಗಳ ವಿರುದ್ಧ ರಾಜಕೀಯ ದುರುದ್ದೇಶಕ್ಕೆ ಮಾತನಾಡುವುದಲ್ಲ’ ಎಂದರು.

‘ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಮುನಿಸ್ವಾಮಿ ಅವರು ಜಿಲ್ಲೆಯ ಇತಿಹಾಸ ತಿಳಿದು ಮಾತನಾಡಬೇಕು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೇಡ. ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಿರಬೇಕು’ ಎಂದು ಹೇಳಿದರು.

ವಿಶ್ವ ತಲ್ಲಣ: ‘ನಾನು ಹಲವು ವರ್ಷಗಳಿಂದ ಇಫ್ಕೋ ಟೋಕಿಯೊ ಸಂಸ್ಥೆ ಮೂಲಕ ಬಡ ಜನರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುತ್ತಿದ್ದೇನೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಜಿಲ್ಲೆಯಲ್ಲೂ ತಾಂಡವವಾಡುತ್ತಿದ್ದು, ಜನ ಭಯಭೀತರಾಗಿದ್ದಾರೆ. ಈ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಜನ ಮುನ್ನೆಚ್ಚರಿಕೆ ವಹಿಸಿ ಸೋಂಕು ಹರಡುವಿಕೆ ತಡೆಯಬೇಕು’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕಿಗೆ ಜನ ಆತಂಕಪಡಬೇಕಿಲ್ಲ. ಮಾರುಕಟ್ಟೆ, ಅಂಗಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು. ಆಗಾಗ್ಗೆ ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕು. ಸೋಂಕು ತಡೆಗೆ ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರ ರೂಪಿಸಿರುವ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಉಳಿದ ಕಾಯಿಲೆಗಳ ಚಿಕಿತ್ಸೆಗೆ ಇಟಿಸಿಎಂ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಬೇಕು. ಲಾಕ್‌ಡೌನ್ ವಿಚಾರ ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟದ್ದು. ಜಿಲ್ಲಾಧಿಕಾರಿಯು ಸಾಧಕ ಬಾಧಕ ಅವಲೋಕಿಸಿ ತೀರ್ಮಾನ ಮಾಡುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.