ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ: ಬೆಂಬಲ ಬೆಲೆಗೆ ಮನವಿ

Last Updated 17 ಮೇ 2021, 15:08 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ಮತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಕುಸಿದಿದ್ದು, ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಮುಳಬಾಗಿಲು ಶಾಸಕ ಹಾಗೂ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ನಾಗೇಶ್‌ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಲಾಕ್‌ಡೌನ ಸಂಕಷ್ಟದಲ್ಲಿ ಬಹಳಷ್ಟು ಉತ್ಪಾದನಾ ವಲಯಗಳು ಸಮಸ್ಯೆ ಎದುರಿಸುತ್ತಿರುವಂತೆ ಕೃಷಿ ವಲಯ ಸಹ ತೊಂದರೆಗೆ ಸಿಲುಕಿದೆ. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯುವ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ರೈತರಿಗೆ ನ್ಯಾಯಯುತ ಬೆಲೆ ಸಿಗದೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಸುಮಾರು 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಿದೆ. ಪ್ರತಿ ಎಕರೆ ಟೊಮೆಟೊ ಬೆಳೆಗೆ ಸುಮಾರು ₹ 1.50 ಲಕ್ಷ ಖರ್ಚಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಗಣನೀಯವಾಗಿ ಕುಸಿದಿರುವುದರಿಂದ ಬೆಳೆಗೆ ಖರ್ಚು ಮಾಡಿದ ಹಣ ಸಹ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಟೊಮೆಟೊ ಬೆಳೆ ಚೆನ್ನಾಗಿದ್ದು, ರೈತರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು. ಆದರೆ, ಬೆಲೆ ಕುಸಿದಿರುವುದರಿಂದ ರೈತರು ಟೊಮೆಟೊ ಫಸಲನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಸಾಕಷ್ಟು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದು, ಬೆಳೆ ಜಮೀನಿನಲ್ಲೇ ಕೊಳೆಯುತ್ತಿದೆ ಎಂದು ವಿವರಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ವಡ್ಡಹಳ್ಳಿ ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಲೋಡ್‌  ಟೊಮೆಟೊ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರಿಲ್ಲ. ಬಡ್ಡಿ ಸಾಲ ಮಾಡಿ ಟೊಮೆಟೊ ಬೆಳೆದ ರೈತರಿಗೆ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ. ಸರ್ಕಾರ ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT