ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ನಕಲಿ ನಾರು: ರೈತರಿಗೆ ವಂಚನೆ

Last Updated 5 ಜೂನ್ 2021, 14:55 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರ್ಸರಿಯೊಂದರಲ್ಲಿ ಕಳಪೆ ಗುಣಮಟ್ಟದ ಟೊಮೆಟೊ ನಾರು ಮಾರಾಟ ಮಾಡಿ ಶೆಟ್ಟಿಗಾನಹಳ್ಳಿಯ ರೈತರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಮಂಗಸಂದ್ರ ಗ್ರಾಮದ ಶ್ರೀ ಸಾಯಿ ನರ್ಸರಿಯಿಂದ ಶೆಟ್ಟಿಗಾನಹಳ್ಳಿಯ ರೈತರಾದ ಸಂತೋಷ್ ಮತ್ತು ಶ್ರೀನಾಥ್ ಅವರು ಸಾಹೋ ತಳಿಯ ಟೊಮೆಟೊ ನಾರು ಖರೀದಿಸಿಕೊಂಡು ಬಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿ ವಂಚನೆಗೆ ಒಳಗಾಗಿದ್ದಾರೆ.

ಈ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ 2 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಇದೀಗ ಜಮೀನಿನ ತುಂಬೆಲ್ಲಾ ಗಿಡಗಳು ಜೇಡೆ ಹಣ್ಣಿನ ಆಕಾರದ ಟೊಮೆಟೊ ಬಿಟ್ಟಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಸಂತೋಷ್ ಮತ್ತು ಶ್ರೀನಾಥ್ ಅವರು ಜೇಡೆ ಹಣ್ಣಿನ ಆಕಾರದ ಟೊಮೆಟೊ ಕೊಯ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಈ ಇಬ್ಬರು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದು, ಬೆಳೆ ಜಮೀನಿನಲ್ಲೇ ಕರಗುತ್ತಿದೆ.

‘ನರ್ಸರಿ ಮಾಲೀಕರು ನಕಲಿ ನಾರು ಕೊಟ್ಟು ನಮಗೆ ವಂಚಿಸಿದ್ದಾರೆ. ಈ ಸಂಬಂಧ ಸಾಹೋ ಕಂಪನಿ ಪ್ರತಿನಿಧಿಗಳಿಗೆ ಮಾಹಿತಿ ಕೊಟ್ಟು ಜಮೀನಿಗೆ ಕರೆದುಕೊಂಡು ಜೀಡೆ ಹಣ್ಣಿನ ಆಕಾರದ ಟೊಮೆಟೊ ತೋರಿಸಿದಾಗ ಅವರು ಇದು ತಮ್ಮ ಕಂಪನಿಯದ್ದಲ್ಲ. ನರ್ಸರಿಯವರು ತಮ್ಮ ಕಂಪನಿ ಹೆಸರೇಳಿಕೊಂಡು ಮೋಸ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು’ ಎಂದು ರೈತರಾದ ಸಂತೋಷ್‌ ಮತ್ತು ಶ್ರೀನಾಥ್ ತಿಳಿಸಿದರು.

ಕಡಿವಾಣ ಹಾಕಬೇಕು: ರೈತರಿಗೆ ಆಗಿರುವ ವಂಚನೆ ಸಂಬಂಧ ‘ಪ್ರಜಾವಾಣಿ’ಯು ಶ್ರೀ ಸಾಯಿ ನರ್ಸರಿ ಮಾಲೀಕ ಕೇಶವಮೂರ್ತಿ ಅವರನ್ನು ಸಂಪರ್ಕಿಸಿದಾಗ, ‘ಟೊಮೆಟೊ ನಾರು ನಾನು ತಯಾರು ಮಾಡಿದ್ದಲ್ಲ. ನಾನು ಹೊರಗಡೆಯಿಂದ ತಂದು ಶೆಟ್ಟಿಗಾನಹಳ್ಳಿಯ ರೈತರಿಗೆ ಮಾರಾಟ ಮಾಡಿದ್ದೇನೆ. ಟೊಮೆಟೊ ಗಿಡಗಳು ಜೀಡೆ ಹಣ್ಣಿನ ಆಕಾರದಲ್ಲಿ ಹಣ್ಣು ಬಿಟ್ಟರೆ ನಾನೇನು ಮಾಡಲಿ?’ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನರ್ಸರಿಗಳು ರೈತರಿಗೆ ನಕಲಿ ನಾರು ಹಾಗೂ ಸಸಿ ಕೊಟ್ಟು ವಂಚಿಸುತ್ತಿವೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನಹರಿಸಿ ನರ್ಸರಿಗಳ ವಂಚನೆಗೆ ಕಡಿವಾಣ ಹಾಕಬೇಕೆಂದು ಶೆಟ್ಟಿಗಾನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT