ಕೋಲಾರ: ಇಳುವರಿ ಕುಸಿತ, ಮಾರುಕಟ್ಟೆಯಲ್ಲಿ ತಗ್ಗಿದ ಆವಕ ಮತ್ತು ಹೊರರಾಜ್ಯಗಳಿಂದ ಕುದುರಿದ ಬೇಡಿಕೆಯಿಂದಾಗಿ 15 ದಿನಗಳಿಂದ ಟೊಮೆಟೊ ಧಾರಣೆ ಏರುಗತಿಯಲ್ಲಿ ಸಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ ಉತ್ತಮ ಗುಣಮಟ್ಟದ 15 ಕೆ.ಜಿ. ತೂಕದ ಬಾಕ್ಸ್ ಟೊಮೆಟೊಗೆ ₹1 ಸಾವಿರಕ್ಕೂ ಹೆಚ್ಚು ದರ ಸಿಗುತ್ತಿದೆ. ವಾರದ ಹಿಂದೆಯಷ್ಟೇ ಈ ಬೆಲೆ ₹550 ಇತ್ತು. ಕಳೆದ ತಿಂಗಳು ಕೇವಲ ₹200ಕ್ಕೆ 15 ಕೆ.ಜಿ. ಬಾಕ್ಸ್ ಟೊಮೆಟೊ ಹರಾಜಾಗಿತ್ತು.
ಈ ಬಾರಿ ಟೊಮೆಟೊ ಫಸಲು ಕಡಿಮೆ ಆಗಿದೆ. ಟೊಮೆಟೊ ಖರೀದಿಗೆಂದು ಹೊರರಾಜ್ಯದ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಕೋಲಾರ ಮಾರುಕಟ್ಟೆಗೆ ಬರುತ್ತಿದ್ದಾರೆ. ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಗುಜರಾತ್, ಛತ್ತೀಸಗಡ, ರಾಜಸ್ಥಾನದಿಂದ ಹೆಚ್ಚಿನ ವರ್ತಕರು ಟೊಮೆಟೊ ಖರೀದಿಸಲು ಬರುತ್ತಿದ್ದಾರೆ. ಪ್ರತಿದಿನ ಇಲ್ಲಿಂದ 40ಕ್ಕೂ ಅಧಿಕ ಲಾರಿ ಲೋಡ್ ಟೊಮೆಟೊ ಹೊರ ರಾಜ್ಯಗಳಿಗೆ ಹೋಗುತ್ತಿದೆ. ಬಕ್ರೀದ್ ಕೂಡ ಸಮೀಪದಲ್ಲಿದ್ದು ಬೇಡಿಕೆ ಹೆಚ್ಚಿದೆ.
‘ಊಜಿ ರೋಗದ ಕಾರಣ ಈ ಬಾರಿ ಟೊಮೆಟೊ ಇಳುವರಿ ಕಡಿಮೆ ಆಗಿದೆ. ಗುಣಮಟ್ಟ ತಗ್ಗಿದೆ. ಜೊತೆಗೆ ಹೊರರಾಜ್ಯಗಳ ವರ್ತಕರಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿದೆ’ ಎಂದು ಕೋಲಾರ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ ಕುಸಿದ ಟೊಮೆಟೊ ಫಸಲು ಹೊರರಾಜ್ಯಗಳಿಂದ ಹೆಚ್ಚಿದ ಬೇಡಿಕೆ ರೈತರಿಗೆ ಖುಷಿ, ಗ್ರಾಹಕರಿಗೆ ಬಿಸಿ
ಜಿಲ್ಲೆಯಲ್ಲಿ ಟೊಮೆಟೊ ಇಳುವರಿ ಕುಸಿತವಾಗಿದೆ. ಬೇರೆ ರಾಜ್ಯಗಳಲ್ಲೂ ಸಂಗ್ರಹ ಇಲ್ಲ. ಹೀಗಾಗಿ ನಮ್ಮ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ಧಾರಣೆಯಲ್ಲಿ ಏರಿಕೆ ಆಗುತ್ತಿದೆ ವಿಜಯಲಕ್ಷ್ಮಿ ಕೋಲಾರ ಎಪಿಎಂಸಿ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.