ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಯಣ್ಣ ತರ್ತಾನೆ ಮಾವಿನ ಹಣ್ಣ!

ಕೋವಿಡ್‌–ಲಾಕ್‌ಡೌನ್‌ ಹಿನ್ನೆಲೆ: ಜನರ ಮನೆ ಬಾಗಿಲಿಗೆ ಪಾರ್ಸೆಲ್‌ ಸೇವೆ
Last Updated 1 ಜೂನ್ 2021, 13:07 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಈ ಬಾರಿ ಮಾವಿನ ಋತು ಕಳೆಗುಂದಿದ್ದರೂ ಅಂಚೆ ಇಲಾಖೆ ಮೂಲಕ ಮಾವು ಪ್ರಿಯರಿಗೆ ರುಚಿಕರ ಮಾವು ತಲುಪಿಸುವ ಪ್ರಯತ್ನ ಆರಂಭವಾಗಿದೆ.

ಹಣ್ಣುಗಳ ರಾಜ ಮಾವಿಗೆ ಮನಸೋಲದವರಿಲ್ಲ. ಪ್ರತಿ ವರ್ಷ ಮಾವಿನ ಋತು ಬಂದಾಗ ಕೆ.ಜಿಗಟ್ಟಲೇ ಹಣ್ಣು ಖರೀದಿಸಿ ಸವಿಯುವ ಮಂದಿಗೆ ಈ ಬಾರಿ ಕೋವಿಡ್‌ ಅಡ್ಡಿಯಾಗಿದೆ. ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರ ಬಂದು ಮಾವು ಖರೀದಿಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (ಕೆಎಸ್‌ಎಂಡಿಎಂಸಿ) ಅಂಚೆ ಇಲಾಖೆ ನೆರವಿನೊಂದಿಗೆ ಜನರ ಮನೆ ಬಾಗಿಲಿಗೆ ಇಷ್ಟದ ಮಾವಿನ ಹಣ್ಣು ತಲುಪಿಸಲು ಮುಂದಾಗಿದೆ. ಹಿಂದಿನ ವರ್ಷ ಮೊದಲ ಲಾಕ್‌ಡೌನ್‌ ಸಂದರ್ಭದಲ್ಲೂ ಅಂಚೆ ಮೂಲಕ ಜನರಿಗೆ ಮಾವಿನ ಹಣ್ಣು ರವಾನಿಸಿ ಯಶಸ್ಸು ಕಂಡಿದ್ದ ಕೆಎಸ್‌ಎಂಡಿಎಂಸಿ ಮತ್ತೊಮ್ಮೆ ಆ ಪ್ರಯತ್ನ ಆರಂಭಿಸಿದೆ.

ಜಿಲ್ಲೆಯು ಮಾವು ಬೆಳೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ.

ಪ್ರಸಕ್ತ ಹಂಗಾಮಿನಲ್ಲಿ ಸುಮಾರು 2.75 ಲಕ್ಷ ಟನ್‌ ಮಾವಿನ ಫಸಲು ನಿರೀಕ್ಷಿಸಲಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾವು ವಹಿವಾಟು ಆರಂಭವಾಗಿದೆ. ಆದರೆ, ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಮಾವಿನ ಬೆಲೆ ಇಳಿಕೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್‌ ಸಂಕಷ್ಟದಲ್ಲಿ ಆನ್‌ಲೈನ್‌ ಮೂಲಕ ನಡೆಯುವ ಮಾವು ವಹಿವಾಟು ರೈತರಿಗೆ ಲಾಭದಾಯಕವಾಗಿದೆ. ಮತ್ತೊಂದೆಡೆ ಗ್ರಾಹಕರಿಗೂ ಅನುಕೂಲವಾಗಿದೆ. ಕೆಎಸ್‌ಎಂಡಿಎಂಸಿ ಜತೆ ಒಪ್ಪಂದ ಮಾಡಿಕೊಂಡಿರುವ ಅಂಚೆ ಇಲಾಖೆಯು ವಾರದಲ್ಲಿ 2 ದಿನ (ಮಂಗಳವಾರ ಮತ್ತು ಶುಕ್ರವಾರ) ಪಾರ್ಸೆಲ್‌ ಸೇವೆ ಮೂಲಕ ಜನರಿಗೆ ಮಾವಿನ ಹಣ್ಣು ತಲುಪಿಸಲು ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದೆ. ಈ ಸೇವೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ.

ರೈತರ ನೋಂದಣಿ: ಅಂಚೆ ಸೇವೆ ಮೂಲಕ ಮಾವು ಮಾರಾಟ ಮಾಡಲು ಜಿಲ್ಲೆಯ 100ಕ್ಕೂ ಹೆಚ್ಚು ರೈತರು ಕೆಎಸ್‌ಎಂಡಿಎಂಸಿಯ www.karsirimangoes.karnataka.gov.in ವೆಬ್‌ಸೈಟ್‌ ವಿಳಾಸದಲ್ಲಿ ಹೆಸರು ನೋಂದಾಯಿಸಿದ್ದಾರೆ. ಈ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಮಾವಿನ ತಳಿಗಳು, ಬೆಲೆ ಮತ್ತು ಮೊಬೈಲ್‌ ಸಂಖ್ಯೆಯ ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದಾರೆ.

ಮಾವು ಪ್ರಿಯರು ಈ ವೆಬ್‌ಸೈಟ್‌ ವಿಳಾಸಕ್ಕೆ ಲಾಗಿನ್‌ ಆಗಿ ತಮ್ಮ ಮನೆಯ ವಿಳಾಸ ನಮೂದಿಸಿ ತಮ್ಮಿಷ್ಟದ ಹಣ್ಣಿಗೆ ಬೇಡಿಕೆ ಸಲ್ಲಿಸಬಹುದು. ಕನಿಷ್ಠ 3 ಕೆ.ಜಿ ಮಾವು ಖರೀದಿಸಬೇಕಿದ್ದು, ಒಂದೊಂದು ತಳಿಯ ಹಣ್ಣಿನ ಬೆಲೆ ಬೇರೆ ಬೇರೆಯಾಗಿದೆ. ಗ್ರಾಹಕರು ಆಯ್ಕೆ ಮಾಡುವ ತಳಿ ಮತ್ತು ತೂಕದ ಪ್ರಮಾಣದ ಆಧಾರದಲ್ಲಿ ಬೆಲೆ ನಿಗದಿಯಾಗುತ್ತದೆ. ಇದರಲ್ಲಿ ಪಾರ್ಸಲ್‌ ಸೇವಾ ಶುಲ್ಕವೂ ಸೇರಿರುತ್ತದೆ. ಗ್ರಾಹಕರು ಆನ್‌ಲೈನ್‌ನಲ್ಲೇ ಹಣ ಪಾವತಿಸಬೇಕು.

ವಿಳಾಸ ರವಾನೆ: ಗ್ರಾಹಕರು ತಮ್ಮ ಇಷ್ಟದ ಹಣ್ಣು ಆಯ್ಕೆ ಮಾಡಿದಾಗ ಅದರ ದರ ಮತ್ತು ಅಂಚೆ ಸೇವಾ ಶುಲ್ಕದ ಮಾಹಿತಿ ಲಭ್ಯವಾಗುತ್ತದೆ. ಹೀಗೆ ಗ್ರಾಹಕರು ಆಯ್ಕೆ ಮಾಡಿದ ಹಣ್ಣಿನ ತಳಿ, ತೂಕ ಮತ್ತು ಮನೆ ವಿಳಾಸದ ವಿವರವು ಇ–ಮೇಲ್‌ ಮೂಲಕ ಅಂಚೆ ಇಲಾಖೆ ಹಾಗೂ ಸಂಬಂಧಪಟ್ಟ ರೈತರಿಗೆ ರವಾನೆಯಾಗುತ್ತದೆ. ಬಳಿಕ ರೈತರು ಮಾವಿನ ಹಣ್ಣುಗಳನ್ನು ಪ್ಯಾಕ್‌ ಮಾಡಿ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಗೆ ರವಾನಿಸುತ್ತಾರೆ. ಅಲ್ಲಿಂದ ಅಂಚೆಯಣ್ಣನ ಮೂಲಕ ಹಣ್ಣುಗಳು ಗ್ರಾಹಕರ ಕೈ ಸೇರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT