ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ಉಳ್ಳೇರಹಳ್ಳಿ ಚಲೋ

ಬಾಲಕನಿಗೆ ದಂಡ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
Last Updated 23 ಸೆಪ್ಟೆಂಬರ್ 2022, 4:28 IST
ಅಕ್ಷರ ಗಾತ್ರ

ಕೋಲಾರ: ‘ಉಳ್ಳೇರಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಬಾಲಕನಿಗೆ ಥಳಿಸಿ, ದಂಡ ವಿಧಿಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಸಂತ್ರಸ್ತ ಮಹಿಳೆಗೆ ಕಾಯಂ ಹುದ್ದೆ ಕಲ್ಪಿಸಿ ಮನೆ ನಿರ್ಮಿಸಿಕೊಡಬೇಕು ಹಾಗೂ ಬಾಲಕನಿಗೆ ಉನ್ನತ ಶಿಕ್ಷಣದವರಿಗೆ ಉಚಿತ ಶಿಕ್ಷಣ ಕೊಡಬೇಕು’ ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆ ಮುಖಂಡರು, ಸದಸ್ಯರುಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ನಗರದ ನಚಿಕೇತನ ನಿಲಯದ ಬಳಿ ಜಮಾವಣೆಗೊಂಡು ಅಲ್ಲಿಂದ ಮೆಕ್ಕೆ ವೃತ್ತಕ್ಕೆ ಮೆರವಣಿಗೆ ಬಂದು ಮಾನವ ಸರಪಳಿ ರಚಿಸಿದರು. ಸರ್ಕಾರ ಹಾಗೂ ಆರೋಪಿಗಳ ವಿರುದ್ಧ ಘೋಷಣೆ ಕೂಗಿದರು.

ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ವಿ.ನಾಗರಾಜ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸೆ.25ರಂದು ಟೇಕಲ್‌ ರೈಲ್ವೆ ನಿಲ್ದಾಣದಿಂದ ಉಳ್ಳೇರಹಳ್ಳಿಗೆ ಕಾಲ್ನಡಿಗೆಯ ಬೃಹತ್‌ ಜಾಥಾ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಸಂತ್ರಸ್ತ ಕುಟುಂಬಕ್ಕೆ ನೈತಿಕ ಶಕ್ತಿ ತುಂಬಲು ಕರೆ
ನೀಡಿದರು.

ಜನವಾದಿ ಮಹಿಳೆ ಸಂಘಟನೆಯ ವಿ.ಗೀತಾ ಮಾತನಾಡಿ, ‘ದೇವರ ಕೋಲು ಮುಟ್ಟಿದ್ದಕ್ಕೆ ಬಾಲಕನಿಗೆ ದಂಡ ವಿಧಿಸಿ, ಹಲ್ಲೆ ನಡೆಸಿ ಬಹಿಷ್ಕಾರದ ಬೆದರಿಕೆ ಹಾಕಿರುವುದು ಖಂಡನೀಯ. ಕುಟುಂಬಕ್ಕೆ ಪರಿಹಾರ ನೀಡುವ ಜತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

ದಸಂಸ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ‘ಗ್ರಾಮದಲ್ಲಿ ದಲಿತರನ್ನು ನಡೆಸಿಕೊಳ್ಳುವಂಥ ವ್ಯವಸ್ಥೆ ಬದಲಾಗಬೇಕಿದೆ. ಆ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಉಳ್ಳೇರಹಳ್ಳಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾನ ಮನಸ್ಕರು ಕೈಜೋಡಿಬಹುದಾಗಿದೆ. ಎಲ್ಲ ದೇವಾಲಯಗಳ ಮುಂದೆ ಎಲ್ಲರಿಗೂ ಮುಕ್ತ ಪ್ರವೇಶ ಎಂಬ ಫಲಕ ಅಳವಡಿಸಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಸಂಘಟನೆ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಟಿ.ವಿಜಯಕುಮಾರ್‌, ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ, ಸಿಪಿಐಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಯುವಶಕ್ತಿ ಸಂಘಟನೆ ಮುಖಂಡ ಸುಬ್ಬು, ನಗರಸಭೆ ಸದಸ್ಯ ಅಂಬರೀಷ್‌, ವಾಲ್ಮೀಕಿ ಮುಖಂಡ ಬಾಲಗೋವಿಂದ, ಜನಾಧಿಕಾರ ಪ್ರಧಾನ ಕಾರ್ಯದರ್ಶಿ ಹೂವರಸನಳ್ಳಿ ರಾಜಪ್ಪ, ಅಧ್ಯಕ್ಷ ಸಿ.ವಿ.ನಾಗರಾಜ್‌, ರೈತ ಸಂಘದ ಮಹಿಳಾ ಜಿಲ್ಲಾ ಅಧ್ಯಕ್ಷೆ ನಳಿನಿ, ಗಮನ ಮಹಿಳೆ ಸಂಘದ ಶಾಂತಮ್ಮ, ಈ–ನೆಲ ಈ–ಜಲ ಸಂಘಟನೆಯ ವೆಂಕಟಾಚಲಪತಿ, ವಕೀಲ ಸತೀಶ್‌, ಸಿಪಿಐಎಂ ಮುಖಂಡ ವೆಂಕಟ ರಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT