ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಕೊರತೆ: ಜನರ ಅಲೆದಾಟ

ದಾಸ್ತಾನು ಸಂಪೂರ್ಣ ಖಾಲಿ: ಮೊದಲ ಡೋಸ್‌ ನೀಡಿಕೆ ಸ್ಥಗಿತ
Last Updated 12 ಮೇ 2021, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಬುಧವಾರದಿಂದ ಕೋವಿಡ್‌ ಲಸಿಕೆ ಕೊರತೆ ಎದುರಾಗಿದ್ದು, ಜನರು ಲಸಿಕೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಆರ್ಭಟದಿಂದ ಆತಂಕಗೊಂಡಿರುವ ಜನರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಒಟ್ಟಾರೆ 75 ಕಡೆ ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಬಹುಪಾಲು ಕೇಂದ್ರಗಳಲ್ಲಿ ಲಸಿಕೆ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ.

ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 18 ವರ್ಷದಿಂದ 44 ವರ್ಷದವರೆಗಿನ ವ್ಯಕ್ತಿಗಳಿಗೆ ಲಸಿಕೆ ನೀಡದಂತೆ ಮಂಗಳವಾರ ಆದೇಶ ಹೊರಡಿಸಿದೆ. ಜತೆಗೆ 45 ವರ್ಷ ಮೀರಿದವರಿಗೂ ಮೊದಲ ಡೋಸ್‌ ಲಸಿಕೆ ನೀಡದಂತೆ ಸೂಚಿಸಿದೆ. ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದಿರುವ ಸುಮಾರು 1.90 ಲಕ್ಷ ಜನರು 2ನೇ ಡೋಸ್‌ಗೆ ಕಾಯುತ್ತಿದ್ದಾರೆ.

ಈ ನಡುವೆ ಕಳೆದೆರಡು ದಿನಗಳಲ್ಲಿ ಲಸಿಕೆಗಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜಿಲ್ಲೆಗೆ ಜನಸಾಗರವೇ ಹರಿದುಬಂದಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ ಬೆಂಗಳೂರಿನ ಸಾವಿರಾರು ಮಂದಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದಿದ್ದಾರೆ. ಬುಧವಾರ ಸಹ ಬೆಂಗಳೂರಿನಿಂದ ಬಂದ ಸಾಕಷ್ಟು ಮಂದಿ ಲಸಿಕೆ ಸಿಗದೆ ನಿರಾಶೆಯಿಂದ ಹಿಂದಿರುಗಿದರು.

ಸೋಮವಾರ (ಮೇ 10) ಮತ್ತು ಮಂಗಳವಾರ (ಮೇ 11) ಒಟ್ಟಾರೆ ಜಿಲ್ಲೆಯಲ್ಲಿ 18 ವರ್ಷದಿಂದ 44 ವರ್ಷದೊಳಗಿನ 1,200ಕ್ಕೂ ಹೆಚ್ಚು ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಹೊರ ಜಿಲ್ಲೆಯವರಿಗೆ ಲಸಿಕೆ ನೀಡಿದ ಬಗ್ಗೆ ಸ್ಥಳೀಯ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಜಿಲ್ಲಾಡಳಿತವು ಮೊದಲ ಡೋಸ್‌ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಜತೆಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ಜನರ ಸಾಲು: ಮೊದಲನೇ ಡೋಸ್‌ ಲಸಿಕೆ ಪಡೆದ ನಂತರ 2ನೇ ಡೋಸ್‌ ಪಡೆಯಲು 30ರಿಂದ 42 ದಿನಗಳ ಅಂತರ ನಿಗದಿಪಡಿಸಲಾಗಿದೆ. ಈ ಕಾಲಾವಧಿ ಮುಗಿದರೂ 2ನೇ ಡೋಸ್‌ ಲಸಿಕೆ ಸಿಗುತ್ತಿಲ್ಲ. ಲಸಿಕೆಗಾಗಿ ಜನರು ಆಸ್ಪತ್ರೆಗಳ ಮುಂದೆ ಗಂಟೆಗಟ್ಟಲೇ ಕಾಯುವಂತಾಗಿದೆ.

ಲಸಿಕಾ ಕೇಂದ್ರಗಳು ಬಾಗಿಲು ತೆರೆಯುವುದಕ್ಕೂ ಮುನ್ನವೇ ಜನರು ಬೆಳಿಗ್ಗೆಯೇ ಕೇಂದ್ರಗಳ ಬಳಿ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲೂ ಇದೇ ಪರಿಸ್ಥಿತಿಯಿದೆ. ಲಸಿಕೆ ಕೇಂದ್ರಗಳ ಮುಂದೆ ಜನರ ಸಾಲು ಸಾಮಾನ್ಯವಾಗಿದೆ. ಲಸಿಕೆ ಸಿಗದೆ ರೋಸಿ ಹೋಗಿರುವ ಜನರು ಸರ್ಕಾರವನ್ನು ಶಪಿಸುತ್ತಿದ್ದಾರೆ.

ಸಿಬ್ಬಂದಿಗೆ ಒತ್ತಡ: ಲಸಿಕೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಬೇಸರಗೊಂಡ ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿಸಿ ಲಸಿಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಸಿಬ್ಬಂದಿಯೂ ಒತ್ತಡಕ್ಕೆ ಮಣಿದು ಆಯ್ದ ಕೆಲವರಿಗೆ ಕದ್ದುಮುಚ್ಚಿ ಲಸಿಕೆ ಕೊಡುತ್ತಿದ್ದಾರೆ. ಇದು ಸಂಘರ್ಷಕ್ಕೆ ದಾರಿ ಮಾಡಿ ಕೊಡುತ್ತಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಗೆ ಭಾನುವಾರ (ಮೇ 9) ಕಡೆಯ ಬಾರಿಗೆ ಕೋವಿಶೀಲ್ಡ್‌ ಲಸಿಕೆ ಪೂರೈಕೆಯಾಗಿತ್ತು. ನಂತರ ಸತತ 3 ದಿನದಿಂದ ಲಸಿಕೆ ಪೂರೈಸದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಸದ್ಯದಲ್ಲೇ ಲಸಿಕೆ ಪೂರೈಕೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT