ಭಾನುವಾರ, ಜನವರಿ 19, 2020
26 °C
ಗ್ರಾಮದ ರಾಜ ಬೀದಿಗಳಲ್ಲಿ ದೇವರ ಉತ್ಸವ, ದೊಡ್ಡ ಗರುಡೋತ್ಸವ ಆಚರಣೆ

ಶ್ರೀನಿವಾಸಪುರ: ರೋಣೂರಿನಲ್ಲಿ ವೈಕುಂಠ ಸಂಭ್ರಮ

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

prajavani

ಶ್ರೀನಿವಾಸಪುರ: ತಾಲ್ಲೂಕಿನ ರೋಣೂರು ಗ್ರಾಮದಲ್ಲಿರುವ ಪುರಾತನವಾದ ಲಕ್ಷ್ಮಿ
ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಜಯ ನಗರದ ಅರಸರ ಆಳ್ವಿಕೆಯ ಕಾಲಕ್ಕೆ ಸೇರಿದ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ನೋಡಲು ಸುಂದರವಾಗಿದೆ.

ದೇವಾಲಯದ ಎತ್ತರವಾದ ಮಹಾದ್ವಾರ, ವಿಮಾನ ಗೋಪುರ, ಗಾರೆಯಿಂದ ರಚಿಸಲಾಗಿರುವ ದೇವ ದೇವಿಯರ ಮೂರ್ತಿಗಳು, ಸುಮಾರು 3 ಅಡಿ ಎತ್ತರದ ವೆಂಕಟರಮಣಸ್ವಾಮಿ ವಿಗ್ರಹ ನೋಡಲು ಆಕರ್ಷಣೀಯವಾಗಿವೆ.

ದೇವಾಲಯದಲ್ಲಿ ಗೋದಾದೇವಿ, ಅಲಮೇಲು ಮಂಗಮ್ಮ ಅವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಆಕರ್ಷಕ ರಥ ಹಾಗೂ ಮಹಾದ್ವಾರ ನಿರ್ಮಿಸಲಾಗಿದೆ. 1884ರಲ್ಲಿ ಬಂಗಾರಪೇಟೆಯ ಗೊಲ್ಲಪಲ್ಲಿ ನೇಸರ್ಲ ರಾಮಯ್ಯಶೆಟ್ಟಿ ಎಂಬುವವರು ದೇವಾಲಯದ ರಾಜಗೋಪುರ ನಿರ್ಮಿಸಿ, ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕೆಂದು ಧರ್ಮಛತ್ರ ಕಟ್ಟಿಸಿದ್ದಾರೆ.


ದೇವಾಲಯದ ಆಕರ್ಷಕ ವಿಮಾನ ಗೋಪುರ

ಮಾರ್ಗಶಿರ ಶುದ್ಧ ಹುಣ್ಣಿಮೆಯಂದು ಇಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಬರುವ ಜನರು ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ತಾಲ್ಲೂಕು ಕೇಂದ್ರವಾದ ಶ್ರೀನಿವಾಸಪುರಕ್ಕೆ ಹತ್ತಿರದಲ್ಲಿರುವ ಈ ಗ್ರಾಮದ ದೇವಾಲಯ ಇತ್ತೀಚಿನ ದಿನಗಳಲ್ಲಿ ಅಧ್ಯಾತ್ಮ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿದೆ. ದೇವಾಲಯದ ಮುಂದೆ ನಿರ್ಮಿಸಲಾಗಿರುವ ವಿಶಾಲವಾದ ಸಭಾಂಗಣದಲ್ಲಿ ಹರಿದಾಸರ ಕೀರ್ತನೆಗಳ ಗಾಯನ, ಶಾಸ್ತ್ರೀಯ ಸಂಗೀತ, ಯೋಗಾಭ್ಯಾಸ, ಧಾರ್ಮಿಕ ಪ್ರವಚನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ವೈಕುಂಠ ಏಕಾದಶಿ ಆಚರಣೆ ದೇವಾಲಯದ ವಿಶೇಷ. ಈ ದಿನದಂದು ವೆಂಕಟರಮಣಸ್ವಾಮಿಯ ದರ್ಶನ ಪಡೆಯುವುದು ಒಳ್ಳೆಯದು ಎಂಬ ಭಾವನೆ ಜನರಲ್ಲಿರುವುದರಿಂದ, ಈ ಧಾರ್ಮಿಕ ಆಚರಣೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವೈಕುಂಠ ಏಕಾದಶಿಯಂದು ದೇವಾಲಯದಲ್ಲಿ ವಿಶೇಷವಾಗಿ ವೈಕುಂಠ ದ್ವಾರ ನಿರ್ಮಿಸಿ, ಅದರ ಮೂಲಕ ಭಕ್ತರನ್ನು ದೇವರ ದರ್ಶನಕ್ಕೆ ಬಿಡಲಾಗುತ್ತದೆ.

ದೇವರ ದರ್ಶನ ಪಡೆದ ಪ್ರತಿಯೊಬ್ಬರಿಗೂ ದೇವಾಲಯದಿಂದ ಪ್ರಸಾದ ರೂಪದಲ್ಲಿ ಉಚಿತವಾಗಿ ಲಾಡು ನೀಡಲಾಗುವುದು. ದಾನಿಗಳ ನೆರವಿನಿಂದ ಸಾಮೂಹಿಕ ಊಟದ ವ್ಯವಸ್ಥೆ ಮಾಡಲಾಗುವುದು. ಕೆಲವು ಭಕ್ತರೂ ಸಹ ಉಚಿತವಾಗಿ ಲಾಡು ವಿತರಣೆ ಮಾಡುವುದುಂಟು. ವೈಕುಂಠದ್ವಾರ ದರ್ಶನ, ಪ್ರಾಕಾರೋತ್ಸವ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಹರಿಕಥಾ ಕಾಲಾಕ್ಷೇಪದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ದ್ವಾದಶಿಯಂದು ಗ್ರಾಮದ ರಾಜ ಬೀದಿಗಳಲ್ಲಿ ದೇವರ ಉತ್ಸವ, ದೊಡ್ಡ ಗರುಡೋತ್ಸವ ನಡೆಸಲಾಗುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗುವುದು.

ಅರ್ಜುನ ನಿರ್ಮಿಸಿದ ದೇಗುಲ

ಸ್ಥಳ ಪುರಾಣ ಹೇಳುವಂತೆ, ಈ ದೇವಾಲಯವನ್ನು ಮಹಾ ಭಾರತದ ಕಾಲದಲ್ಲಿ ಅರ್ಜುನನು ನಿರ್ಮಿಸಿ, ವಿಗ್ರಹ ಪ್ರತಿಷ್ಠಾಪನೆ ಮಾಡಿದ. ಅನಂತರ ಅರ್ಜುನನ ಮೊಮ್ಮಗ ಜನಮೇಜಯರಾಜ ದೇವಾಲಯದ ಜೀರ್ಣೋದ್ಧಾರ ಮಾಡಿಸಿದ. ಸುಮಾರು 150 ವರ್ಷಗಳ ಹಿಂದೆ ದೇವಾಲಯದ ಗರ್ಭಗುಡಿ ಮತ್ತು ಸುಕನಾಸಿ ಮಾತ್ರ ಇದ್ದವು. ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಯಿತು ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ಮುರಳಿ ಭಟ್ಟರ್‌.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿ, ಪುರಾತನ ದೇವಾಲಯಕ್ಕೆ, ನಾಡಿನ ಹಲವೆಡೆಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆಯುವುದು ಇಲ್ಲಿನ ವಿಶೇಷ. ಇಲ್ಲಿ ವೈಕುಂಠ ಏಕಾದಶಿ ವಿಶೇಷವಾಗಿ ಆಚರಿಸಲ್ಪಡುತ್ತದೆ ಎಂದು ಹೇಳಿದರು. 

ಆಧ್ಯಾತ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ, ಒತ್ತಡ ನಿವಾರಣೆ ಆಗುತ್ತದೆ. ವೈಕುಂಠ ಏಕಾದಶಿ ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದ್ದು, ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತವೆ ಎನ್ನುತ್ತಾರೆ ಪ್ರಥಮ ದರ್ಜೆ ಗುತ್ತಿಗೆದಾರ ರೋಣೂರು ಚಂದ್ರಶೇಖರ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು