ಭಾನುವಾರ, ನವೆಂಬರ್ 29, 2020
25 °C
ಸ್ಕೌಟ್ಸ್– ಗೈಡ್ಸ್ ಸಂಸ್ಥೆ ಜಿಲ್ಲಾ ಆಯುಕ್ತ ಶಂಕರಪ್ಪ ಅಭಿಪ್ರಾಯ

ವಲ್ಲಭಭಾಯಿ ಪಟೇಲ್‌ ಸ್ಫೂರ್ತಿಯ ಸೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ವಿ.ಶಂಕರಪ್ಪ ಬಣ್ಣಿಸಿದರು.

ನೆಹರೂ ಯುವ ಕೇಂದ್ರ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಅಪ್ರತಿಮ ದೇಶಪ್ರೇಮಿ ಮತ್ತು ಹೋರಾಟಗಾರರಾಗಿದ್ದರು’ ಎಂದರು.

‘ಹೈದರಾಬಾದ್‌ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ ವಲ್ಲಭಭಾಯಿ ಪಟೇಲ್‌ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ಅವರ ಶ್ರಮದಿಂದ ಏಕೀಕೃತ ಭಾರತ ನಿರ್ಮಾಣವಾಯಿತು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಕಾಯಿದೆ ಪ್ರಕಾರ ಬ್ರಿಟೀಷರ ಆಳ್ವಿಕೆಯಿಂದ 565 ಸ್ವಯಂ ಆಡಳಿತ ಸಂಸ್ಥಾನಗಳನ್ನು ಬಿಡುಗಡೆ ಮಾಡಿಸಿದರು’ ಎಂದು ವಿವರಿಸಿದರು.

‘ಆಧುನಿಕ ಅಖಿಲ ಭಾರತ ಸೇವೆ ವ್ಯವಸ್ಥೆ ಸ್ಥಾಪಿಸಿದ ವಲಭಭಾಯಿ ಪಟೇಲ್‌ ಅವರನ್ನು ಭಾರತದ ನಾಗರಿಕ ಸೇವಕರ ಪೋಷಕ ಸಂತ ಎಂದು ಕರೆಯಲಾಗುತ್ತದೆ. ಜರ್ಮನಿಯ ಬಿಸ್ಮಾರ್ಕ್‌ನಂತೆ ಆಧುನಿಕ ಭಾರತದ ಏಕೀಕರಣದ ಮಹಾನ್ ಶಿಲ್ಪಿಯಾಗಿರುವ ಅವರು ಯುವ ಜನತೆಗೆ ಸ್ಫೂರ್ತಿಯ ಸೆಲೆ. ಅವರ ಆದರ್ಶ ಮತ್ತು ದೇಶ ಪ್ರೇಮ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು’ ಎಂದು ಆಶಿಸಿದರು.

‘ವಲ್ಲಭಭಾಯಿ ಪಟೇಲ್‌ ಅವರಿಗೆ ಇತಿಹಾಸದಲ್ಲಿ ಸಲ್ಲಬೇಕಾದ ಗೌರವ ದೊರೆತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪಟೇಲ್‌ರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವಾಗಿ ಘೋಷಿಸಿ ಏಕತಾ ಪ್ರತಿಮೆ ಸ್ಥಾಪಿಸಿದ ಬಳಿಕ ಗೌರವ ದೊರೆತಿದೆ’ ಎಂದು ಅಭಿಪ್ರಾಯಪಟ್ಟರು.

ದಾರಿದೀಪ: ‘ವಲ್ಲಭಭಾಯಿ ಪಟೇಲ್‌ ಅಪ್ರತಿಮ ವ್ಯಕ್ತಿ. ಅವರ ತತ್ವಾದರ್ಶ ಯುವಕ ಯುವತಿಯರಿಗೆ ದಾರಿದೀಪ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅವರು ಸಮಗ್ರತೆ, ಏಕತೆ, ಸಂಘಟನೆ ಹಾಗೂ ಅಧಿಕಾರ ವಿಕೇಂದ್ರೀಕರಣ ಜಾರಿಗೆ ಶ್ರಮಿಸಿದರು’ ಎಂದು ನೆಹರೂ ಯುವ ಕೇಂದ್ರದ ಕಾರ್ಯಕ್ರಮ ಸಂಘಟಕ ಪ್ರವೀಣ್‌ಕುಮಾರ್‌ ತಿಳಿಸಿದರು.

‘ದೇಶದ ನೂರಾರು ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸುವುದು ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ವಲ್ಲಭಭಾಯಿ ಪಟೇಲ್‌ ಅವರು ಸಮರ್ಥವಾಗಿ ನಿಭಾಯಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಾ ಪ್ರಾಂತ್ಯಗಳನ್ನು ಒಕ್ಕೂಟದ ವ್ಯವಸ್ಥೆಗೆ ತಂದ ಇವರನ್ನು ಭಾರತ ಗಣ ರಾಜ್ಯದ ಜನಕ ಎಂದೇ ಕರೆಯಲಾಗುತ್ತದೆ’ ಎಂದರು.

‘ವಲ್ಲಭಭಾಯಿ ಪಟೇಲ್‌ 1918ರಲ್ಲಿ ಮಹಾತ್ಮ ಗಾಂಧೀಜಿಯ ಸಖ್ಯ ಬೆಳೆಸಿದ ನಂತರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡರು. ನೆಹರೂ ಮತ್ತು ಪಟೇಲ್ ನಡುವಿನ ಭಿನ್ನಾಭಿಪ್ರಾಯಕ್ಕೆ ಗಾಂಧೀಜಿ ಸಂಧಾನಕಾರರಾಗಿದ್ದರು’ ಎಂದು ವಿವರಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಜನಾರ್ದನ್, ಜಿಲ್ಲಾ ಸಂಘಟಕರಾದ ವಿಶ್ವನಾಥ್, ಹೆಚ್ಚುವರಿ ಆಯುಕ್ತ ಸುರೇಶ್, ಜಂಟಿ ಕಾರ್ಯದರ್ಶಿ ಉಮಾದೇವಿ, ಉಪಾಧ್ಯಕ್ಷ ಗೋಪಾಲರೆಡ್ಡಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.