ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣಿಗೆ ಮರುಜೀವ ನೀಡಿದ ಗ್ರಾಮಸ್ಥರು

ಕೋಲದೇವಿ ಗ್ರಾಮದ ಜನರ ಕಾರ್ಯಕ್ಕೆ ಶ್ಲಾಘನೆ
Last Updated 25 ಮಾರ್ಚ್ 2022, 2:42 IST
ಅಕ್ಷರ ಗಾತ್ರ

‌ಮುಳಬಾಗಿಲು: ತಾಲ್ಲೂಕಿನ ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲದೇವಿ ಗ್ರಾಮದ ನಂಜಪ್ಪ ತೋಪಿನಲ್ಲಿರುವ ಕಲ್ಯಾಣಿಗೆ ಗ್ರಾಮಸ್ಥರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಯಕಲ್ಪ ನೀಡಿದ್ದಾರೆ.

ಪುರಾಣ ಪ್ರಸಿದ್ಧ ದೇವಾಲಯದ ಪೂಜಾ ಕಾರ್ಯಗಳಿಗೆ ಬಳಸುತ್ತಿದ್ದ ಆ ಕಲ್ಯಾಣಿ ಭಾಗಶಃ ಕಣ್ಮರೆಯಾಗಿತ್ತು. ಅಂತೆ ಕಂತೆಗಳಿಗೆ ಸೀಮಿತವಾಗುತ್ತಿದ್ದ ಕಲ್ಯಾಣಿಗೆ ಉದ್ಯೋಗ ಖಾತರಿ ಯೋಜನೆಯಡಿ ಮರುಜೀವ ನೀಡಲಾಗಿದೆ.

ಈ ಕಲ್ಯಾಣಿಯು ಗರುಡ ದೇವಾಯಲದಿಂದ ಒಂದು ಕಿ.ಮೀ ದೂರದಲ್ಲಿದೆ. ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದ ಈ ಕಲ್ಯಾಣಿ ಜೀವ ಜಲದಿಂದ ತುಂಬಿ ಗ್ರಾಮದ ಕೇಂದ್ರ ಬಿಂದುವಾಗಿದೆ. ಕಲ್ಯಾಣಿಗೆ ಮತ್ತೆ ಮೆರುಗು ಬಂದಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ಈ ಕಲ್ಯಾಣಿಯ ನೀರನ್ನು ಗರುಡ ದೇವಸ್ಥಾನದ ಪೂಜೆ ಪುನಸ್ಕಾರಗಳಿಗೆ ಬಳಸಲಾಗುತ್ತಿತ್ತು. ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಕಲ್ಯಾಣಿ ಬರುಬರುತ್ತಾ ನಿರ್ಲಕ್ಷ್ಯಕ್ಕೊಳಗಾಯಿತು. ಗಿಡಗಳು ಬೆಳೆದು ಪಾಳು ಬಿದ್ದಿತ್ತು. ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಇದು ತನ್ನ ಸ್ವರೂಪ ಕಳೆದುಕೊಳ್ಳಲಿದೆ ಎಂದು ಅರಿತ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿದರು.

ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಉದ್ಯೋಗ ಖಾತರಿ ಯೋಜನೆಯಡಿ ಸಿಗುವ ಜಲಮೂಲಗಳ ಸಂರಕ್ಷಣಾ ವಿಭಾಗದಲ್ಲಿ ಕಲ್ಯಾಣಿ ದುರಸ್ತಿ ಕಾಮಗಾರಿಗೆ ಬೇಡಿಕೆ ಇಟ್ಟರು. ಸುಮಾರು 33 ಗುಂಟೆ ಜಮೀನು ಹೊಂದಿರುವ ತೋಪಿನಲ್ಲಿ ಅಂದಾಜು ₹ 15 ಲಕ್ಷ ವೆಚ್ಚದಲ್ಲಿ ಕಲ್ಯಾಣಿ ಜೀರ್ಣೋದ್ಧಾರದ ಜೊತೆಗೆ ಸಮುದಾಯ ಉದ್ಯಾನ ನಿರ್ಮಿಸಲು ತೀರ್ಮಾನಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಸುಮಾರು 30 ಮೀ. ಉದ್ದ, 30 ಮೀ. ಅಗಲ, 10 ಮೀ. ಆಳವಿದ್ದು ಅಂದಾಜು 30 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಕಲ್ಯಾಣಿಯ ಅಭಿವೃದ್ಧಿ ಕಾಮಗಾರಿಯಲ್ಲಿ 1,645 ಮಾನವ ದಿನಗಳನ್ನು ಸೃಜಿಸಲಾಗಿದೆ. 240 ಕಾರ್ಮಿಕರು ಬೆಳೆದು ನಿಂತಿದ್ದ ಮುಳ್ಳಿನ ಗಿಡಗಳನ್ನು ಕತ್ತರಿಸಿ, ಹೂಳು ತೆಗೆದು ಹಾಳಾಗಿದ್ದ ಮೆಟ್ಟಿಲುಗಳನ್ನು ಸರಿಪಡಿಸಿದರು. ಹೂಳು ತೆಗೆದ ನಂತರ ನೀರುತುಂಬಿದೆ.

ಇನ್ನು ಕಲ್ಯಾಣಿ ಬಳಿ ಸಮುದಾಯ ಉದ್ಯಾನವನ್ನು ನಿರ್ಮಿಸಲಾಗಿದೆ. ಉದ್ಯಾನ ಪ್ರವೇಶಿಸಲು ಒಂದು ಕಡೆಯಿಂದ ಗೇಟ್ ವ್ಯವಸ್ಥೆ ಮಾಡಿದ್ದು, ಸುತ್ತಲೂ ಕಬ್ಬಿಣದ ಮೆಶ್ ಅಳವಡಿಸಿ ಬಂದೋಬಸ್ತ್ ಮಾಡಲಾಗಿದೆ. ಸುತ್ತಲೂ ಸಸಿಗಳನ್ನು ನೆಟ್ಟಿದ್ದು ವಾಯುವಿಹಾರಿಗಳು ಓಡಾಡಲು ಕಲ್ಲಿನ ಹಾಸು ಹಾಕಲಾಗಿದೆ. ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಲ್ಯಾಣಿ ಈಗ ಸುಂದರ ರೂಪ ಪಡೆದಿದೆ. ಗ್ರಾಮದ ಜನತೆಯ ವಾಯುವಿಹಾರಕ್ಕೆ ಇದು ನೆಚ್ಚಿನ ತಾಣವಾಗಿದೆ.

ಕಲ್ಯಾಣಿಯಲ್ಲಿ ನೀರು ತುಂಬಿರುವುದರಿಂದ ಅಂತರ್ಜಲದ ಮಟ್ಟ ಹೆಚ್ಚಿದ್ದು, ರೈತರಿಗೂ ಅನುಕೂಲವಾಗಿದೆ. ಕೆಲವೊಮ್ಮೆ ಈ ನೀರನ್ನು ದಿನಬಳಕೆಗೂ ಬಳಸುತ್ತೇವೆ. ಇದರ ಬಳಿ ಸಮುದಾಯ ಉದ್ಯಾನ ನಿರ್ಮಾಣದಿಂದ ಮತ್ತಷ್ಟು ಮೆರುಗು ಬಂದಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT