ಮಂಗಳವಾರ, ಜೂನ್ 2, 2020
27 °C
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಹೇಳಿಕೆ

ದಿಗ್ಬಂಧನ ಉಲ್ಲಂಘನೆ: ಶಿಕ್ಷಾರ್ಹ ಅಪರಾಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೊರೊನಾ ಸೋಂಕು ತಡೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ದಿಗ್ಬಂಧನದ ಆದೇಶ ಹಾಗೂ ಸುರಕ್ಷತಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ದಿಗ್ಬಂಧನದ ಆದೇಶ ಧಿಕ್ಕರಿಸಿ ವಿನಾಕಾರಣ ರಸ್ತೆಗೆ ಬರುವುದು ಶಿಕ್ಷಾರ್ಹ ಅಪರಾಧ’ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಹೇಳಿದರು.

ರಾಜ್ಯ ಹೈಕೋರ್ಟ್‌ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೊರೊನಾ ಸೋಂಕು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೋವಿಡ್‌–19 ಸಾಂಕ್ರಾಮಿಕ ರೋಗವಾಗಿದೆ. ಕೊರೊನಾ ಸೋಂಕಿನಿಂದ ಇಡೀ ವಿಶ್ವ ತಲ್ಲಣಗೊಂಡಿದೆ. ವೈದ್ಯಕೀಯ ಜಗತ್ತಿಗೆ ದೊಡ್ಡ ಸವಾಲಾಗಿರುವ ಈ ಸೋಂಕಿನ ತಡೆಗೆ ಸಾರ್ವಜನಿಕರು ಸರ್ಕಾರದ ಜತೆ ಕೈಜೋಡಿಸಬೇಕು. ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ಸಾಧ್ಯವಾದಷ್ಟು ಮನೆಗಳಲ್ಲೇ ಇರಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕು ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈ ಕಾಯಿಲೆಯ ನಿಯಂತ್ರಣಕ್ಕೆ ಮನೆಯೇ ಮದ್ದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ 21 ದಿನಗಳ ದಿಗ್ಬಂಧನ ಘೋಷಿಸಿದೆ. ಜನರು ಪರಿಸ್ಥಿತಿಯ ಗಂಭೀರತೆ ಅರಿಯಬೇಕು. ಅಗತ್ಯ ವಸ್ತುಗಳ ನೆಪದಲ್ಲಿ ಅನಗತ್ಯವಾಗಿ ರಸ್ತೆಗೆ ಬರುವುದು ಸರಿಯಲ್ಲಿ’ ಎಂದು ಕಿವಿಮಾತು ಹೇಳಿದರು.

‘ಜನರು ದಿಗ್ಬಂಧನದ ನಿಯಮ ಮೀರಿ ಮನೆಯಿಂದ ಹೊರ ಬರುವುದರಿಂದ ಆಗುವ ಕಾನೂನಾತ್ಮಕ ಪರಿಣಾಮ ಅರಿಯಬೇಕು. ಸರ್ಕಾರ ಒಂದರಿಂದಲೇ ಸೋಂಕು ತಡೆ ಅಸಾಧ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮಾರುಕಟ್ಟೆ, ಅಂಗಡಿ, ವಾಣಿಜ್ಯ ಪ್ರದೇಶಗಳಲ್ಲಿ ಅನಗತ್ಯವಾಗಿ ಗುಂಪುಗೂಡುವುದು ತಪ್ಪಬೇಕು’ ಎಂದು ಸಲಹೆ ನೀಡಿದರು.

‘ಕೊರೊನಾ ವಿರುದ್ಧ ಸಮಾಜವು ಸಂಘಟಿತ ಹೋರಾಟ ನಡೆಸಬೇಕಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಸಂಬಂಧ ಜನರಿಗೆ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾದ ವಾಹನ ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ. ಜನರು ಹಾನಿಕಾರಕ ಕೊರೊನಾ ಸೋಂಕಿನ ವೈರಸ್‌ ದೇಹ ಪ್ರವೇಶಿಸದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕು’ ಎಂದರು.

ಅಪರಾಧ: ‘ಸರ್ಕಾರದ ದಿಗ್ಬಂಧನ ಆದೇಶ ಉಲ್ಲಂಘಿಸಿ ಮನೆಯಿಂದ ಹೊರ ಬರುವುದು, ರೋಗ ಹರಡುವುದು ಸಾಂಕ್ರಾಮಿಕ ರೋಗ ನಿಯಂತ್ರಣ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 188 ಮತ್ತು 270ರ ಪ್ರಕಾರ ಅಪರಾಧ. ಸಾರ್ವಜನಿಕರಿಗೆ ಈ ಅರಿವು ಅಗತ್ಯ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ವಿವರಿಸಿದರು.

2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶೆ ರೇಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಜಾಲಪ್ಪ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ರಘುಪತಿಗೌಡ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು