ಶುಕ್ರವಾರ, ಅಕ್ಟೋಬರ್ 22, 2021
29 °C
ಪಕ್ಷದ ಕಾರ್ಯಕರ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸೂಚನೆ

ಮತದಾರರ ಪಟ್ಟಿ ಲೋಪ: ಜಾಗೃತಿ ವಹಿಸಿ: ರಾಮಲಿಂಗಾರೆಡ್ಡಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪ್ರತಿ ಬೂತ್‌ ಮಟ್ಟದಲ್ಲಿ ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷ ಪತ್ತೆ ಹಚ್ಚಿ ಹೊಸ ಮತದಾರರ ಸೇರ್ಪಡೆಗೆ ಹಾಗೂ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವ ಮತದಾರರ ಹೆಸರುಗಳನ್ನು ಮತ್ತೆ ಸೇರಿಸಲು ಪಕ್ಷದ ಜಿಲ್ಲಾ ಅಧ್ಯಕ್ಷರು ಮತ್ತು ಬ್ಲಾಕ್‌ ಅಧ್ಯಕ್ಷರು ಜಾಗೃತಿ ವಹಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಹೆಚ್ಚು ಮತ ಬಂದಿರುವ ಬೂತ್‌ಗಳ ಬಗ್ಗೆ ವಿಶೇಷ ಗಮನಹರಿಸಿ. ವಿರೋಧ ಪಕ್ಷದವರು ಕೆಲ ಅಧಿಕಾರಿಗಳ ಸಹಕಾರದಿಂದ ಕಾಂಗ್ರೆಸ್ ಬೆಂಬಲಿತ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಸುವ ಸಂಚು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬೂತ್‌ಗಳಲ್ಲಿ ಮತದಾರರನ್ನು ಪಟ್ಟಿಯಿಂದ ತೆಗೆಸುವ ಪ್ರಕರಣ ವರದಿಯಾಗಿವೆ. ಹೀಗಾಗಿ ಪ್ರತಿ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸುವುದು ಬಹಳ ಮುಖ್ಯ’ ಎಂದು ಹೇಳಿದರು.

‘ಚುನಾವಣಾ ಆಯೋಗವು ಪ್ರತಿ ಬೂತ್ ಮಟ್ಟದಲ್ಲಿ ಆಗಿರುವ ಲೋಪ ಪತ್ತೆ ಮಾಡಿ ಮತದಾರರ ನೋಂದಣಾಧಿಕಾರಿ ಜತೆ ವ್ಯವಹರಿಸಲು ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಅವಕಾಶ ಕಲ್ಪಿಸಿದೆ. ಶೀಘ್ರವೇ ಏಜೆಂಟರನ್ನು ನೇಮಿಸಿ ಆದಷ್ಟೂ ಬೇಗ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಹಾಗೂ ಕೆಪಿಸಿಸಿಗೆ ಸಲ್ಲಿಸಿ’ ಎಂದು ಕೆಪಿಸಿಸಿಯಿಂದ ನೇಮಕಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣಾ ಸಹ ಸಂಯೋಜಕ ಬಲದೇವ ಕೃಷ್ಣ ತಿಳಿಸಿದರು.

‘ಬೂತ್‌ ಮಟ್ಟದ ಏಜೆಂಟರು ತಮ್ಮ ಬೂತ್ ಸಮಿತಿಯ ಸದಸ್ಯರು ಮತ್ತು ಸಹ ಕಾರ್ಯಕರ್ತರೊಂದಿಗೆ ಬೂತ್ ವ್ಯಾಪ್ತಿಯ ಪ್ರದೇಶಗಳಲ್ಲಿ ಸಂಚರಿಸಿ ಮತದಾರ ನೋಂದಣಿಯಲ್ಲಿ ಆಗಿರುವ ಲೋಪಗಳ ಬಗ್ಗೆ ವಿವರ, ದೂರು ಸಂಗ್ರಹಿಸಬೇಕು. ಜತೆಗೆ ಆ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಏಜೆಂಟರ ನೇಮಕ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಆದೇಶದಂತೆ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲು ಈಗಾಗಲೇ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲಾಗಿದೆ. ಬೂತ್‌ ಏಜೆಂಟರು ಮನೆ ಮನೆ ಸಮೀಕ್ಷೆ ಮಾಡಿ ಸಮಸ್ಯೆಗಳ ಆಧಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡುತ್ತಾರೆ. ಜಿಲ್ಲೆಯಾದ್ಯಂತ ಈ ಅಭಿಯಾನ ನಡೆಯಲಿದ್ದು, 12 ಬ್ಲಾಕ್ ಅಧ್ಯಕ್ಷರು ಇದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾಹಿತಿ ನೀಡಿದರು.

‘ನ.20ರೊಳಗೆ ಮತದಾರರ ಪರಿಷ್ಕೃತ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಹಾಗೂ ಕೆಪಿಸಿಸಿಗೆ ಸಲ್ಲಿಸುತ್ತೇವೆ. ಪಕ್ಷವನ್ನು ಬೇರು ಮಟ್ಟದಿಂದ ಬಲಿಷ್ಠವಾಗಿ ಸಂಘಟಿಸಿ ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದರು.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹಮ್ಮದ್‌, ಕೆ.ಗೋವಿಂದರಾಜು, ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು