ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ಪಾವತಿಗೆ ವಾರದ ಗಡುವು

ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಖಡಕ್‌ ಎಚ್ಚರಿಕೆ
Last Updated 14 ಸೆಪ್ಟೆಂಬರ್ 2020, 13:41 IST
ಅಕ್ಷರ ಗಾತ್ರ

ಕೋಲಾರ: ‘ರೇಷ್ಮೆ ಬೆಳೆಗಾರರ ಬ್ಯಾಂಕ್‌ ಖಾತೆಗೆ ವಾರದೊಳಗೆ ರೇಷ್ಮೆಗೂಡಿನ ಬೆಂಬಲ ಬೆಲೆ ಹಣ ಜಮಾ ಮಾಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಆರ್‌.ನಾರಾಯಣಗೌಡ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ರಾಜ್ಯದ ಇತರೆ ಜಿಲ್ಲೆಗಳಲ್ಲಿ ರೈತರಿಗೆ ರೇಷ್ಮೆಗೂಡಿನ ಬೆಂಬಲ ಬೆಲೆಯ ಹಣ ಸಂದಾಯವಾಗಿದೆ. ಆದರೆ, ಕೋಲಾರದಲ್ಲಿ ವಿಳಂಬವಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಗುಡುಗಿದರು.

‘ಲಾಕ್‌ಡೌನ್ ಸಂದರ್ಭದಲ್ಲಿ ಹಣ್ಣು, ತರಕಾರಿ, ಹೂವು ಮಾರಾಟವಾಗದೆ ರೈತರಿಗೆ ನಷ್ಟವಾಗಿತ್ತು. ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ಪರಿಹಾರಧನ ಘೋಷಿಸಿದೆ. ಕೆಲವೆಡೆ ತಾಂತ್ರಿಕ ಕಾರಣದಿಂದ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಅಧಿಕಾರಿಗಳು ಎಲ್ಲಾ ಸಮಸ್ಯೆ ಸರಿಪಡಿಸಬೇಕು. ವಾರದೊಳಗೆ ಪರಿಹಾರ ಹಣ ಸಂದಾಯ ಆಗಬೇಕು’ ಎಂದು ತಾಕೀತು ಮಾಡಿದರು.

‘ಮಾವು ಅಭಿವೃದ್ಧಿ ಮಂಡಳಿ ಇದ್ದೂ ಇಲ್ಲದಂತಿದೆ. ಮಂಡಳಿಯಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ಮಂಡಳಿಗೆ ಹೆಚ್ಚಿನ ಅನುದಾನ ನೀಡಲು ಸಿದ್ಧ. ವಿಧಾನ ಮಂಡಲ ಅಧಿವೇಶನದ ಬಳಿಕ ಸಭೆ ನಡೆಸಿ ಮಂಡಳಿ ಉನ್ನತೀಕರಣ ಮಾಡುತ್ತೇವೆ. ಮಂಡಳಿಗೆ ವರ್ಷಕ್ಕೆ ₹ 25 ಕೋಟಿ ಅನುದಾನ ಮತ್ತು ಹನಿ ನೀರಾವರಿಗೆ ಶೇ 100ರಷ್ಟು ಸಬ್ಸಿಡಿ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇವೆ’ ಎಂದು ಭರವಸೆ ನೀಡಿದರು.

ರಫ್ತು ಹೆಚ್ಚಿಸಿ: ‘ಕೋವಿಡ್‌–19 ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದ ಸಂದರ್ಭದಲ್ಲಿ ಜಿಲ್ಲೆಯಲ್ಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರೈತರ ಮಾವು ಮಾರಾಟ ಮಾಡಿಸಲಾಯಿತು. ಜಿಲ್ಲೆಯಲ್ಲಿ ಹಲವು ಪ್ರಸಿದ್ಧ ತಳಿಯ ಮಾವು ಬೆಳೆಯಲಾಗುತ್ತಿದ್ದು, ದೇಶ ವಿದೇಶಕ್ಕೆ ಮಾವು ರಫ್ತು ಹೆಚ್ಚಿಸಬೇಕು. ಆಗ ಉತ್ತಮ ಬೆಲೆ ಸಿಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮನವಿ ಮಾಡಿದರು.

‘ರಾಜ್ಯದಲ್ಲಿ ಬೆಳೆಯುವ ಒಟ್ಟು ಮಾವಿನಲ್ಲಿ ಶೇ 34ರಷ್ಟು ಮಾವನ್ನು ಕೋಲಾರ ಜಿಲ್ಲೆ ಒಂದರಲ್ಲೇ ಬೆಳೆಯಲಾಗುತ್ತಿದೆ. ಮಾವು ಅಭಿವೃದ್ಧಿ ಮಂಡಳಿಯು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು, ವರ್ಷಕ್ಕೆ ₹ 2 ಕೋಟಿ ಅನುದಾನ ಸಾಲುವುದಿಲ್ಲ. ಕನಿಷ್ಠ ₹ 25 ಕೋಟಿ ಅನುದಾನ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೋರಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ, ರಾಜ್ಯ ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಆಂಜನೇಯಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT