ಗುರುವಾರ , ಫೆಬ್ರವರಿ 27, 2020
19 °C

ರೈಲು ವರ್ಕ್‌ಶಾಪ್‌ ಯೋಜನೆಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲು ಕೋಚ್ ಕಾರ್ಖಾನೆ ಸ್ಥಾಪಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಕೆಲ ರಾಜಕಾರಣಿಗಳು ಹೇಳಿದ್ದಾರೆ. ಅವರ ಹೋರಾಟ ಎಷ್ಟು ಯಶಸ್ವಿಯಾಗುತ್ತದೆ ಕಾದು ನೋಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಳ್ಳೆಯ ಕೆಲಸಕ್ಕೆ ಹೋರಾಟ ಮಾಡಿದರೆ ಬೆಂಬಲ ಸೂಚಿಸುತ್ತೇವೆ. ಒಂದು ಯೋಜನೆ ಬದಲಿಗೆ ಮತ್ತೊಂದು ಯೋಜನೆ ಬರುತ್ತಿದ್ದು, ಅದನ್ನು ಸ್ವಾಗತಿಸಬೇಕು ಎಂದು ಸಲಹೆ ನೀಡಿದರು.

‘ಕೋಚ್ ಕಾರ್ಖಾನೆ ಬದಲು ವರ್ಕ್‌ಶಾಪ್ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಅದಕ್ಕೆ ಸಹಕಾರ ಕೊಡುತ್ತೇವೆ. ಜಿಲ್ಲೆಯ ಗಡಿ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದು, ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್ ಹಾಗೂ ಶ್ರೀನಿವಾಸಪುರ ಭಾಗದಲ್ಲಿ ಜಾಗ ಗುರುತಿಸಿ ಕೈಗಾರಿಕೆಗಳಿಗೆ ನೀಡಲಾಗುವುದು’ ಎಂದು ತಿಳಿಸಿದರು.

‘ಮುಳಬಾಗಿಲಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ನೀರಿನ ಕೊರತೆ ಕಾರಣಕ್ಕೆ ಸರ್ಕಾರ ಕಡತವನ್ನು ಬಾಕಿ ಇರಿಸಿಕೊಂಡಿತ್ತು. ದೇವರ ಕೃಪೆಯಿಂದ ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಯುತ್ತಿದ್ದು, ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಒತ್ತಡ ತಂದು ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಮಂಜೂರಾತಿ ಪಡೆಯಲಾಗಿದೆ. ಕೈಗಾರಿಕಾ ಪ್ರದೇಶಕ್ಕೆ ಜಾಗ ಗುರುತಿಸುವ ಪ್ರಯತ್ನ ಮುಂದುವರಿದಿದೆ’ ಎಂದು ವಿವರಿಸಿದರು.

ಬೆಂಬಲ ನೀಡಬೇಕು: ‘ಈ ಹಿಂದೆ ಕೆ.ಎಚ್.ಮುನಿಯಪ್ಪ ಅವರು ಸಂಸದರಾಗಿ ಕೇಂದ್ರದಲ್ಲಿ ಸಚಿವ ಸ್ಥಾನ ಅಲಂಕರಿಸಿದ್ದರು. ಅವರದೇ ಸರ್ಕಾರ ಅಧಿಕಾರದಲ್ಲಿದ್ದಾಗ ರೈಲು ಕೋಚ್ ಕಾರ್ಖಾನೆ ಮಂಜೂರಾದರೂ ಆಗ ಯಾಕೆ ಕಾರ್ಖಾನೆ ನಿರ್ಮಾಣ ಕಾಮಗಾರಿ ಆರಂಭಿಸಲಿಲ್ಲ?’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಪ್ರಶ್ನಿಸಿದರು.

‘ಮುನಿಯಪ್ಪ ಅವರು ಒಂದು ಕಡೆ ಹೋರಾಟ ಮಾಡಿಕೊಳ್ಳಲಿ. ಅದಕ್ಕೂ ಮುನ್ನ ರೈಲು ವರ್ಕ್‌ಶಾಪ್‌ ಸ್ಥಾಪಿಸುವುದಾದರೆ ಶೀಘ್ರವೇ ಕೆಲಸ ಆರಂಭಿಸಲಿ. ಸಂಸದ ಎಸ್.ಮುನಿಸ್ವಾಮಿ ಯಾವುದೇ ಜಿಲ್ಲೆಗೆ ಸಮಸ್ಯೆಯಾಗದಂತೆ ಮತ್ತೊಂದು ಯೋಜನೆ ಮಂಜೂರು ಮಾಡಿಸಿದ್ದಾರೆ. ಅದಕ್ಕೆ ಪ್ರತಿಯೊಬ್ಬರು ಬೆಂಬಲ ನೀಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)