ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಪ್ರಾಣಿ ಹಾವಳಿ: ಪರಿಹಾರಕ್ಕೆ ಒತ್ತಾಯ

ಡಿಸಿಎಫ್‌ ಕಚೇರಿ ಎದುರು ರೈತ ಸಂಘ ಸದಸ್ಯರ ಧರಣಿ
Last Updated 4 ಜನವರಿ 2020, 11:33 IST
ಅಕ್ಷರ ಗಾತ್ರ

ಕೋಲಾರ: ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಜಿಲ್ಲೆಯ ಗಡಿ ಭಾಗದ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಅರಣ್ಯ ಪ್ರದೇಶದಿಂದ ಬರುವ ಆನೆಗಳ ಹಿಂಡು ಜಿಲ್ಲೆಯ ಗಡಿ ಗ್ರಾಮದ ಕೃಷಿ ಜಮೀನುಗಳಲ್ಲಿ ಬೆಳೆ ನಾಶಪಡಿಸುತ್ತಿದೆ. ಅರಣ್ಯ ಇಲಾಖೆಯು ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಂಡಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ರೈತರು ಬರ ಪರಿಸ್ಥಿತಿ ನಡುವೆಯೂ ಬಡ್ಡಿ ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಕೀಟಬಾಧೆ, ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಪ್ರತಿ ವರ್ಷ ಕಾಡಾನೆ ಹಾವಳಿ ಸಾಮಾನ್ಯವಾಗಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆದ ಕಾಡು ಪ್ರಾಣಿಗಳ ಹಾವಳಿಯಿಂದ ಅಂತಿಮ ಕ್ಷಣದಲ್ಲಿ ನಾಶವಾಗುತ್ತಿದೆ. ರೈತರು ಬೆಳೆಗೆ ಮಾಡಿದ ಸಾಲ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದ ಸಂದರ್ಭದಲ್ಲಿ ಮಾತ್ರ ನೆಪಕ್ಕೆ ರೈತರ ಜಮೀನಿಗೆ ಬರುವ ಅಧಿಕಾರಿಗಳು ಪರಿಹಾರ ಕೊಡಲು ಮೀನಮೇಷ ಎಣಿಸುತ್ತಾರೆ’ ಎಂದು ಕಿಡಿಕಾರಿದರು.

ರೈತಪರ ಕಾಳಜಿಯಿಲ್ಲ: ‘ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅಧಿಕಾರಿಗಳು ರೈತರಿಗೆ ಬೆಳೆ ಪರಿಹಾರ ಮಂಜೂರು ಮಾಡಲು ಲಂಚ ಕೇಳುತ್ತಾರೆ. ಲಂಚ ಕೊಡದಿದ್ದರೆ ರೈತರನ್ನು ಕಚೇರಿಗೆ ಅಲೆಯುವಂತೆ ಮಾಡುತ್ತಾರೆ. ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ತುಟಿ ಬಿಚ್ಚುತ್ತಿಲ್ಲ. ಜನಪ್ರತಿನಿಧಿಗಳಿಗೆ ರೈತಪರ ಕಾಳಜಿಯಿಲ್ಲ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಡುಗಳಲ್ಲಿ ಪ್ರಾಣಿಗಳಿಗೆ ಬೇಕಾದ ಹಣ್ಣಿನ ಮರಗಳನ್ನು ಬೆಳೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಾಡು ಪ್ರಾಣಿಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ರೂಪಿಸಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹ 5 ಲಕ್ಷ ಪರಿಹಾರ ನೀಡಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿಯು ಕಾರ್ಯ ಸ್ಥಳದಲ್ಲಿದ್ದು, ಪರಿಹಾರ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ತಿಮ್ಮಣ್ಣ, ವೆಂಕಟೇಶಪ್ಪ, ನಾಗೇಶ್, ಆನಂದರೆಡ್ಡಿ, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT