ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ: ಭರವಸೆ

ಮಹಿಳಾ ಕಾಲೇಜಿನಲ್ಲಿ ‘ಮೈತ್ರಿ’ ಸಹಾಯವಾಣಿ ಸಮಿತಿ ರಚನೆ
Last Updated 21 ಜನವರಿ 2020, 15:55 IST
ಅಕ್ಷರ ಗಾತ್ರ

ಕೋಲಾರ: ‘ಕಾಲೇಜಿನಲ್ಲಿ ಬೋಧನಾ ಕ್ರಮ, ಮೂಲಸೌಕರ್ಯ ಕೊರತೆ, ಕಿರುಕುಳ ಸೇರಿದಂತೆ ವಿದ್ಯಾರ್ಥಿನಿಯರ ಸಮಸ್ಯೆ ಪರಿಹಾರಕ್ಕಾಗಿ ಮೈತ್ರಿ ಸಹಾಯವಾಣಿ ಸಮಿತಿ ಕಾರ್ಯ ನಿರ್ವಹಿಸಲಿದೆ’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ತಿಳಿಸಿದರು.

ಕಾಲೇಜಿನಲ್ಲಿ ಮಂಗಳವಾರ ನಡೆದ ಮೈತ್ರಿ ಸಹಾಯವಾಣಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಮೈತ್ರಿ ಸಹಾಯವಾಣಿಯು ದಿನದ 24 ತಾಸೂ ಕಾರ್ಯ ನಿರ್ವಹಿಸುತ್ತದೆ. ಕಲಿಕೆ ಸಮಸ್ಯೆಗಳು, ಲೈಂಗಿಕ ಕಿರುಕುಳ, ವ್ಯಾಸಂಗ, ಅಂಕಪಟ್ಟಿ ವಿಳಂಬ ಸಮಸ್ಯೆ ಪರಿಹಾರಕ್ಕಾಗಿ ವಿದ್ಯಾರ್ಥಿಗಳು 1800-425-6718ಕ್ಕೆ ಕರೆ ಮಾಡಬಹುದು’ ಎಂದರು.

‘ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಬರುವ ಕರೆಗಳನ್ನು ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿ ಸ್ವೀಕರಿಸುತ್ತಾರೆ. ಉಳಿದ ಸಮಯದಲ್ಲಿ ಬರುವ ಕರೆಗಳು ರೆಕಾರ್ಡ್‌ ಆಗುತ್ತವೆ. ಆ ಕರೆಗಳನ್ನು ಮಾಡಿದವರಿಗೆ ಇಲಾಖೆ ಸಿಬ್ಬಂದಿ ಮರು ದಿನ ಬೆಳಿಗ್ಗೆ ಕರೆ ಮಾಡಿ ಅಹವಾಲು ಆಲಿಸುತ್ತಾರೆ’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳು ಏಕಾಂಗಿತನ, ಸ್ವಸಾಮರ್ಥ್ಯದ ಕೊರತೆ, ಗೋಜಲಾಗಿರುವ ಸಂಬಂಧಗಳು ಸೇರಿದಂತೆ ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ರ್‌್್ಯಾಗಿಂಗ್‌, ಲಿಂಗ ತಾರತಮ್ಯದಂತಹ ಸಮಸ್ಯೆಗೆ ಸಿಲುಕಿದ್ದರೆ ದೂರು ನೀಡಬಹುದು’ ಎಂದು ಮಾಹಿತಿ ನೀಡಿದರು.

‘ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಚಟಗಳಿಂದ ಮುಕ್ತಿಗೆ, ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ಮೈತ್ರಿ ಸಹಾಯವಾಣಿ ಗಮನಕ್ಕೆ ತರಲು ಅವಕಾಶವಿದೆ. ಪರೀಕ್ಷಾ ಫಲಿತಾಂಶ, ಮೌಲ್ಯಮಾಪನ ಸಮಸ್ಯೆ, ಆಂತರಿಕ ಮೌಲ್ಯಮಾಪನದ ಕುರಿತು ಸಹಾಯವಾಣಿಗೆ ದೂರು ಸಲ್ಲಿಸಬಹುದು. ಈ ದೂರುಗಳನ್ನು ಕಾಲೇಜಿನ ಸಮಿತಿ ಮುಂದಿಟ್ಟು ಪರಿಹಾರಕ್ಕೆ ಕ್ರಮ ವಹಿಸಲು ಅವಕಾಶ ನೀಡಲಾಗಿದೆ’ ಎಂದರು.

ಸಲಹೆ ನೀಡಬಹುದು: ‘ಕಾಲೇಜುಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುವಾಗುವಂತಹ ಸಲಹೆ, ಸೂಚನೆಗಳನ್ನು ಸಹಾಯವಾಣಿ ಮೂಲಕ ತಿಳಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿವೇತನ ವಿಳಂಬ ಪ್ರಮುಖ ಸಮಸ್ಯೆಯಾಗಿದೆ. ಅನೇಕ ಸಂದರ್ಭಗಳಲ್ಲಿ ಬ್ಯಾಂಕ್‌ಗಳಲ್ಲಿ ವಿದ್ಯಾರ್ಥಿಗಳು ಮಾಡಿಸುವ ಶೂನ್ಯ ಠೇವಣಿ ಖಾತೆ ನಿಗದಿತ ಅವಧಿ ಮುಗಿದ ನಂತರ ರದ್ದಾಗುವುದರಿಂದ ವಿದ್ಯಾರ್ಥಿವೇತನದ ಚೆಕ್ ವಾಪಸ್‌ ಹೋಗಿ ಸಮಸ್ಯೆ ಆಗುತ್ತಿದೆ’ ಎಂದು ಸಮಿತಿ ಸದಸ್ಯರು ಸಭೆಯಲ್ಲಿ ಹೇಳಿದರು.

‘ಸಮಿತಿಯು ಮೊದಲ ಸಭೆ ನಡೆಸುತ್ತಿದ್ದು, ಸಹಾಯವಾಣಿಗೆ ದೂರುಗಳು ಬಂದರೆ ಅವು ಕಾಲೇಜು ಸಮಿತಿಗೆ ವರ್ಗಾವಣೆಯಾಗುತ್ತವೆ. ಸಮಸ್ಯೆಗಳ ಕುರಿತು ಚರ್ಚಿಸಿ ಕಾಲೇಜು, ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ವಹಿಸಲು ಇಲಾಖೆ ಈ ನಿರ್ಧಾರ ಮಾಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT