ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದ ಜೆಡಿಎಸ್‌- ಬಿಜೆಪಿ ಮೈತ್ರಿ: ಮುಂದಿದೆ ಕಠಿಣ ಹಾದಿ!

Published 9 ಜೂನ್ 2024, 23:48 IST
Last Updated 9 ಜೂನ್ 2024, 23:48 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಯಶಸ್ವಿಯಾಗಿರುವುದು ಉಭಯ ಪಕ್ಷಗಳಿಗೆ ಖುಷಿಯ ಜೊತೆ ಭಾರಿ ಸವಾಲನ್ನು ಮುಂದಿಟ್ಟಿದೆ. ಮುಂದಿನ ಹಾದಿ ಕಠಿಣವಾಗಿರಲಿದ್ದು, ಸಂದಿಗ್ಧ ಪರಿಸ್ಥಿತಿ ತಂದೊಡ್ಡುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಏಕೆಂದರೆ ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಆ ನಂತರ ನಗರಸಭೆ, ಪುರಸಭೆ ಚುನಾವಣೆ ಇವೆ. ಬಹುಮುಖ್ಯವಾಗಿ 2028ರಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು ಅಲ್ಲೂ ಮೈತ್ರಿ ಕೆಮಿಸ್ಟ್ರಿ ಕೆಲಸ ಮಾಡಲಿದೆಯಾ ಎಂಬ ಪ್ರಶ್ನೆಗಳು ಈಗಲೇ ಉದ್ಭವಿಸುತ್ತಿವೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಾಲಿ ಕ್ಷೇತ್ರವನ್ನು ಬಿಜೆಪಿ ತ್ಯಾಗ ಮಾಡಿದೆ. ಹೀಗಾಗಿ, ಮುಂದಿನ ಚುನಾವಣೆಗಳಲ್ಲಿ ಹೆಚ್ಚಿನ ಟಿಕೆಟ್‌ಗೆ ಸಹಜವಾಗಿಯೇ ಬೇಡಿಕೆ ಇಡಲಿದೆ. ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರೂ ಸುಮ್ಮನಿರುವುದಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್‌ ಬಲಿಷ್ಠ. ಹೀಗಾಗಿ, ಅವರಿಂದಲೂ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಬರಲಿದೆ, ಆಕಾಂಕ್ಷಿಗಳು ಹೆಚ್ಚಿರುತ್ತಾರೆ. ಆಗ ಪರಿಸ್ಥಿತಿ ಹೇಗಿರಲಿದೆ ಎಂಬುದು ಕುತೂಹಲ.

ಲೋಕಸಭೆ ಚುನಾವಣೆ ಪ್ರಧಾನಿ ಮೋದಿ ಹಾಗೂ ದೇಶದ ವಿಚಾರಗಳ ಮೇಲೆ ನಡೆದಿದೆ. ಆದರೆ, ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಥಳೀಯ ವಿಚಾರ, ಸಮಸ್ಯೆಗಳ ಮೇಲೆ ನಡೆಯಲಿದೆ. ಹೀಗಾಗಿ, ಎರಡೂ ಪಕ್ಷಗಳಿಗೆ ಭಾರಿ ಸವಾಲು ಮುಂದಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ, ಸಹಜವಾಗಿಯೇ ವಿಧಾನಸಭೆ ಚುನಾವಣೆ ವೇಳೆ ಎರಡೂ ಪಕ್ಷಗಳಿಂದ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿರುತ್ತಾರೆ.

ಪ್ರಮುಖವಾಗಿ ಬಂಗಾರಪೇಟೆ ಕ್ಷೇತ್ರದ ಮೇಲೆ ಮಾಜಿ ಸಂಸದ ಎಸ್‌.ಮುನಿಸ್ವಾಮಿ ಕಣ್ಣಿಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸಿಕೊಂಡಿದ್ದ ಅವರಿಗೆ ಈ ಕ್ಷೇತ್ರದಲ್ಲಿ ಟಿಕೆಟ್‌ ಕೊಡುವ ಭರವಸೆ ಸಿಕ್ಕಿದೆ ಎನ್ನಲಾಗಿದೆ. ಪ್ರಚಾರದ ವೇಳೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಕೂಡ ಈ ಸುಳಿವು ನೀಡಿದ್ದರು.

ಈ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‌ನಿಂದ ಮಲ್ಲೇಶ್‌ ಬಾಬು ಕಣಕ್ಕಿಳಿದಿದ್ದರು. ಅವರೀಗ ಸಂಸದರಾಗಿರುವುದರಿಂದ ಮುನಿಸ್ವಾಮಿ ಹಾದಿ ಸುಗಮ ಎನ್ನಲಾಗುತ್ತಿದೆ. ಆದರೆ, ಬಿಜೆಪಿಯಲ್ಲಿ ಟಿಕೆಟ್‌ಗೆ ಪೈಪೋಟಿ ಏರ್ಪಡಲಿದೆ. ಏಕೆಂದರೆ ಈಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ವಿ.ಮಹೇಶ್‌ ಕೂಡ ಹಿಂದಿನಿಂದ ಈ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಈ ಕುರಿತು ಈಚೆಗೆ ಪ್ರತಿಕ್ರಿಯಿಸಿದ್ದ ಮುನಿಸ್ವಾಮಿ, ‘ನಾನು ಅಭ್ಯರ್ಥಿ ಎಂದು ಎಲ್ಲೂ ಹೇಳಿಲ್ಲ. ಈಗಾಗಲೇ ನಾನು ಲೋಕಸಭೆ ಕ್ಷೇತ್ರದ ಟಿಕೆಟ್‌ ತ್ಯಾಗ ಮಾಡಿದ್ದೇನೆ. ಅಂತಿಮವಾಗಿ ತೀರ್ಮಾನ ಕೈಗೊಳ್ಳಬೇಕಿರುವುದು ಹೈಕಮಾಂಡ್‌’ ಎಂದಿದ್ದರು.

ಇನ್ನು ಕೋಲಾರ ವಿಧಾನಸಭೆ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ (ಕೊತ್ತೂರು ಮಂಜುನಾಥ್‌), ಬಿಜೆಪಿ (ವರ್ತೂರು ಪ್ರಕಾಶ್‌), ಜೆಡಿಎಸ್‌ (ಸಿಎಂಆರ್‌ ಶ್ರೀನಾಥ್‌) ನಡುವೆ ಬಹುತೇಕ ಸಮಬಲದ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ ಗೆದ್ದಿದ್ದರೆ, ಜೆಡಿಎಸ್‌ ಎರಡನೇ ಸ್ಥಾನ ಪಡೆದಿತ್ತು. ಈ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಹೆಚ್ಚು ಮತ ಪಡೆದಿದ್ದಾರೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದ ಟಿಕೆಟ್‌ಗೆ ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಚಿತ.

ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಕೆಜಿಎಫ್‌ನಲ್ಲಿ ಹೆಚ್ಚೇನು ಸಮಸ್ಯೆ ಉದ್ಭವಿಸದು. ಏಕೆಂದರೆ ಶ್ರೀನಿವಾಸಪುರ ಹಾಗೂ ಮುಳಬಾಗಿಲಿನಲ್ಲಿ ಬಿಜೆಪಿ ಬಲಿಷ್ಠವಾಗಿಲ್ಲ, ಕೆಜಿಎಫ್‌ನಲ್ಲಿ ಜೆಡಿಎಸ್‌ ಏನೇನೂ ಇಲ್ಲ.

ಮಾಲೂರು ಕ್ಷೇತ್ರದಲ್ಲಿ ಸವಾಲು ಎದುರಾಗಲಿದೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಮಂಜುನಾಥ್‌ ಗೌಡ ಕೇವಲ 257 ವೋಟುಗಳಿಂದ ಕಾಂಗ್ರೆಸ್‌ ಎದುರು ಸೋತಿದ್ದರು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಪೈಪೋಟಿ ನೀಡಿದ್ದ ಹೂಡಿ ವಿಜಯಕುಮಾರ್‌ ಈ ಬಾರಿ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಅವರ ನಿವಾಸಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಭೇಟಿ ಕೊಟ್ಟಿದ್ದರು. ಈ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ರಾಮೇಗೌಡರು ಕೂಡ ಮತ್ತೆ ಟಿಕೆಟ್‌ ಕೇಳುತ್ತಾರೆ. ಅವರ ಪತ್ನಿ ರಶ್ಮಿ ಈಗ ಜೆಡಿಎಸ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರು. ಹೀಗಾಗಿ, ಈ ಕ್ಷೇತ್ರದ ರಾಜ್ಯಕೀಯ ವಿದ್ಯಮಾನಗಳ ಬಗ್ಗೆ ಎಲ್ಲರ ಚಿತ್ತವಿದೆ.

ಚಿಂತಾಮಣಿ ಹಾಗೂ ಶಿಡ್ಲಘಟ್ಟದಲ್ಲೂ ಹೆಚ್ಚಿನ ಸಮಸ್ಯೆ ಎದುರಾಗದು. ಏಕೆಂದರೆ ಈ ಕ್ಷೇತ್ರಗಳಲ್ಲಿ ಬಿಜೆಪಿ ಅಷ್ಟೇನೂ ಬಲಿಷ್ಠವಾಗಿಲ್ಲ. ಹೀಗಾಗಿ, ಜೆಡಿಎಸ್‌ ಹಕ್ಕೊತ್ತಾಯ ಮಂಡಿಸುತ್ತದೆ. ಈ ಎಲ್ಲಾ ಕಾರಣಗಳಿಗೆ ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳ ನಡೆ ಬಹಳ ಕುತೂಹಲ ಮೂಡಿಸಿದೆ.

ರಾಜಕೀಯವಾಗಿ ಬೆಂಬಲ ಇದ್ದವರಿಗೆ ಟಿಕೆಟ್‌

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಯಶಸ್ವಿಯಾಗಿದೆ. ಟೀಕಿಸಿದ್ದವರಿಗೆ ಈ ಚುನಾವಣೆಯೇ ಉತ್ತರ. ಹೀಗಾಗಿ ಮೈತ್ರಿ ಮುಂದುವರಿಯಲಿದೆ. ಮುಂದಿನ ಚುನಾವಣೆಗಳಲ್ಲಿ ಆ ಕಾಲಘಟ್ಟದಲ್ಲಿ ಅನುಕೂಲ ಇದ್ದ ಪಕ್ಷಕ್ಕೆ ಹೆಚ್ಚು ಟಿಕೆಟ್ ದೊರೆಯುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ ಜೆಡಿಎಸ್‌ ಪ್ರಾದೇಶಿಕ ಪಕ್ಷ. ಬಿಜೆಪಿ ಬಲಿಷ್ಠವಾಗಿದೆ. ಹೀಗಾಗಿ ಹೆಚ್ಚಿನ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ರಾಜಕೀಯವಾಗಿ ಹೆಚ್ಚು ಬೆಂಬಲ ಇದ್ದವರಿಗೆ ಟಿಕೆಟ್‌ ಸಿಗುತ್ತದೆ ಓಂಶಕ್ತಿ ಚಲಪತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ

ಕಾಂಗ್ರೆಸ್‌ ಹಿಮ್ಮೆಟ್ಟಿಸಲು ಮೈತ್ರಿ ಅನಿವಾರ್ಯ

ಕಾಂಗ್ರೆಸ್‌ ಅಹಂ ಹಿಮ್ಮೆಟ್ಟಿಸಲು ಜೆಡಿಎಸ್‌–ಬಿಜೆಪಿ ಮೈತ್ರಿ ತುಂಬಾ ಅವಶ್ಯ ಎಂಬುದು ಈಗ ಎಲ್ಲರಿಗೂ ಮನವರಿಕೆ ಆಗಿದೆ. ಜೊತೆಗೆ ಮೈತ್ರಿ ಅನಿವಾರ್ಯವೂ ಇದೆ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಇದೆ ಎಂಬುದು ಈಗ ಗೊತ್ತಾಗಿದೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ವಿಚಾರವನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಹೆಚ್ಚು ಬಲ ಇದ್ದವರಿಗೆ ಹೆಚ್ಚು ಅವಕಾಶ ಸಿಗುತ್ತದೆ. ಮೊದಲು ಬುಡ ಉಳಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌

ಮೈತ್ರಿಯಿಂದ ಜೆಡಿಎಸ್‌–ಬಿಜೆಪಿಗೆ ಬಲ

ಜೆಡಿಎಸ್‌–ಬಿಜೆಪಿ ಮೈತ್ರಿ ಬಲ ಏನು ಎಂಬುದು ಕಾಂಗ್ರೆಸ್‌ಗೆ ಗೊತ್ತಾಗಿದೆ. ಮೈತ್ರಿ ಹೀಗೆಯೂ ಮುಂದೆಯೂ ಮುಂದುವರಿಯಲಿದೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮುಖಂಡರು ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿ ಗೆಲ್ಲಿಸಿದ್ದಾರೆ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಮುಂದಿನ ಚುನಾವಣೆಗಳಲ್ಲೂ ಅದೇ ರೀತಿ ಶ್ರಮ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಎಂ.ಮಲ್ಲೇಶ್‌ ಬಾಬು ಸಂಸದ ಜೆಡಿಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT