ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ: ಕುಮಾರಸ್ವಾಮಿ

Last Updated 7 ಫೆಬ್ರುವರಿ 2020, 13:46 IST
ಅಕ್ಷರ ಗಾತ್ರ

ಕೋಲಾರ: ‘ಮೈತ್ರಿ ಸರ್ಕಾರದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದೆ. ಆಡಳಿತ ನಡೆಸುವಾಗ ಸರ್ಕಾರದ ಯಾವುದೇ ತೀರ್ಮಾನವನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ನಾನು ಸದಾ ಜನರ ಹತ್ತಿರವಿದ್ದು ಹೋರಾಟ ಮಾಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ನನಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ಕೊಟ್ಟು ಕೆಲಸ ಮಾಡಿಸಿದ್ದರ ಬಗ್ಗೆ ಈಗ ಮನಬಂದಂತೆ ಮಾತನಾಡುವುದು ಸರಿಯಲ್ಲ’ ಎಂದರು.

‘ಸಿದ್ದರಾಮಯ್ಯ ಸರ್ಕಾರದಲ್ಲಿ 14 ಲಕ್ಷ ಫಲಾನುಭವಿಗಳನ್ನು ಗುರುತಿಸಿ ಮನೆ ಕಟ್ಟಲು ಸೂಚಿಸಿದ್ದರು. ಮನೆ ಕಟ್ಟಲು ಮುಂದಾದವರ ಪರಿಸ್ಥಿತಿ ಏನಾಗಿದೆ ಎಂದು ಅವರೇ ಉತ್ತರ ಕೊಟ್ಟರೆ ಸಾಕು, ಬೇರೆ ಏನೂ ಕೇಳುವುದಿಲ್ಲ. ಮನೆಗೆ ಅಡಿಪಾಯ ಹಾಕಿದ ಲಕ್ಷಾಂತರ ಮಂದಿ ಬೀದಿಗೆ ಬಂದಿದ್ದು, ಇದಕ್ಕೆ ಕಾರಣ ಯಾರೆಂದು ಜನರ ಮುಂದಿಡಲಿ. ನಾನು ಅಂತಹ ಕೆಟ್ಟ ಆಡಳಿತ ನಡೆಸಿಲ್ಲ’ ಎಂದು ಟೀಕಿಸಿದರು.

‘ರೈತರ ಕೃಷಿ ಸಾಲ ಮನ್ನಾಗೆ ಕೇವಲ 14 ತಿಂಗಳಲ್ಲಿ ₹ 25 ಸಾವಿರ ಕೋಟಿ ಕೊಟ್ಟೆ. ಈ ಸತ್ಯ ಅರಿತರೆ ಸಾಕು. ನಮ್ಮ ಕುಟುಂಬದ ಮೇಲೆ ವೈಯಕ್ತಿಕ ಟೀಕೆ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿದವರು ಯಾರೆಂದು ತಿಳಿಸಲಿ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೆಲವರು ಗೈರಾಗಿರುವ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರದು ಮುಗಿದ ಅಧ್ಯಾಯ. ಅವರು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೋ ಅಥವಾ ಗೈರಾಗುತ್ತಾರೋ ಎಂಬುದನ್ನು ಕಟ್ಟಿಕೊಂಡು ನನಗೇನು ಆಗಬೇಕು? ಆ ಬಗ್ಗೆ ಚರ್ಚೆಯ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ಅಭ್ಯರ್ಥಿಯಲ್ಲ

‘ಕೋಡಿಮಠದ ಸ್ವಾಮೀಜಿ ನಿರಂತರವಾಗಿ ಭವಿಷ್ಯ ಹೇಳುತ್ತಾರೆ. ಆದರೆ, ನಾನು ಶಾಸ್ತ್ರ ಹೇಳುವವನಲ್ಲ. ಸ್ವಾಮೀಜಿ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ವಿಧಾನ ಪರಿಷತ್‌ ಸದಸ್ಯ ಸ್ಥಾನದ ಚುನಾವಣೆಗೆ ಅನಿಲ್‌ಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಎದುರಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ರೇವಣ್ಣ ಅವರ ಜತೆ ಹೋಗಿದ್ದಾರೆ. ಆದರೆ, ಅನಿಲ್‌ಕುಮಾರ್‌ ಜೆಡಿಎಸ್‌ ಅಭ್ಯರ್ಥಿಯಲ್ಲ. ಸಮಾನ ಮನಸ್ಕರು ಅವರನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT