ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು: ಜನಪದರು ಬಯಲು ವಿಶ್ವವಿದ್ಯಾಲಯ

ವಿಶ್ವ ಜಾನಪದ ದಿನದಲ್ಲಿ ಕುಪ್ಪನಹಳ್ಳಿ ಎಂ.ಭೈರಪ್ಪ
Published 5 ಸೆಪ್ಟೆಂಬರ್ 2024, 14:35 IST
Last Updated 5 ಸೆಪ್ಟೆಂಬರ್ 2024, 14:35 IST
ಅಕ್ಷರ ಗಾತ್ರ

ಮಾಲೂರು: ನೆಲಸಂಸ್ಕೃತಿಯನ್ನು ಕಾಲಾನುಕಾಲದಿಂದಲೂ ತಮ್ಮ ಅಗಾಧವಾದ ಅನುಭವ, ಅರಿವು ಹಾಗೂ ಕಾರುಣ್ಯಗಳಿಂದ ಕಟ್ಟಿಕೊಂಡು ಬಂದ ಬಯಲು ವಿಶ್ವವಿದ್ಯಾಲಯದ ಜೀವಂತಜ್ಯೋತಿಗಳು ಜಾನಪದರು ಎಂದು ಪ್ರಾಧ್ಯಾಪಕ ಕುಪ್ಪನಹಳ್ಳಿ ಎಂ.ಭೈರಪ್ಪ ಹೇಳಿದರು.

ಪಟ್ಟಣದ ಸಮತಾನಗರದಲ್ಲಿರುವ ಸಾರಂಗರಂಗ ಸಾಂಸ್ಕೃತಿಕ ಕೇಂದ್ರ ಗುರುವಾರ ಆಯೋಜಿಸಲಾಗಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿದರು.

ಸಾವಿರಾರು ವರ್ಷಗಳಿಂದ ಈ ನೆಲದ ಮಣ್ಣಿನ ಮಕ್ಕಳು ತಮ್ಮ ನಡೆ-ನುಡಿಗಳಲ್ಲಿ ಜಾನಪದ ಸಂಪತ್ತನ್ನು ಕಾಪಿಟ್ಟುಕೊಂಡು ಬರುತ್ತಿದ್ದಾರೆ. ಜಾನಪದರ ಬದುಕು ಮತ್ತು ಕಲೆಗಳು ಒಂದರೊಳಗೊಂದು ಬೇರೂರಿಕೊಂಡಿರುವ ಕಾರಣದಿಂದ ಜಾನಪದ ಜಗತ್ತಿಗೆ ಮಹೋನ್ನತ ಪ್ರಾಮಾಣಿಕತೆ ಹಾಗೂ ಪ್ರಬುದ್ಧತೆ ಪ್ರಾಪ್ತವಾಗಿವೆ ಎಂದು ತಿಳಿಸಿದರು.

ಪೂರ್ವಕಾಲೀನ ಕನ್ನಡ ಕವಿ ಕವಿರಾಜಮಾರ್ಗಕಾರನು ನಾಡಿನ ಜಾನಪದರ ಜಾಣ್ಮೆ ಮತ್ತು ಬಲ್ಮೆಯನ್ನು ಹೆಮ್ಮೆಯಿಂದ ದಾಖಲಿಸಿದ್ದಾನೆ. ಜಾನಪದವೇ ಜಗತ್ತಿನ ಸರ್ವಸಂಸ್ಕೃತಿಗಳ ತಾಯಿಬೇರಾಗಿದೆ. ಆಧುನಿಕ ತಂತ್ರಜ್ಞಾನ ಯುಗದವರೆಂದು ಬೀಗುವ ನಾವು ನಮ್ಮೆಲ್ಲರ ಹೃದಯಗಳಲ್ಲಿ ಇಂತಹ ಜಾನಪದ ಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಪೋಷಿಸಬೇಕಾಗಿದೆ ಎಂದರು.

ಏಕಕಾಲದಲ್ಲಿ ಮೂರು ವಾದ್ಯವನ್ನು ಬಾಯಿಯಲ್ಲಿಟ್ಟುಕೊಂಡು ನಾದ ಹೊಮ್ಮಿಸುವುದು ಸವಾಲು. ಅಪಾರವಾದ ಶ್ರದ್ಧೆ ಬೇಡುವ ಬಹುನಾದಗಳ ಕೂಡಲಸಂಗಮದಂಥ ಕಲೆ ಇದು. ಇದರಲ್ಲಿ ಸಿದ್ಧಿ ಪಡೆದಿರುವ ಮುಖವೀಣೆ ಆಂಜಿನಪ್ಪ ಅವರು ಪ್ರಸಿದ್ಧರಾಗಿದ್ದಾರೆ. ಬಾಯಿಯಿಂದ ಮತ್ತು ಬಾಯಿಯಷ್ಟೇ ಪರಿಣಾಮಕಾರಿಯಾಗಿ ಮೂಗಿನ ಮೂಲಕವೂ ಮುಖವೀಣೆ ನುಡಿಸುವ ಅಪರೂಪದ ಶ್ರೇಷ್ಠ ಕಲಾಜೀವಿಯಿವರು. ಮುಖವೀಣೆ ವಾದನದ ಸಿದ್ಧಿ-ಸಾಧನೆಯಲ್ಲಿ ಆಂಜಿನಪ್ಪನವರು ನೆಲದವ್ವನ ವರಪುತ್ರರಂತೆ ಕಾಣುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಮಾತನಾಡಿ, ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಾರಂಗರಂಗ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ  ಪಿಚ್ಚಳ್ಳಿ ಶ್ರೀನಿವಾಸ್, ಕ್ರಿಸ್ತು ಯಂತಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಬಿ.ಎಸ್‌. ಸರ್ವೇಶ್, ಕಲಾವಿದರಾದ ಹರೀಶ್, ಗಾಯಕ ಚಿನ್ನಯ್ಯ, ಕವಿ ನಾ.ಮುನಿರಾಜು ಹಾಜರಿದ್ದರು.

ಮುಖವೀಣೆ ನಾದ ಮನಸೋತ ಪ್ರೇಕ್ಷಕರು

ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಮುಖವೀಣೆ ಆಂಜಿನಪ್ಪ ಅವರು ಚೆಲ್ಲಿದರೂ ಮಲ್ಲಿಗೆಯಾ ಮಾದೇಶ್ವರ ದಯೆಬಾರದೇ ಭಾಗ್ಯದ ಲಕ್ಷ್ಮೀ ಬಾರಮ್ಮ ಕರೆದರೂ ಕೇಳದೆ ಶಂಕರಾಭರಣಂ ಮೊದಲಾದ ಹಾಡುಗಳನ್ನು ಮುಖವೀಣೆಯ ಮೂಲಕ ಪ್ರಸ್ತುತಪಡಿಸಿದರು.‌ ಮುಖವೀಣೆ ನಾದಕ್ಕೆ ಪ್ರೇಕ್ಷಕರು ಮನಸೋತರು. ತದನಂತರ ಕಲಾವಿದರಾದ ಚಿಂತಾಮಣಿ ಮುನಿರೆಡ್ಡಿ ಮತ್ತು ತಂಡ ಹಾಗೂ ಕೊಂಡ್ಲಿಗಾನಹಳ್ಳಿ ನರಸಿಂಹಪ್ಪ ಅವರಿಂದ ‘ದೇಸಿಂಗ ರಾಜನ ಕಥೆ’ ಎಂಬ ಕೇಳಿಕೆ (ನಾಟಕ) ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT