ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ಕ್ಕೆ ಜೆಡಿಎಸ್‌ ಕಚೇರಿಗೆ ಗುದ್ದಲಿ ಪೂಜೆ

ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿ: ಶಾಸಕ ಶ್ರೀನಿವಾಸಗೌಡ ಹೇಳಿಕೆ
Last Updated 5 ಡಿಸೆಂಬರ್ 2020, 15:33 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದಲ್ಲಿ ಡಿ.9ರಂದು ನಡೆಯುವ ಜೆಡಿಎಸ್‌ ಪಕ್ಷದ ಕಚೇರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದು, ಜಿಲ್ಲೆಯ ಎಲ್ಲೆಡೆಯಿಂದ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಕರೆತರಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಪಕ್ಷದ ಕಚೇರಿಯ ಗುದ್ದಲಿ ಪೂಜೆ ಕಾರ್ಯಕ್ರಮದ ರೂಪುರೇಷೆ ಸಂಬಂಧ ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕಾರ್ಯಕ್ರಮಕ್ಕೆ ಬರುವ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಅವರನ್ನು ಪಕ್ಷದ ಕಾರ್ಯಕರ್ತರು ಬೈಕ್‌ ರ್‌್ಯಾಲಿ ಮೂಲಕ ಸ್ವಾಗತಿಸಬೇಕು’ ಎಂದು ತಿಳಿಸಿದರು.

‘ಆರ್‌ಟಿಒ ಕಚೇರಿ ಸಮೀಪದ ಜೆಡಿಎಸ್ ಪಕ್ಷದ ನಿವೇಶನದಲ್ಲಿ ಬೆಳಿಗ್ಗೆ 8 ಗಂಟೆಗೆ ಗುದ್ದಲಿ ಪೂಜೆ ನಡೆಯುತ್ತದೆ. ಬಳಿಕ ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ ಚುನಾವಣೆ ಸಂಬಂಧ ಕಾರ್ಯಕರ್ತರ ಸಭೆ ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ ಕಾರ್ಯಕರ್ತರು ಸಭೆಗೆ ಬರಬೇಕು. ಎಲ್ಲಾ ಸಮುದಾಯದವರ ಪಾಲ್ಗೊಳ್ಳುವಿಕೆ ಮುಖ್ಯ’ ಎಂದರು.

‘ಪಕ್ಷದ ಸ್ಥಳೀಯ ಮುಖಂಡರು ಗ್ರಾ.ಪಂ ಚುನಾವಣೆ ಜವಾಬ್ದಾರಿ ನಿಭಾಯಿಸಬೇಕು. ಸಮಸ್ಯೆ ಇರುವ ಕಡೆಗೆ ಹಿರಿಯ ಮುಖಂಡರು ಬರುತ್ತಾರೆ. ಸಾಧ್ಯವಾದರೆ ಅವಿರೋಧ ಆಯ್ಕೆಗೆ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಪಕ್ಷಕ್ಕೆ ನೆಲೆಯಿದೆ: ‘ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ನೆಲೆಯಿದೆ. ಜತೆಗೆ ಕಾರ್ಯಕರ್ತರ ದೊಡ್ಡ ಪಡೆಯಿದೆ. ಶ್ರೀನಿವಾಸಗೌಡರು ಪಕ್ಷ ಸಂಘಟನೆಗೆ ಸಲಹೆ ನೀಡಿ ಕಾರ್ಯಕರ್ತರನ್ನು ಮುನ್ನಡೆಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಮನವಿ ಮಾಡಿದರು.

‘ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಸ್ವಪಕ್ಷಿಯರೇ ಕಾರಣರಾದರು. ಕಾಲೆಳೆಯುವ ಪ್ರವೃತ್ತಿ ನಿಲ್ಲಿಸಬೇಕು. ಆಗ ಮಾತ್ರ 6 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಸಾಧ್ಯ. ಪಕ್ಷನಿಷ್ಠೆ ಇಲ್ಲದವರ ಬಗ್ಗೆ ಎಚ್ಚರ ವಹಿಸುತ್ತೇವೆ. ಮುಖಂಡರು ಭಿನ್ನಾಭಿಪ್ರಾಯ ಮರೆತು ಪಕ್ಷದ ಹಿತಕ್ಕೆ ದುಡಿಯಬೇಕು’ ಎಂದು ತಿಳಿಸಿದರು.

ಹೆಚ್ಚಿನ ಆದ್ಯತೆ: ‘ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಕ್ಷದ ಕಟ್ಟಡ ನಿರ್ಮಾಣಕ್ಕೆ ಈಗ ಕಾಲ ಕೂಡಿ ಬಂದಿದೆ. ನಾನು ಚುನಾವಣೆಯಲ್ಲಿ ಸೋತಿದ್ದರೂ ಹತಾಶನಾಗದೆ ಕೋಚಿಮುಲ್, ಟಿಎಪಿಸಿಎಂಎಸ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದೇನೆ’ ಎಂದು ಜೆಡಿಎಸ್‌ ಮುಖಂಡ ಸಮೃದ್ಧಿ ಮಂಜುನಾಥ್ ಹೇಳಿದರು.

‘ಇತ್ತೀಚೆಗೆ ನಡೆದ ನಗರಸಭೆ, ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷದ ಯುವ ಸದಸ್ಯರು ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಯುವ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರೂ ಪಕ್ಷದ ಪರವಾಗಿದ್ದರೆ ಸುಲಭವಾಗಿ ಆಡಳಿತ ಚುಕ್ಕಾಣಿ ಹಿಡಿಯಬಹುದು’ ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಉಪಾಧ್ಯಕ್ಷ ಗೋಪಾಲಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಚೌಡರೆಡ್ಡಿ, ಕೋಚಿಮುಲ್‌ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಕೋಲಾರ ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ, ಪಕ್ಷದ ಮುಖಂಡರಾದ ನಟರಾಜ್, ಶಬರೀಶ್, ಜಿ.ನರೇಶ್‌ಬಾಬು, ಆನಂದ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT