ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ಏಲಕ್ಕಿ ಬಾಳೆ ಬೆಳೆದು ಯಶಸ್ವಿಯಾದ ರೈತ

Published 2 ಫೆಬ್ರುವರಿ 2024, 6:54 IST
Last Updated 2 ಫೆಬ್ರುವರಿ 2024, 6:54 IST
ಅಕ್ಷರ ಗಾತ್ರ

ಮಾಲೂರು: ಬರಡು ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಬದುಕು ಹಿಗ್ಗಿಸಿಕೊಂಡವರು ಕ್ಷೇತ್ರನಹಳ್ಳಿಯ ರೈತ ವೆಂಕಟೇಶ್. ತಾಲ್ಲೂಕಿನ ಟೇಕಲ್ ಹೋಬಳಿಯ ಕ್ಷೇತ್ರನಹಳ್ಳಿ ಗ್ರಾಮದ  ವೆಂಕಟೇಶ್ ಅವರು ತಮ್ಮ 10 ಎಕರೆ ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ.

ವೆಂಕಟೇಶ್ ಅವರು ಒಂದು ಎಕರೆಯಲ್ಲಿ 600ರಿಂದ 650ರವರೆಗೆ ಗೆಡ್ಡೆಗಳನ್ನು ಹಾಕಿದ್ದಾರೆ. ಗೊನೆಗಳ ತೂಕ 20ರಿಂದ 25 ಕೆ.ಜಿ.ಯಷ್ಟು ಇದೆ. ಹಬ್ಬಗಳು ಸೇರಿದಂತೆ ಇತರ ಶುಭ ಕಾರ್ಯಗಳ ದಿನಗಳಂದು 1 ಕೆ.ಜಿ ಏಲಕ್ಕಿ ಬಾಳೆಯನ್ನು ₹ 100ಕ್ಕೆ ಮಾರಾಟ ಮಾಡಿದ್ದಾರೆ. ಉಳಿದ ದಿನಗಳಲ್ಲಿ ಒಂದು ಕೆ.ಜಿಗೆ ₹ 80 ಬೆಲೆ ಮಾರುಕಟ್ಟೆಯಲ್ಲಿದೆ. 

ಮಧ್ಯವರ್ತಿಗಳ ಸಮಸ್ಯೆ ಇಲ್ಲ: ಏಲಕ್ಕಿ ಬಾಳೆ ಖರೀದಿಗೆ ಮಧ್ಯರ್ವತಿಗಳ ಅವಶ್ಯಕತೆ ಇಲ್ಲ. ವ್ಯಾಪಾರಿಗಳೇ ನೇರವಾಗಿ ರೈತರ ತೋಟಗಳ ಬಳಿ ಬಂದು ಒಂದು ಕೆ.ಜಿಗೆ ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿ ಖರೀದಿ ಮಾಡುತ್ತಾರೆ. ಹಾಗಾಗಿ, ರೈತ ಮತ್ತು ಗ್ರಾಹಕರ ನಡುವೆ ಯಾವುದೇ ಮಧ್ಯವರ್ತಿಯ ಸಮಸ್ಯೆ ಇಲ್ಲಿ ಇರುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಏಲಕ್ಕಿ ಬಾಳೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂಚಿತವಾಗಿ ವ್ಯಾಪಾರಸ್ಥರು ಬುಕ್ ಮಾಡಿರುತ್ತಾರೆ. 

ಬೆಳೆಯುವ ವಿಧಾನ: ಜಮೀನಿನಲ್ಲಿ ಒಂದೂವರೆ ಅಡಿ ಆಳದ ಗುಂಡಿ ತೋಡಬೇಕು. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಕನಿಷ್ಠ 7 ಅಡಿಗಳಷ್ಟು ಅಂತರದಲ್ಲಿ ಬಾಳೆಗಡ್ಡೆಯನ್ನು ನೆಡಬೇಕು. ನೆಟ್ಟ ಒಂದು ತಿಂಗಳ ಬಳಿಕ ಗಡ್ಡೆಯು ಚಿಗುರೊಡೆಯಲು ಪ್ರಾರಂಭಿಸುತ್ತದೆ. 

ಈ ಸಂದರ್ಭದಲ್ಲಿ ಗಿಡಗಳಿಗೆ ವಾರಕ್ಕೊಮ್ಮೆ ನೀರು ಹಾಯಿಸಬೇಕು. ಆರು ತಿಂಗಳ ಬಳಿಕ ನಾಟಿ ಗೊಬ್ಬರ ಹಾಕಬೇಕು. 10 ತಿಂಗಳ ಬಳಿಕ ಬಾಳೆ ಫಸಲು ನೀಡಲಾರಂಭಿಸುತ್ತದೆ. ಇತರ ತಳಿಗಳಿಗೆ ಹೋಲಿಸಿದರೆ ಏಲಕ್ಕಿ ಬಾಳೆಗೆ ರೋಗಬಾಧೆ ಹಾಗೂ ಕೀಟಗಳ ಹಾವಳಿ ತೀರಾ ಕಡಿಮೆ. ನಾಟಿ ಮಾಡಲು ಎಕರೆಗೆ ಸುಮಾರು 1,200 ಗಡ್ಡೆ ಬೇಕಾಗಬಹುದು. ತೆಂಗು, ಅಡಕೆ ಮತ್ತು ಇತರ ದೀರ್ಘಕಾಲದ ಬೆಳೆಗಳ ನಡುವೆ ಅಂತರ ಬೆಳೆಯಾಗಿಯೂ ಬಾಳೆಯನ್ನು ಬೆಳೆಯಬಹುದು. 

ಏಲಕ್ಕಿ ಬಾಳೆ ಗಿಡಗಳು ಕನಿಷ್ಠ 8ರಿಂದ 12 ಅಡಿ ಎತ್ತರ ಬೆಳೆಯುತ್ತವೆ. ಸ್ವಲ್ಪ ಜೋರಾಗಿ ಗಾಳಿ ಬೀಸಿದರೂ ಗಿಡಗಳು ಬಾಗುತ್ತವೆ. ಗಾಳಿ ಹೆಚ್ಚಾದರೆ ಮುರಿದು ಬೀಳುತ್ತವೆ. ಈ ಸಮಸ್ಯೆಗೆ ರೈತ ವೆಂಕಟೇಶ್ ಉತ್ತರ ಕಂಡುಕೊಂಡಿದ್ದಾರೆ. ಅವರು ಬೆಳೆಸಿರುವ ಏಲಕ್ಕಿ ಬಾಳೆ ಗಿಡಗಳು ಸುಮಾರು 10ರಿಂದ 12 ಅಡಿ ಎತ್ತರ ಬೆಳೆದಿದ್ದರೂ, ಯಾವುದೇ ಗಿಡಕ್ಕೂ ಊರುಗೋಲುಗಳನ್ನು ನೀಡಿಲ್ಲ. ಗಿಡಗಳು ಗಾಳಿಗೆ ಬಾಗಿಲ್ಲ. ಅದಕ್ಕೆ ಕಾರಣ ಜುಲೈ, ಆಗಸ್ಟ್‌ ತಿಂಗಳ ಅವದಿಯಲ್ಲಿ ಬೀಸುವ ಬಿರುಗಾಳಿಗೆ ಬಾಳೆ ಗಿಡಗಳು ಸಿಕ್ಕದಂತೆ ಪೂರ್ವ–ಪಶ್ಚಿಮಾಭಿಮುಖವಾಗಿ ಸಾಲಿನಿಂದ ಸಾಲಿಗೆ 7 ಅಡಿ ಅಂತರದಲ್ಲಿ ಗೆಡ್ಡೆ ಹಾಕಿದ್ದಾರೆ. ಹೀಗಾಗಿ ಗಾಳಿ ಎಷ್ಟೇ ಬೀಸಿದರೂ ಗಿಡಗಳಿಗೆ ತೊಂದರೆ ಇಲ್ಲ.

ಬಾಳೆ ತೋಟದಲ್ಲಿಯೇ ಸಾವಾಯವ ಗೊಬ್ಬರ ತಯಾರಿಸಿಕೊಳ್ಳಲು ಅವಕಾಶ ಕಂಡುಕೊಂಡಿದ್ದಾರೆ. ಗಿಡದ ಪಕ್ಕದಲ್ಲಿ ಬೆಳೆಯುವ ಬೇಡವಾದ ಕಂದುಗಳನ್ನು ಹತ್ತು ದಿನಗಳಿಗೆ ಒಮ್ಮೆ ಕೊಯ್ದು ಹಾಕುತ್ತಾರೆ. ತೋಟದಲ್ಲೇ ಸಾಕಷ್ಟು ಒಣಗಿದ ಎಲೆಗಳು ಸಿಗುವುದರಿಂದ ಅವನ್ನು ಗಿಡಗಳ ನಡುವಿನ ಭಾಗದಲ್ಲಿ ಬಿಸಿಲು ನೆಲಕ್ಕೆ ಬೀಳದಂತೆ ಹೊದಿಕೆಯಂತೆ ಹಾಸಿದ್ದಾರೆ. ಈ ಒಣ ಎಲೆಗಳ ಹೊದಿಕೆ ಮೇಲೆ ಸುಣ್ಣದಕಲ್ಲಿನ ಪುಡಿಯನ್ನು ಎರಚಿ ನೀರು ಹಾಕಲಾಗಿದೆ. ಇದರಿಂದ ಎಲೆಗಳು ಕೊಳೆತು ಗೊಬ್ಬರವಾಗುತ್ತದೆ. ಬೇಸಿಗೆಯಲ್ಲಿ ಭೂಮಿಯಲ್ಲಿ ತೇವಾಂಶ ಉಳಿಯಲು ಸಹ ಸಹಕಾರಿಯಾಗುತ್ತದೆ ಎನ್ನುತ್ತಾರೆ ವೆಂಕಟೇಶ್. 

ಏಲಕ್ಕಿ ಬಾಳೆ ಗೊನೆ
ಏಲಕ್ಕಿ ಬಾಳೆ ಗೊನೆ

ತರಕಾರಿ ಬೆಳೆಗಳನ್ನು ಬೆಳೆಯುವುದಕ್ಕಿಂತ ರೈತರು ಬಾಳೆ ಬೆಳೆಯನ್ನು ದೈರ್ಯವಾಗಿ ಬೆಳೆಯಬಹುದು. ಕಾರಣ ಬಾಳೆ ಬೆಳೆ ಬೆಳೆದ ರೈತರು ನಷ್ಠಕ್ಕೆ ಗುರಿಯಾಗುವುದಿಲ್ಲ. ಹಬ್ಬ-ಹರಿದಿನಗಳಲ್ಲಂತೂ ಹೆಚ್ಚಿನ ಬೇಡಿಕೆ ಇರುತ್ತದೆ. ಹಣಕ್ಕೆ ಕಾಯಬೇಕಿಲ್ಲ. ಕೈಯಲ್ಲಿ ಹಣ ಇಟ್ಟು ಬಾಳೆ ಬೆಳೆ ಕಟಾವು ಮಾಡುತ್ತಾರೆ.

-ವೆಂಕಟೇಶ್ ರೈತ ಕ್ಷೇತ್ರನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT