ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ: ಜಿಲ್ಲೆಗೆ ನ್ಯಾಯ ಒದಗಿಸುತ್ತೇವೆ

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಭರವಸೆ
Last Updated 6 ಜುಲೈ 2021, 12:16 IST
ಅಕ್ಷರ ಗಾತ್ರ

ಕೋಲಾರ: ‘ಎತ್ತಿನಹೊಳೆ ಹಾಗೂ ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ಪಾಲಿನ ನೀರು ಒದಗಿಸುವ ಮೂಲಕ ಜಿಲ್ಲೆಗೆ ನ್ಯಾಯ ದೊರಕಿಸಿ ಕೊಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಭರವಸೆ ನೀಡಿದರು.

ನಗರದ ಕೋಲಾರ ಅಮಾನಿಕೆರೆ ಅಭಿವೃದ್ಧಿ ಮತ್ತು ಸುಂದರೀಕರಣ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ‘ಬರಪೀಡಿತ ಕೋಲಾರ ಜಿಲ್ಲೆಯ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶಕ್ಕಾಗಿಯೇ ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಎತ್ತಿನಹೊಳೆ ಯೋಜನೆಯಲ್ಲಿ ಇತರೆ ಜಿಲ್ಲೆಗಳಿಗೂ ನೀರು ಕೊಡಲಾಗುತ್ತದೆ. ಯೋಜನೆ ವ್ಯಾಪ್ತಿಯ ಕೊನೆಯ ಜಿಲ್ಲೆಯಾದ ಕೋಲಾರಕ್ಕೂ ನೀರು ಹರಿಸುವುದು ಸರ್ಕಾರದ ಜವಾಬ್ದಾರಿ. ನೀರು ಹಂಚಿಕೆಯಲ್ಲಿ ಜಿಲ್ಲೆಗೆ ಅನ್ಯಾಯವಾಗದಂತೆ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ. ಸದ್ಯದಲ್ಲೇ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ಕಾಮಗಾರಿ ವೇಗ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ’ ಎಂದು ವಿವರಿಸಿದರು.

‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧಿಕಾರಿಗಳ ಜತೆ ಚರ್ಚಿಸಿ ಜಿಲ್ಲೆಗೆ ಬರಬೇಕಿರುವ 400 ಎಂಎಲ್‌ಡಿ ನೀರು ಹರಿಸಲು ಇರುವ ಎಲ್ಲಾ ಅಡೆತಡೆ ನಿವಾರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಶಿಸ್ತುಕ್ರಮ ಜರುಗಿಸಿ: ‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಂತರ್ಜಲ ಹೆಚ್ಚಿಸಲು ಬೆಂಗಳೂರಿನ ಕೊಳಚೆ ನೀರನ್ನು ಜಿಲ್ಲೆಗೆ ಹರಿಸುವಂತೆ ರಮೇಶ್‌ಕುಮಾರ್‌ ಸದನದಲ್ಲಿ ಮನವಿ ಮಾಡಿದಾಗ ಕಣ್ಣಲ್ಲಿ ನೀರು ಬಂತು. ಕೆ.ಸಿ ವ್ಯಾಲಿ ನೀರು ಕಳವು ಮಾಡಿ ಕೃಷಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಹಿಂದೆ ಕೆ.ಸಿ ವ್ಯಾಲಿ ಕಾಮಗಾರಿಗೆ ತಡೆಯೊಡ್ಡಿದ್ದೆ. ರಸ್ತೆಗಳು ಹಾಳಾಗುತ್ತವೆ ಎಂಬ ಒಂದೇ ಕಾರಣಕ್ಕೆ ಕಾಮಗಾರಿ ನಡೆಸಲು ಬಿಟ್ಟಿರಲ್ಲಿಲ್ಲ. ರಮೇಶ್‌ಕುಮಾರ್ ಮಾತನಾಡಿದ ಬಳಿಕ ಪೈಪ್‌ಲೈನ್ ಕಾಮಗಾರಿಗೆ ಅವಕಾಶ ನೀಡಲಾಯಿತು’ ಎಂದು ಹೇಳಿದರು.

ಒತ್ತುವರಿ ತೆರವು: ‘ಅಮಾನಿಕೆರೆಯು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದರಿಂದ ಬೇಸರಗೊಂಡು ₹ 50 ಲಕ್ಷ ವೆಚ್ಚದಲ್ಲಿ ಕೆರೆಯಂಗಳದಲ್ಲಿನ ಜಾಲಿ ಮರ ಮತ್ತು ನಿರುಪಯುಕ್ತ ಮರಗಳನ್ನು ತೆರವುಗೊಳಿಸಲಾಗಿದೆ. ಜತೆಗೆ ಕೆರೆಯ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವೆಡೆ ಕೆರೆಯಂಗಳದ ಒತ್ತುವರಿ ಬಾಕಿಯಿದ್ದು, ಅದನ್ನು ಅಧಿಕಾರಿಗಳು ತೆರವುಗೊಳಿಸಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಸೂಚನೆ ನೀಡಿದರು.

‘ಅಟಲ್ ಭೂಜಲ ಯೋಜನೆಯಡಿ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ. ಹಳೆ ಜಲ ಮೂಲಗಳಾದ ಪೆನ್ನಾರ್, ಪಿನಾಕಿನಿ ನಾಲೆಗಳನ್ನು ಅಭಿವೃದ್ಧಿಪಡಿಸಬೇಕು. ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಬೇಕು. ಪ್ರಗತಿಯಲ್ಲಿರುವ ನೀರಾವರಿ ಯೋಜನೆಯಗಳ ಕಾಮಗಾರಿ ಪೂರ್ಣಗೊಂಡು ನೀರು ಹರಿದರೆ ಜಿಲ್ಲೆಯು ಮಲೆನಾಡಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮುಳಬಾಗಿಲು ಶಾಸಕ ಎಚ್‌.ನಾಗೇಶ್‌, ವಿಧಾನ ಪರಿಷತ್ ಸದಸ್ಯರಾದ ನಜೀರ್‌ ಅಹಮ್ಮದ್‌, ವೈ.ಎ.ನಾರಾಯಣಸ್ವಾಮಿ, ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಶ್ವೇತಾ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT