ಮಂಗಳವಾರ, ಮೇ 24, 2022
25 °C

ಯೋಗಾಭ್ಯಾಸ ಜೀವನದ ಅವಿಭಾಜ್ಯ ಅಂಗ: ಸಾಹಿತಿ ಸ.ರಘುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಯೋಗಾಭ್ಯಾಸವು ಜೀವನದ ಅವಿಭಾಜ್ಯ ಅಂಗ. ಒತ್ತಡ ಮುಕ್ತ ಬದುಕು ರೂಪಿಸಿಕೊಳ್ಳಲು ಯೋಗಾಭ್ಯಾಸ ದಾರಿದೀಪ’ ಎಂದು ಸಾಹಿತಿ ಸ.ರಘುನಾಥ್‌ ಅಭಿಪ್ರಾಯಪಟ್ಟರು.

ನಗರದ ಪತಂಜಲಿ ಯೋಗ ಮಂದಿರದಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಯೋಗ ಶಿಕ್ಷಣ ವಸಂತ ಶಿಬಿರ ಹಾಗೂ 15 ವರ್ಷ ಮೀರಿದ ಶಿಬಿರಾರ್ಥಿಗಳ ನೂತನ ವರ್ಗ ಉದ್ಘಾಟಿಸಿ ಮಾತನಾಡಿ, ‘ಯೋಗ ಎಂಬುದು ಕೇವಲ ಭೌತಿಕ ಕ್ರಿಯೆಯಲ್ಲ. ಅದು ಜೀವನದ ಪರಿಪೂರ್ಣತೆಯ ದಾರಿ. ಸ್ವಾರ್ಥದಿಂದ ನಿಸ್ವಾರ್ಥದ ಕಡೆಗೆ ಸಾಗುವುದೇ ಯೋಗ’ ಎಂದು ಹೇಳಿದರು.

‘ಯೋಗ ಕಲೆಯು ಭಾರತದ ಪ್ರಾಚೀನ ಆರೋಗ್ಯ ಸಂರಕ್ಷಣೆಯ ನೈಸರ್ಗಿಕ ಸಂಜೀವಿನಿಯಾಗಿದೆ. ಯೋಗಾಭ್ಯಾಸವು ಶರೀರ, ಮನಸ್ಸು, ಅಧ್ಯಾತ್ಮ ಹಾಗೂ ಆತ್ಮವನ್ನು ಒಗ್ಗೂಡಿಸುವ ಕ್ರಿಯೆಯಲ್ಲ. ಬದಲಿಗೆ ಜೀವನದ ದಾರಿ. ಮನುಷ್ಯನ ಕಣ ಕಣದಲ್ಲೂ ಪ್ರಕೃತಿಯ ಜತೆ ಜೀವನ ಸಾಕಾರಗೊಳಿಸುವ ಸಾಧನ. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮನಸ್ಸಿನ ನಿಗ್ರಹಕ್ಕೆ ಯೋಗವು ಅತ್ಯುತ್ತಮ ಸಾಧನ’ ಎಂದು ತಿಳಿಸಿದರು.

‘ಯಾವುದರಲ್ಲಿ ಭಕ್ತಿ ಇರುತ್ತದೆಯೋ ಅದರಲ್ಲಿ ಪಾವಿತ್ರ್ಯತೆ ಇರುತ್ತದೆ. ಯೋಗವು ಯಾವುದನ್ನೂ ಅಪವಿತ್ರ, ಕೀಳು ಎಂದು ಭಾವಿಸುವುದಿಲ್ಲ. ಸ್ಮಶಾನ ಕಾಯುವವನ ಕಾಯಕವು ಕೂಡ ದೈವಿಕವೇ. ಅವನು ಕೂಡ ಯೋಗಿಯೇ. ಮಹದೇವ ಈಶ್ವರನು ಆ ಕೆಲಸ ಮಾಡಿದ್ದಾನೆ. ಕನಕದಾಸ, ಪುರಂದರದಾಸ, ಬಸವಣ್ಣ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಅವರಂತಹ ಮಹನೀಯರಿಗೆ ಜನ್ಮ ಕೊಟ್ಟಂತಹ ನಮ್ಮ ದೇಶವನ್ನು ಮಕ್ಕಳು ಪ್ರೀತಿಸಬೇಕು’ ಎಂದರು.

ಪತಂಜಲಿ ಯೋಗ ಕೇಂದ್ರದ ಗೌರವಾಧ್ಯಕ್ಷ ನಂಜುಂಡಯ್ಯ ಶ್ರೇಷ್ಠಿ, ಉಪಾಧ್ಯಕ್ಷ ಜನಾರ್ದನ್‌, ಕಾರ್ಯದರ್ಶಿ ಎಸ್.ವಿ.ವೇಣುಗೋಪಾಲ್, ಖಜಾಂಚಿ ಎ.ವಿ.ಗೋವಿಂದರಾಜು, ವಲಯ ಸಂಚಾಲಕ ಮಾರ್ಕೊಂಡಯ್ಯ, ವಕೀಲ ಬಿಸಪ್ಪಗೌಡ ಪಾಲ್ಗೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು