ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿವಾರಣೆಗೆ ಯೋಗಾಭ್ಯಾಸ ದಾರಿದೀಪ: ಸಂಸದ ಮುನಿಸ್ವಾಮಿ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಂಸದ ಮುನಿಸ್ವಾಮಿ ಕಿವಿಮಾತು
Last Updated 21 ಜೂನ್ 2021, 15:35 IST
ಅಕ್ಷರ ಗಾತ್ರ

ಕೋಲಾರ: ‘ಯೋಗಾಭ್ಯಾಸವು ಜೀವನದ ಅವಿಭಾಜ್ಯ ಅಂಗವಾಗಬೇಕು. ಒತ್ತಡ ಮುಕ್ತ ಬದುಕು ರೂಪಿಸಿಕೊಳ್ಳಲು ಯೋಗಾಭ್ಯಾಸ ದಾರಿದೀಪ’ ಎಂದು ಸಂಸದ ಎಸ್‌.ಮುನಿಸ್ವಾಮಿ ಕಿವಿಮಾತು ಹೇಳಿದರು.

ಆಯುಷ್ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಆನ್‌ಲೈನ್ ಮೂಲಕ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ‘ಯೋಗಾಭ್ಯಾಸವು ಕೇವಲ ಭೌತಿಕ ಕ್ರಿಯೆಯಲ್ಲ. ಇದು ಜೀವನದ ಪರಿಪೂರ್ಣತೆಯ ದಾರಿ’ ಎಂದು ಹೇಳಿದರು.

‘ಯೋಗಾಭ್ಯಾಸವು ಶರೀರ, ಮನಸ್ಸು, ಅಧ್ಯಾತ್ಮ ಹಾಗೂ ಆತ್ಮವನ್ನು ಒಗ್ಗೂಡಿಸುವ ಕ್ರಿಯೆಯಲ್ಲ. ಬದಲಿಗೆ ಜೀವನದ ದಾರಿ. ಮನುಷ್ಯನ ಕಣ ಕಣದಲ್ಲೂ ಪ್ರಕೃತಿಯ ಜತೆ ಜೀವನ ಸಾಕಾರಗೊಳಿಸುವ ಸಾಧನ. ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮನಸ್ಸಿನ ನಿಗ್ರಹಕ್ಕೆ ಯೋಗವು ಅತ್ಯುತ್ತಮ ಸಾಧನ’ ಎಂದು ಸಲಹೆ ನೀಡಿದರು.

‘ಯೋಗ ಕಲೆಯು ಭಾರತದ ಪ್ರಾಚೀನ ಆರೋಗ್ಯ ಸಂರಕ್ಷಣೆಯ ನೈಸರ್ಗಿಕ ಸಂಜೀವಿನಿಯಾಗಿದೆ. ಮನುಕುಲದ ಉದ್ಧಾರಕ್ಕಾಗಿ ಋಷಿ ಮುನಿಗಳು ಯೋಗವನ್ನು ಕೊಡುಗೆಯಾಗಿ ನೀಡಿದ್ದಾರೆ. ಯೋಗಾಭ್ಯಾಸವು ಜೀವಕೋಶಗಳನ್ನು ಬಲಪಡಿಸುತ್ತದೆ. ಯೋಗಾಭ್ಯಾಸವನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಇದು ಜೀವನ ಶೈಲಿ ಮತ್ತು ಜೀವಿಸುವ ವಿಧಾನವಾಗಬೇಕು’ ಎಂದು ತಿಳಿಸಿದರು.

‘ಆಹಾರ ಕ್ರಮ, ಜೀವನ ಪದ್ಧತಿ, ಆಚಾರ ವಿಚಾರಗಳು ಮನಸ್ಸು ಮತ್ತು ದೇಹದ ಮೇಲೆ ಪ್ರಭಾವ ಬೀರಲಿವೆ. ಉತ್ತಮ ಆರೋಗ್ಯಕ್ಕೆ ಹಸಿರು ತರಕಾರಿ ಸೇವನೆ ಅವಶ್ಯಕ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ದೇಶದ ಕೊಡುಗೆ. ವಿಶ್ವ ಮಟ್ಟದಲ್ಲಿ ಯೋಗವನ್ನು ಗುರುತಿಸಲಾಗಿದ್ದು, ಇದು ಭಾರತೀಯರು ಹೆಮ್ಮೆ ಪಡುವ ವಿಚಾರ. ಪೂರ್ವಜರು ತಿಳಿಸಿದ ಯೋಗವನ್ನು ವಿಶ್ವದ ಎಲ್ಲಾ ದೇಶಗಳು ಅಭ್ಯಾಸ ಮಾಡುತ್ತಿರುವುದು ಭಾರತದ ಪರಂಪರೆಗೆ ಸಂದ ಗೌರವ’ ಎಂದು ಸಂತಸ ವ್ಯಕ್ತಪಡಿಸಿದರು.

ಆರೋಗ್ಯವೇ ಭಾಗ್ಯ: ‘ಆರೋಗ್ಯಕ್ಕಿಂತ ಬೇರೆ ಭಾಗ್ಯವಿಲ್ಲ. ಮನುಷ್ಯ ಆರೋಗ್ಯವಂತನಾಗಿರಲು ಯೋಗ ಮುಖ್ಯ. ಈ ಹಿಂದೆ ಯೋಗವು ಸರ್ವೇ ಸಾಮಾನ್ಯರ ಜೀವನ ಪದ್ಧತಿಯಾಗಿತ್ತು. ಅಲ್ಲದೇ, ಜೀವನ ಶೈಲಿಯಲ್ಲಿ ಹಾಸು ಹೊಕ್ಕಾಗಿತ್ತು. ದೇಶದ ಪರಂಪರೆಯಾಗಿ ಬೆಳೆದು ಬಂದ ಈ ಪದ್ಧತಿಯನ್ನು ಯಾರಿಗೂ ಹೇಳಿಕೊಡುವ ಅಗತ್ಯವಿರಲಿಲ್ಲ. ಕ್ಯಾನ್ಸರ್, ಮಿದುಳು ಜ್ವರದಂತಹ ಗಂಭೀರ ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಯೋಗಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

‘ಇಂದಿನ ಒತ್ತಡದ ಬದುಕಿನಲ್ಲಿ ಯೋಗ ಅತ್ಯಗತ್ಯವಾಗಿದೆ. ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆ ಹೆಚ್ಚುತ್ತಿರುವುದರಿಂದ ಯೋಗ ಅತಿ ಮುಖ್ಯ. ಈ ಹಿಂದೆ ಋಷಿ ಮುನಿಗಳು ಆರೋಗ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದರು. ಕಾಲ ಬದಲಾದಂತೆ ಒತ್ತಡದ ಜೀವನ ಪದ್ಧತಿಯಿಂದ ದೈಹಿಕ ಏರುಪೇರುಗಳಾಗಿ ಮನುಷ್ಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಪ್ರಾಣಾಯಾಮದಿಂದ ಉಸಿರಾಟದ ಸಮಸ್ಯೆ ಬಗೆಹರಿಯುತ್ತದೆ’ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌, ಆಯುಷ್ ಇಲಾಖೆ ಸಿಬ್ಬಂದಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT