ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಿ

ವಿಶ್ವ ಮಣ್ಣು ದಿನಾಚರಣೆಯಲ್ಲಿ ಎಪಿಎಂಸಿ ಅಧ್ಯಕ್ಷ ನಾಗರಾಜ್ ಕಿವಿಮಾತು
Last Updated 5 ಡಿಸೆಂಬರ್ 2018, 14:37 IST
ಅಕ್ಷರ ಗಾತ್ರ

ಕೋಲಾರ: ‘ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಲು ಒತ್ತು ನೀಡಬೇಕು’ ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಕಿವಿಮಾತು ಹೇಳಿದರು.

ಇಲ್ಲಿ ಬುಧವಾರ ನಡೆದ ವಿಶ್ವ ಮಣ್ಣು ದಿನಾಚರಣೆಯಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಚೀಟಿ ವಿತರಿಸಿ ಮಾತನಾಡಿ, ‘ಸಾವಯವ ಕೃಷಿ ಪದ್ಧತಿಯಿಂದ ಬೆಳೆ ಇಳುವರಿ ಕಡಿಮೆಯಾದರೂ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಇದರಿಂದ ರೈತರಿಗೆ ಯಾವುದೇ ನಷ್ಟವಾಗುವುದಿಲ್ಲ’ ಎಂದರು.

‘ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಜತೆಗೆ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮವಾಗುತ್ತಿದೆ. ಈ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸಬೇಕು. ಜತೆಗೆ ಸಾವಯವ ಕೃಷಿ ಪದ್ಧತಿ ಬಗ್ಗೆ ತರಬೇತಿ ನೀಡಬೇಕು’ ಎಂದು ತಿಳಿಸಿದರು.

ನೈಸರ್ಗಿಕ ಸಂಪತ್ತು: ‘ಮಣ್ಣು ನೈಸರ್ಗಿಕ ಸಂಪತ್ತು. ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ’ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಎಸ್.ಎನ್.ಮಂಜುನಾಥ್‌ಗೌಡ ಹೇಳಿದರು.

‘ರೈತರು ಲಾಭದಾಯಕ ಬೆಳೆ ಬೆಳೆಯಲು ಅತಿಯಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಮಣ್ಣಿನ ಸಂರಕ್ಷಣೆ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಮಣ್ಣಿನಿಂದ ಮಾತ್ರ ವ್ಯವಸಾಯ ಮಾಡಲು ಸಾಧ್ಯ. ರೈತರು ಮಣ್ಣಿನ ಬಗ್ಗೆ ಹೆಚ್ಚಿನ ಅರಿವು ಪಡೆದು ಬೆಳೆಗಳಿಗೆ ಉಪಯುಕ್ತ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೊಬ್ಬರ ಬಳಸುವುದು ಸೂಕ್ತ. ಈ ಹಿಂದೆ ಮಣ್ಣಿನ ಬಗ್ಗೆ ರೈತರಿಗೆ ಅರಿವಿರಲಿಲ್ಲ. ಈಗ ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳುವಂತೆ ಮಣ್ಣಿನ ಆರೋಗ್ಯ ಕಾಪಾಡುವ ಪರಿಸ್ಥಿತಿ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವಾಡಿಕೆಯಾಗಿದೆ: ‘ರೈತರು ಕಡ್ಡಾಯವಾಗಿ ಬೆಳೆ ನಾಟಿಗೂ ಮುನ್ನ ಮಣ್ಣು ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿನಲ್ಲಿ ಏನಾದರೂ ಲೋಪದೋಷವಿದ್ದರೆ ತಿಳಿಯುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ತಿಳಿಸಿದರು.

‘ಹಿಂದಿನಿಂದಲೂ ರಾಸಾಯನಿಕ ಗೊಬ್ಬರ ಬಳಕೆಯು ವಾಡಿಕೆಯಾಗಿದೆ. ಇದರಿಂದ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ರೈತರು ಬೆಳೆಯುವ ತರಕಾರಿ, ಹಣ್ಣು ನೋಡಕ್ಕೆ ಚೆನ್ನಾಗಿದ್ದರೂ ನಗರ ಪ್ರದೇಶದಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ತರಕಾರಿಗೆ ಈ ಹಿಂದೆ ಇದ್ದ ಬೇಡಿಕೆ ಈಗ ಇಲ್ಲವಾಗಿದೆ. ಜಿಲ್ಲೆಯ ತರಕಾರಿ ಖರೀದಿಸಲು ಗ್ರಾಹಕರು ಭಯಪಡುತ್ತಿದ್ದಾರೆ. ರೈತರು ತಿಪ್ಪೆ ಗೊಬ್ಬರ ತಯಾರು ಮಾಡಿದರೂ ಲಾಭದ ದೃಷ್ಟಿಯಿಂದ ಬೇರೆಯವರಿಗೆ ಮಾರುತ್ತಿರುವುದು ವಿಷಾದಕರ. ರೈತರು ತಮ್ಮ ಬೆಳೆಗಳಿಗೆ ತಿಪ್ಪೆ ಗೊಬ್ಬರ ಬಳಸಿದರೆ ರಾಸಾಯನಿಕ ಗೊಬ್ಬರಗಳಿಗಿಂತ ಎರಡರಷ್ಟು ಫಲವತ್ತತೆ ದೊರೆಯುತ್ತದೆ’ ಎಂದು ವಿವರಿಸಿದರು.

ರೈತನ ಕಣ್ಣು: ‘ಮಣ್ಣು ನಿಸರ್ಗದ ಅತ್ಯಮೂಲ್ಯ ಕೊಡುಗೆ. ಕೃಷಿ ಕ್ಷೇತ್ರದಲ್ಲಿ ಮಣ್ಣು ರೈತನ ಕಣ್ಣು. ಜಗತ್ತಿನ ಜೀವಸಂಕುಲದ ಬದುಕಿಗೆ ಮಣ್ಣೇ ಆಧಾರ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ನಿರ್ದೇಶಕ ಬಿ.ಟಿ.ಬಸವರಾಜು ಅಭಿಪ್ರಾಯಪಟ್ಟರು.

‘ಮಣ್ಣಿನ ಭೌತಿಕ ಗುಣ ಅಭಿವೃದ್ಧಿ ರೈತರಿಂದ ಮಾತ್ರ ಸಾಧ್ಯ. ಇದಕ್ಕೆ ಪೂರಕವಾಗಿ ಕೊಟ್ಟಿಗೆ ಗೊಬ್ಬರ ಬಳಸಬೇಕು. ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಬೇಕು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುವುದು ಉತ್ತಮ’ ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಪ್ರೊ.ಬಿ.ಜಿ.ಪ್ರಕಾಶ್, ಮುಖ್ಯಸ್ಥ ಕೆ.ತುಳಸಿರಾಮ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT