ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ವಾರಕ್ಕೆ ₹14 ಕೋಟಿ ವಹಿವಾಟಿಗೆ ಒಪ್ಪಂದ

Published 27 ಫೆಬ್ರುವರಿ 2024, 15:36 IST
Last Updated 27 ಫೆಬ್ರುವರಿ 2024, 15:36 IST
ಅಕ್ಷರ ಗಾತ್ರ

ಕೊಪ್ಪಳ: ರೈತರು, ರಫ್ತುದಾರರು ಹಾಗೂ ಖರೀದಿದಾರರ ನಡುವೆ ನೇರ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದಾಗಿ ಇಲ್ಲಿನ ತೋಟಗಾರಿಕಾ ಇಲಾಖೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರತಿ ವಾರಕ್ಕೆ ₹14 ಕೋಟಿ ವಹಿವಾಟು ನಡೆಸುವ ಒಪ್ಪಂದಕ್ಕೆ ರೈತರು ಮತ್ತು ಖರೀದಿದಾರರು ಸಹಿ ಹಾಕಿದರು.

ಹೀಗಾಗಿ ವಾರ್ಷಿಕ ₹700 ಕೋಟಿಗೂ ಅಧಿಕ ವಹಿವಾಟು ನಡೆಯಲಿದೆ. ತೋಟಗಾರಿಕಾ ಇಲಾಖೆ ₹500 ಕೋಟಿ ವಹಿವಾಟು ಒಪ್ಪಂದವಾಗಬಹುದು ಎನ್ನುವ ನಿರೀಕ್ಷೆ ಹೊಂದಿತ್ತು.

ಹೊರಜಿಲ್ಲೆಗಳಿಂದ 200 ಹಾಗೂ ಜಿಲ್ಲೆಯ 1000 ರೈತರು ಪಾಲ್ಗೊಂಡಿದ್ದರು. ಗುಜರಾತ್‌, ಕೇರಳ, ಮುಂಬೈ, ದೆಹಲಿ, ಛತ್ತೀಸಗಡ, ಬಾಂಗ್ಲಾದೇಶ ಸೇರಿದಂತೆ ವಿವಿಧೆಡೆಯಿಂದ ಖರೀದಿದಾರರು ಸಮಾವೇಶಕ್ಕೆ ಬಂದಿದ್ದರು. ದಾಳಿಂಬೆ, ಬಾಳೆ, ಪಪ್ಪಾಯ, ಪೇರಲ, ಟೊಮೆಟೊ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು.

ರೈತರೇ ದೇವರು: ಕೊಪ್ಪಳ ತೋಟಗಾರಿಕೆ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಹಯೋಗದಲ್ಲಿ ಆಯೋಜನೆಯಾಗಿದ್ದ ಸಮಾವೇಶಕ್ಕೆ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿ ‘ನಮ್ಮ ದೇಶದ ಅಭಿವೃದ್ಧಿ ಹಾಗೂ ನಮ್ಮ ಬದುಕು ನಿಂತಿರುವುದು ರೈತರ ಮೇಲೆ. ಅವರಿಂದ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದಲೇ ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತೇವೆ’ ಎಂದರು.

ತೋಟಗಾರಿಕೆ ಬೆಳೆಗಳು ಉತ್ತಮ ಆದಾಯ ನೀಡುತ್ತವೆ. ರೈತರು ಆಸಕ್ತಿ ವಹಿಸಿದರೆ ಇಲಾಖೆಯಿಂದ ಅಗತ್ಯ ಮಾರ್ಗದರ್ಶನ ಮಾಡಲಾಗುವುದು. ಸೂಕ್ತ ಮಾರುಕಟ್ಟೆಗಾಗಿ ಗುಣಮಟ್ಟ ಕಾಯ್ದುಕೊಳ್ಳಬೇಕು.
ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಕೊಪ್ಪಳ

‘ತೋಟಗಾರಿಕೆ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಸೂಕ್ತ ಔಷಧೋಪಚಾರಗಳನ್ನು ಬಳಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದು. ನಮ್ಮ ಜಿಲ್ಲೆಯ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯು ಸದಾ ರೈತರ ನೆರವಿಗೆ ಇದ್ದು, ರೈತರಿಗೆ ಉಪಯೋಗವಿರುವ ಸಲಹೆ, ಸೂಚನೆಗಳನ್ನು ಇಲಾಖೆಗಳಿಂದ ಪಡೆಯಬಹುದು. ಇಂದಿನ ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶದಲ್ಲಿ ಭಾಗವಹಿಸಿರುವ ರೈತರು ತಮ್ಮ ತೋಟಗಾರಿಕೆ ಬೆಳೆಗಳ ಸೂಕ್ತ ಮಾರಾಟಕ್ಕೆ ಮಾರಾಟ ತಂತ್ರಗಳು, ಉತ್ತಮ ಮಾರುಕಟ್ಟೆ, ರಫ್ತು ವಿಧಾನ ಮುಂತಾದವುಗಳ ಬಗ್ಗೆ ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಲಾಲ್‌ಬಾಗ್‌ನ ಕ್ಷೇತ್ರ ನರ್ಸರಿ ಹಾಗೂ ತಾಳೆ ಬೆಳೆ ಯೋಜನೆಯ ತೋಟಗಾರಿಕೆ ಹೆಚ್ಚುವರಿ ನಿರ್ದೇಶಕ ಪಿ.ಎಂ. ಸೊಬರದ, ಹಣ್ಣುಗಳ ವಿಭಾಗದ ಹೆಚ್ಚುವರಿ ನಿರ್ದೇಶಕ ಕೆ.ಬಿ.ದುಂಡಿ, ಕಲಬುರಗಿ ವಿಭಾಗದ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಲಾಲ್‌ಬಾಗ್‌ನ ತೋಟಗಾರಿಕೆ ಉಪನಿರ್ದೇಶಕಿ ಕ್ಷಮಾ ಪಾಟೀಲ, ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್. ಬಂತ್ನಾಳ, ಕಿಸಾನ್ ಸಾಥಿ ಸಂಸ್ಥೆಯ ಸಂಸ್ಥಾಪಕ ರಾಠೋಡ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ ಸೇರಿದಂತೆ ಅನೇಕ ಕಂಪನಿಗಳ ಪ್ರಮುಖರು, ರೈತ ಕಂಪನಿಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತರು
ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತರು

‘ಪ್ರದೇಶ ವಿಸ್ತರಣೆ ಮಾಡಿ’

ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ ಹಂತಹಂತವಾಗಿ ವಿಸ್ತರಣೆ ನಡೆಯುತ್ತಿದ್ದು ಇನ್ನಷ್ಟು ವಿಸ್ತರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಹೇಳಿದರು. ‘ಗುಣಮಟ್ಟದ ವಿಷಯದಲ್ಲಿ ಖರೀದಿದಾರರ ನಿರೀಕ್ಷೆ ಹೆಚ್ಚಾಗಿದೆ. ಜಿಲ್ಲೆಯ ಕನಕಗಿರಿಯಲ್ಲಿ 200 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಪಾರ್ಕ್‌ ಮಾಡಲು ಉದ್ದೇಶಿಸಲಾಗಿದೆ. ಭೂ ಸ್ವಾಧೀನಕ್ಕೆ ರೈತರು ಸಹಕಾರ ನೀಡಬೇಕಾಗಿದೆ’ ಎಂದರು.    ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ ‘ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಕಷ್ಟು ಯೋಜನೆಗಳಿವೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಕೋಲ್ಡ್ ಸ್ಟೋರೇಜ್ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆ ಮುಂತಾದ ಯೋಜನೆಗಳಿವೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ನರೇಗಾದಿಂದ ಸಹಾಯ ಪಡೆಯಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT