ಶನಿವಾರ, ಸೆಪ್ಟೆಂಬರ್ 18, 2021
21 °C
ಬೆಟಗೇರಿ ಗ್ರಾಮದಲ್ಲಿ ನೀರಿಗಾಗಿ ತಪ್ಪದ ಅಲೆದಾಟ

ಹಿನ್ನೀರು ಪ್ರದೇಶದಲ್ಲಿ ಬತ್ತಿದ ಅಂತರ್ಜಲ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದ ತಾಲ್ಲೂಕಿನ 20ಕ್ಕಿಂತಲೂ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಕಂಡು ಬಂದಿದ್ದಿಲ್ಲ. ಆದರೆ ಇತ್ತೀಚೆಗೆ ಬಿಸಿಲಿನ ಪ್ರಖರತೆಯಿಂದ ಅಂತರ್ಜಲ ಬತ್ತುತ್ತಿರುವುದರಿಂದ ತೀವ್ರ ಸಮಸ್ಯೆಯಾಗುತ್ತಿದ್ದು, ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ತಾಲ್ಲೂಕಿನ ಬೆಟಗೇರಿ ಗ್ರಾಮಕ್ಕೆ ನೀರು ಪೂರೈಸಲು ಹಿನ್ನೀರಿನಲ್ಲಿ ಕೊಳವೆಬಾವಿ ಕೊರೆದು ಪೂರೈಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ನೀರು ಪೂರೈಕೆ ನಿಂತು ಹೋಗಿದ್ದು, ಗ್ರಾಮಸ್ಥರು ಜಲಮೂಲಗಳನ್ನು ಹುಡುಕಿಕೊಂಡು ನೀರು ತರಬೇಕಾದ ಸಂಕಷ್ಟ ಎದುರಿಸುತ್ತಿದ್ದಾರೆ. ಮಾಡುವ ಕೆಲಸ ಬಿಟ್ಟು ಮನೆಯ ಒಬ್ಬ ಸದಸ್ಯರು ನೀರು ತರಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.

ಅಲ್ಲದೆ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಮತ್ತಷ್ಟು ಗೋಳು ಹೆಚ್ಚಿಸಿದೆ. ಗ್ರಾಮದಲ್ಲಿ ಮೂರು ಶುದ್ಧ ನೀರಿನ ಘಟಕಗಳು ಇದ್ದು, ಯಾರಿಗೂ ಶುದ್ಧ ನೀರು ದೊರೆಯದೇ ಇರುವುದು ದುರಂತ. ಒಂದು ಘಟಕ ಈಚೆಗೆ ಉದ್ಘಾಟನೆಯಾಗಿದ್ದು, ಇನ್ನೊಂದು ಘಟಕದ ಕಾಮಗಾರಿ ವರ್ಷದಿಂದ ನಡೆಯುತ್ತಲೇ ಇದೆ. ಗ್ರಾಮದ ಹೃದಯಭಾಗದಲ್ಲಿರುವ ದುರ್ಗಾದೇವಿ ದೇವಸ್ಥಾನದ ಪಕ್ಕದ ಘಟಕದಿಂದ ಮಾತ್ರ ಶುದ್ಧ ನೀರು ಬರುತ್ತದೆ. ಅದು ವಿದ್ಯುತ್ ಬಿಲ್ ಪಾವತಿಸಿದರೆ ಮಾತ್ರ. ಇಲ್ಲದಿದ್ದರೆ ವಾರಗಟ್ಟಲೆ ಬಂದ್ ಆಗುತ್ತದೆ. ಅಲ್ಲದೆ ತಾಲ್ಲೂಕಿನಲ್ಲಿ ₹ 2 ಮತ್ತು ₹ 3ಕ್ಕೆ ಒಂದು ಕ್ಯಾನ್‌ಗೆ ಶುದ್ಧ ಕುಡಿಯುವ ನೀರು ದೊರೆತರೆ ಈ ಊರಲ್ಲಿ ₹ 5ಕ್ಕೆ ದೊರೆಯುತ್ತದೆ.

ಇದರಿಂದ ಘಟಕ ನಿರ್ವಹಣೆ ಮಾಡುವ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಹಲವಾರು ಬಾರಿ ವಾಗ್ವಾದ ಕೂಡಾ ನಡೆದಿದೆ. ಅಳವಂಡಿ ಹೋಬಳಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಮಳೆಯ ಅಭಾವ ಮತ್ತು ಅಂತರ್ಜಲದ ಸಮಸ್ಯೆ ತೀವ್ರವಾಗಿದೆ. ಈ ಮಧ್ಯೆ ಅನೇಕ ಗ್ರಾಮಗಳು ಕುಡಿಯುವ ನೀರಿಗೆ ತೀವ್ರ ಪರದಾಡುವ ಪರಿಸ್ಥಿತಿ ಇದೆ. ಬೇಸಿಗೆಯಲ್ಲಿಯಂತೂ ಈ ಸಮಸ್ಯೆ ಬೃಹದಾಕಾರವಾಗಿ ನಿಲ್ಲುತ್ತದೆ. ಸರ್ಕಾರ ಮತ್ತು ಖಾಸಗಿಯವರು ಕೊರೆಯಿಸಿದ ಕೊಳವೆ ಬಾವಿಗಳು ಕೆಲವೇ ತಿಂಗಳಲ್ಲಿ ಬತ್ತಿ ಹೋಗುವುದರಿಂದ ಶಾಶ್ವತ ಯೋಜನೆ ರೂಪಿಸಬೇಕು ಎಂಬುವುದು ಈ ಭಾಗದ ಜನರ ಬಹುದಿನ ಒತ್ತಾಯ.

ಶುದ್ಧ ಕುಡಿಯುವ ನೀರು ಎಲ್ಲ ಹಕ್ಕು. ಆದರೆ ನೀರಿನ ಕುರಿತೇ ನಡೆಯುವ ಸಭೆಗಳಲ್ಲಿ ಕಾಟಾಚಾರಕ್ಕೆ ಪ್ರಸ್ತಾವ ಸಲ್ಲಿಸುವುದು. ಅಂಕಿ-ಅಂಶಗಳ ದಾಖಲೆಯೊಂದಿಗೆ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರೆ ಅಲ್ಲಿಗೆ ಮುಗಿಯಿತು. ವಾಸ್ತವ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ಗ್ರಾಮದ ರೈತರು, ಬಡವರು ನೀರಿಗಾಗಿ ಪರದಾಡುವ ಸಂಕಷ್ಟ ಅಷ್ಟಿಷ್ಟಲ್ಲ. 'ಮನೆಯಲ್ಲಿ ಕೈ ಮಾಡಿದರೆ ನೀರು ಬರುವ ಅಧಿಕಾರಿಗಳ ಮುಂದೆ ಹೇಳಿದರೆ ಏನು ಪ್ರಯೋಜನ' ಎಂಬ ಗೋಳು ಗ್ರಾಮಸ್ಥರದು.

'ಗ್ರಾಮಕ್ಕೆ ನೀರು ಪೂರೈಸುವ ಹನಕುಂಟಿ ಗ್ರಾಮದ ಹಿನ್ನೀರಿನ ಪ್ರದೇಶದಲ್ಲಿ ಇದ್ದ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆ ಬರುತ್ತಿರುವುದರಿಂದ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸಿ ನೀರು ನೀಡಬೇಕು' ಎಂದು ಗ್ರಾಮದ ರೈತ ಕೋಟೇಶ ಕೋಮಲಾಪುರ ಮನವಿ ಮಾಡುತ್ತಾರೆ.

* ಗ್ರಾಮದ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿದರೆ ಉಪಕಾರವಾಗುತ್ತದೆ
ಕೋಟೇಶ ಕೋಮಲಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು