ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆ ಮೂಲಕ ಶಕ್ತಿವಂತರಾಗಲು ಕರೆ

ಆರ್ಯ ಈಡಿಗ ಸಂಘದಿಂದ ನಾರಾಯಣ ಗುರುಗಳ 168ನೇ ಜಯಂತಿ ಆಚರಣೆ
Last Updated 7 ಅಕ್ಟೋಬರ್ 2022, 14:39 IST
ಅಕ್ಷರ ಗಾತ್ರ

ಕೊಪ್ಪಳ: ‘ಹಿಂದುಳಿದವರು, ದೀನದಲಿತರು ಹಾಗೂ ಬಡವರಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟು ದೇಶದಲ್ಲಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಆದರ್ಶಗಳನ್ನು ನಾವೆಲ್ಲರೂ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಎಲ್ಲರೂ ಒಂದಾಗಿ ಸಂಘಟನೆ ಮೂಲಕ ಶಕ್ತಿವಂತರಾಗಬೇಕಿದೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಜಿಲ್ಲೆಯ ಆರ್ಯ ಈಡಿಗ ಸಂಘದ ಬ್ರಹ್ಮಶ್ರೀ ನಾರಾಯಣ ಗುರುಗಳ ಸೇವಾ ಸಮಿತಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾರಾಯಣ ಗುರುಗಳ 168ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಸಂವಿಧಾನ ರಚನೆಗೆ ನಾರಾಯಣ ಗುರುಗಳ ಕೊಡುಗೆ ಬಹಳಷ್ಟಿದೆ. ಗುರುಗಳ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಆದೇಶ ಹೊರಡಿಸಿದ್ದು ಸಿದ್ದರಾಮಯ್ಯ. ಅವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮಾಜಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಿದ್ದಾರೆ’ ಎಂದು ನೆನಪಿಸಿಕೊಂಡರು.

‘ನಾರಾಯಣ ಗುರುಗಳು ನೀಡಿದ ಸಮಾನತೆಯಿಂದಲೇ ನಮ್ಮ ಸಮಾಜದ ಅನೇಕ ಜನ ಈಗ ಉನ್ನತ ಸ್ಥಾನಕ್ಕೇರಿದ್ದಾರೆ. ಸಂಘಟನೆ ಮೂಲಕ ಎಲ್ಲರೂ ಒಂದಾದರೆ ಅಧಿಕಾರ ಸಿಕ್ಕೇ ಸಿಗುತ್ತದೆ. ಆಗ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ನಮ್ಮ ಸಮಾಜದಲ್ಲಿರುವ ಸಣ್ಣ ತೊಡಕುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗೋಣ’ ಎಂದು ಸಲಹೆ ನೀಡಿದರು.

‘ನಾರಾಯಣ ಗುರುಗಳಿಗೆ ಅಗೌರವ ತೋರಿಸುವವರಿಗೆ ನಾವು ಧಿಕ್ಕಾರ ಹೇಳಲೇಬೇಕು. ಪ್ರತಿಯೊಬ್ಬರೂ ಅವರನ್ನು ಗೌರವದಿಂದ ಕಾಣಬೇಕು. ನಮಗೆ ಅಧಿಕಾರ ಕೊಡಿ. ನಿಮಗೆ ಸೌಲಭ್ಯಗಳನ್ನು ಕೊಡುತ್ತೇವೆ’ ಎಂದು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಎಲ್ಲರೂ ಜಾತಿ ಹಂಗುಬಿಟ್ಟು ಸಹೋದರತ್ವ ಭಾವನೆ ಹೊಂದಬೇಕು. ಅಂಬೇಡ್ಕರ್‌ ನಂಬಿಕೊಂಡಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ನಮ್ಮ ಅಸ್ತ್ರಗಳಾಗಬೇಕು. ಈಗಿ ಬಿಜೆಪಿ ಸರ್ಕಾರ ಜನರಿಗೆ ಒಂದೂ ಜನಪರ ಕಾರ್ಯಕ್ರಮಗಳನ್ನು ಮಾಡಿಲ್ಲ’ ಎಂದರು.

ಸೋಲೂರು ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ ‘ಕೇರಳವನ್ನು ಬುದ್ಧಿಜೀವಿಗಳ ನಾಡು ಆಗಿ ಮಾಡಿದ ಹೆಗ್ಗಳಿಕೆ ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಅವರ ಸಿದ್ದಾಂತಗಳ ಅಡಿ ಮುಂದುವರಿದರೆ ಮಾತ್ರ ಸಮಾಜವನ್ನು ಉನ್ನತಿಗೆ ಏರಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕೊಪ್ಪಳ ಆರ್ಯ ಈಡಿಗ ಸಂಘದ ಗೌರವಾಧ್ಯಕ್ಷ ಪ್ರದೀಪ್ ಹಾನಗಲ್‌, ಅಧ್ಯಕ್ಷ ಈರಣ್ಣ ಹುಲಿಗಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಬೆಂಗಳೂರಿನ ಜೆ.ಪಿ. ಪ್ರತಿಷ್ಠಾನದ ಅಧ್ಯಕ್ಷ ಡಾ. ಲಕ್ಷ್ಮಿನರಸಯ್ಯ, ಸಮಾಜದ ಮುಖಂಡರಾದ ಪಾಂಡುರಂಗ ಗಂಗಾವತಿ, ಎ.ವಿ. ರವಿ ಸೇರಿದಂತೆ ಸಮಾಜದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

ಪ್ರತ್ಯೇಕ ನಿಗಮ; ಹೋರಾಟದ ಎಚ್ಚರಿಕೆ

ಕೊಪ್ಪಳ: ‘ಬಡವರಿಗೆ, ದೀನದಲಿತರಿಗೆ ನಾರಾಯಣ ಗುರುಗಳು ಗಟ್ಟಿ ಧ್ವನಿ ಕೊಟ್ಟಿದ್ದಾರೆ. ನಾವು ಏನೇ ಆಸ್ತಿ ಮಾಡಿದರೂ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು. ನಮ್ಮ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಎನ್ನುವ ನಮ್ಮ ಬೇಡಿಕೆಗೆ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ’ ಎಂದುವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್‌ ಬೇಸರ ವ್ಯಕ್ತಪಡಿಸಿದರು.

‘ಈಡಿಗ ಸಮಾಜದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಒಂದು ತಿಂಗಳಲ್ಲಿ ಹೋರಾಟದ ಯೋಜನೆ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT