ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿಯಲ್ಲೇ ಶಿಶು ಪಾಲನಾ ಕೇಂದ್ರ

ಮಹಿಳಾ ನೌಕರರಿಗೆ ಸುಲಭವಾದ ಮಕ್ಕಳ ನಿರ್ವಹಣೆ
Last Updated 24 ಸೆಪ್ಟೆಂಬರ್ 2022, 6:17 IST
ಅಕ್ಷರ ಗಾತ್ರ

ಕೊಪ್ಪಳ: ನೌಕರಿಗೆ ಬರುವ ಮಹಿಳಾ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಕೊಪ್ಪಳ ಜಿಲ್ಲಾಡಳಿತ ತನ್ನ ಭವನದಲ್ಲಿಯೇ ಶಿಶುಗಳ ಆರೈಕೆ ಕೇಂದ್ರ ಸ್ಥಾಪಿಸಿದ್ದು, ಇದರಿಂದಾಗಿ ಮಹಿಳಾ ನೌಕರರು ನಿಶ್ಚಿಂತೆಯಿಂದ ಕೆಲಸ ಮಾಡುವಂತಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಸಹಯೋಗದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ, ಬೇರೆ ಬೇರೆ ಇಲಾಖೆಗಳ ಕೆಲಸಕ್ಕಾಗಿ ಹೊರಗಡೆಯಿಂದ ಬರುವ ಮಹಿಳೆಯರು ತಮ್ಮ ಆರು ತಿಂಗಳಿಂದ ಮೂರು ವರ್ಷದ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋದರೆ ಅವರನ್ನು ಬೆಳಿಗ್ಗೆಯಿಂದ ಸಂಜೆ ತನಕ ಕೇಂದ್ರದ ಸಿಬ್ಬಂದಿಯೇ ಆರೈಕೆ ಮಾಡುತ್ತಾರೆ.ಪ್ಲೇ ಹೋಂ ರೀತಿ ಕೇಂದ್ರವನ್ನು ಸಿದ್ಧಪಡಿಸಲಾಗಿದೆ.

ಕೇಂದ್ರದಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ, ಶೌಚಾಲಯ, ಮಗುವಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಹಾಗೂ ಸ್ಯಾನಿಟರಿ ಪ್ಯಾಡ್‌ ವೆಂಡಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಮಕ್ಕಳಿಗೆ ಆಟದ ಸಾಮಗ್ರಿಗಳು, ತೊಟ್ಟಿಲು, ಗೋಡೆಗಳಿಗೆ ಬಣ್ಣಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಕೇಂದ್ರದಲ್ಲಿರುವ ಒಬ್ಬ ಶಿಕ್ಷಕಿ ಹಾಗೂ ಇಬ್ಬರು ಸಹಾಯಕಿ ಸಿಬ್ಬಂದಿ ಮಕ್ಕಳಿಗೆ ಊಟ ಮಾಡಿಸಿ ಆಟವಾಡಿಸುತ್ತಾರೆ. ಗೋಡೆಯ ಮೇಲಿನ ಚಿತ್ರಗಳನ್ನು ತೋರಿಸಿ ಮಕ್ಕಳನ್ನು ಖುಷಿಪಡಿಸುತ್ತಾರೆ. ಗಂಜಿ, ಹಣ್ಣು ಹಾಗೂ ಹಾಲು ಹೀಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ.

ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರ ತನಕ ಕೇಂದ್ರ ತೆರೆದಿರುತ್ತದೆ. ಇದಕ್ಕಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಇದು ಉಚಿತವಾಗಿದೆ.

ಬಾಗಲಕೋಟೆಯಿಂದ ಜಿಲ್ಲಾಡಳಿತ ಭವನಕ್ಕೆ ಬಂದಿದ್ದ ಒಂದೂವರೆ ವರ್ಷದ ಮಗನ ತಾಯಿ ಹಾಗೂ ಶಿಕ್ಷಕಿ ಸಾವಿತ್ರಿ ಸಜ್ಜನ ’ಎಲ್ಲಾ ಕೆಲಸಕ್ಕೂ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾಗುತ್ತಿತ್ತು. ಇಲ್ಲವಾದರೆ ಮೊಬೈಲ್‌ ಕೊಟ್ಟು ಸುಮ್ಮನೆ ಕೂಡಿಸಬೇಕಾಗುತ್ತಿತ್ತು. ಆದರೆ, ಕೊಪ್ಪಳದಲ್ಲಿ ಶಿಶುಪಾಲನಾ ಕೇಂದ್ರದಲ್ಲಿ ಮಗುವನ್ನು ಬಿಟ್ಟು ನನ್ನೆಲ್ಲಾ ಕೆಲಸವನ್ನು ಅರಾಮವಾಗಿ ಮುಗಿಸಿಕೊಂಡು ಬಂದೆ. ಇದರಿಂದ ತಾಯಂದಿರಿಗೆ ಹೆಚ್ಚು ಅನುಕೂಲವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಲಸದ ಜಾಗದಲ್ಲಿಯೇ ಶಿಶುಪಾಲನಾ ಕೇಂದ್ರ ಆರಂಭಿಸಿದ್ದರಿಂದ ನೌಕರಿ ಮಾಡುವ ಮಹಿಳೆಯರಿಗೆ ಅನುಕೂಲವಾಗಿದೆ. ನಿತ್ಯ 10ರಿಂದ 15 ಮಕ್ಕಳು ಕೇಂದ್ರಕ್ಕೆ ಬರುತ್ತಾರೆ.

- ಭೀಮವ್ವ ಬನ್ನಿಕಟ್ಟಿ, ಶಿಶುಪಾಲನಾ ಕೇಂದ್ರದ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT