ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಂಡ ನಂತರ ಅಧಿಕ ರಕ್ತಸ್ರಾವ: ಗರ್ಭಿಣಿ ಸಾವು

Last Updated 9 ಆಗಸ್ಟ್ 2021, 15:24 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಸೇಬಿನಕಟ್ಟಿ ಗ್ರಾಮದ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ಘಟನೆ ಸಂಭವಿಸಿದೆ ಎಂದು ಕುಟುಂಬದವರು ಶಂಕಿಸಿದ್ದಾರೆ.

ಮಂಜುಳಾ ಯಮನೂರಪ್ಪ ಮೇಟಿ (25) ಮೃತ ಮಹಿಳೆ. ಗುರುವಾರ ಹೂಲಗೇರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇಬಿನಕಟ್ಟಿ ಗ್ರಾಮದ ಇತರೆ 14 ಜನ ಗರ್ಭಿಣಿಯರು ಸೇರಿ ಒಟ್ಟು 70 ಜನರಿಗೆ ಲಸಿಕೆಯ ಮೊದಲ ಡೋಸ್‌ ಹಾಕಲಾಗಿತ್ತು. ಮೊದಲು ಆರೋಗ್ಯವಾಗಿಯೇ ಇದ್ದ ಮಹಿಳೆಗೆ ಮನೆಗೆ ಬಂದ ನಂತರ ರಾತ್ರಿ ಏಕಾಏಕಿ ರಕ್ತಸ್ರಾವ ಉಂಟಾಗಿತ್ತು.

ತಕ್ಷಣ ಇಳಕಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿಯ ವೈದ್ಯರು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು. ರಾತ್ರಿ ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಒಂದು ಯೂನಿಟ್‌ ರಕ್ತವನ್ನೂ ನೀಡಿದ್ದರು. ಆದರೂ ರಕ್ತಸ್ರಾವ ನಿಲ್ಲದೆ ಮಹಿಳೆ ನಿತ್ರಾಣಗೊಂಡಿದ್ದರಿಂದ ತುರ್ತು ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಶಿಫಾರಸು ಮಾಡಿದ್ದರು. ಕೊಪ್ಪಳಕ್ಕೆ ಕರೆದೊಯ್ಯುವ ದಾರಿ ಮಧ್ಯೆ ಮಹಿಳೆ ಮೃತಪಟ್ಟಿದ್ದಾರೆ.

ಆಕ್ರೋಶ: ಮಹಿಳೆ ಸಾವಿಗೀಡಾಗು ತ್ತಿದ್ದಂತೆ ಅಸಮಾಧಾನ ಗೊಂಡ ಕುಟುಂಬದವರು ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ಸಮಸ್ಯೆ ಕಾಣಿಸಿ ಕೊಂಡಿದೆ. ಮೊದಲು ಆರೋಗ್ಯವಾಗಿಯೇ ಇದ್ದರೂ ಲಸಿಕೆಯ ದುಷ್ಪರಿಣಾಮದಿಂದ ಸಾವು ಸಂಭವಿಸಿದೆ ಎಂದು ಹನುಮಸಾಗರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.

ಕೋವಿಡ್‌ ಲಸಿಕೆಯಿಂದ ಘಟನೆ ಸಂಭವಿಸಿದೆ ಎಂಬ ದೂರಿನ ಕಾರಣಕ್ಕೆ ಕೊಪ್ಪಳದ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ತಜ್ಞರು (ಫೊರೆನ್ಸಿಕ್) ಇಲ್ಲಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

‘ಇತರೆ ಗರ್ಭಿಣಿಯರಿಗೂ ಅದೇ ಬ್ಯಾಚ್‌ನ ಲಸಿಕೆ ಹಾಕಲಾಗಿದೆ. ಬೇರೆ ಯಾರಲ್ಲಿಯೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೂ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಫೊರೆನ್ಸಿಕ್‌ ತಜ್ಞರಿಂದಲೇ ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT