ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌: ಕೈಗೂಡದ ಕೂಗು

ಕೊಪ್ಪಳ ಜಿಲ್ಲೆಯಲ್ಲಿ ಶಾಖೆಗಳಿದ್ದರೂ ಈಗಲೂ ರಾಯಚೂರಿನಲ್ಲಿ ಮುಖ್ಯ ಕಚೇರಿ
Last Updated 18 ಆಗಸ್ಟ್ 2022, 2:58 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಕೊಪ್ಪಳ ‘ಬೆಳ್ಳಿ ಹಬ್ಬ’ದ ಸಂಭ್ರಮದಲ್ಲಿದೆ. ಆದರೆ, ಇದುವರೆಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಸ್ಥಾಪನೆಯಾಗುವ ಆಸೆ ಮಾತ್ರ ಕೈಗೂಡಿಲ್ಲ.

ಕೊಪ್ಪಳಕ್ಕೆ ಮೊದಲು ಜಿಲ್ಲೆಯಾಗಿದ್ದ ರಾಯಚೂರಿನ ಡಿಸಿಸಿ ಬ್ಯಾಂಕ್‌ ಈಗಲೂ ಇಲ್ಲಿನ ರೈತರಿಗೆ ಆಸರೆಯಾಗಿದೆ. ಈ ಬ್ಯಾಂಕ್‌ ಕೊಪ್ಪಳ ನಗರದಲ್ಲಿ ಎರಡು, ಗಂಗಾವತಿ, ಯಲಬುರ್ಗಾ, ಕುಕನೂರು, ಕುಷ್ಟಗಿ, ಹನುಮಸಾಗರ, ಕಾರಟಗಿ, ಮುನಿರಾಬಾದ್‌ ಹಾಗೂ ತಾವರಗೇರಾದಲ್ಲಿ ತಲಾ ಒಂದು ಶಾಖೆಗಳನ್ನು ಹೊಂದಿದೆ.

ಕೊಪ್ಪಳ ಜಿಲ್ಲೆಯಲ್ಲಿ 102 ವ್ಯವಸಾಯ ಸೇವಾ ಸಹಕಾರ ಸಂಘಗಳು (ವಿಎಸ್ಎಸ್ಎನ್) ಇದ್ದು, ಆರ್‌ಡಿಸಿಸಿ ಬ್ಯಾಂಕ್‌ ಕಳೆದ ವರ್ಷ ₹621 ಕೋಟಿ ಸಾಲ ನೀಡಿದೆ. ಈ ವರ್ಷ ₹641 ಕೋಟಿ ಸಾಲ ನೀಡುವ ಗುರಿ ಹೊಂದಿದೆ. ₹1,000 ಕೋಟಿ ಠೇವಣೆಯಿದೆ.

ಪ್ರತ್ಯೇಕವಾಗಿ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಮಾಡಲು ಠೇವಣೆ ಮತ್ತು ಸಾಲ ನೀಡುವ ಪ್ರಮಾಣದಲ್ಲಿ ನಿಗದಿತ ಗುರಿ ಮುಟ್ಟಬೇಕಿದೆ. ಪ್ರತ್ಯೇಕ ಬ್ಯಾಂಕ್‌ ಸ್ಥಾಪನೆಗೆ ಹಿಂದೆ ಹಲವು ಬಾರಿ ಪ್ರಸ್ತಾವ ಕಳುಹಿಸಲಾಗಿದ್ದರೂ ನಬಾರ್ಡ್‌ ಅದನ್ನು ತಿರಸ್ಕರಿಸಿದೆ.

ಜಿಲ್ಲೆಯಲ್ಲಿ ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣೆ ಮಾಡುವ ರೈತರ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಲ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆ ಯಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುತ್ತಿದ್ದು,ಹಣಕಾಸಿನ ನಿರ್ವಹಣೆ ಆಧಾರದ ಮೇಲೆ ಪ್ರತ್ಯೇಕ ಬ್ಯಾಂಕ್‌ ಸ್ಥಾಪನೆಯ ಪ್ರಯತ್ನಕ್ಕೆ ಬಲ ಬರುತ್ತದೆ ಎನ್ನುತ್ತಾರೆ ತಜ್ಞರು.

‘ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗಬೇಕು ಎನ್ನುವ ಪ್ರಯತ್ನ ಮೊದಲಿ ನಿಂದಲೂ ನಡೆಯುತ್ತಿದೆ. ಬಹಳಷ್ಟು ಜಿಲ್ಲೆಗಳಲ್ಲಿ ಈ ಬ್ಯಾಂಕ್‌ಗಳನ್ನು ಮೂಲ ಜಿಲ್ಲೆಯಿಂದ ಇನ್ನೂ ಪ್ರತ್ಯೇಕ ಮಾಡಿಲ್ಲ. ಮಾಡಿದರೆ ಖಂಡಿತವಾಗಿಯೂ ಅನುಕೂಲವಾಗಿ ವಹಿವಾಟು ಕೂಡ ಹೆಚ್ಚಾಗುತ್ತದೆ’ ಎಂದು ಸಹಕಾರಿ ಧುರೀಣ ರಮೇಶ ವೈದ್ಯ ಅಭಿಪ್ರಾಯಪಡುತ್ತಾರೆ.

ಕುಕನೂರು ತಾಲ್ಲೂಕಿನ ತಳಕಲ್‌ ಗ್ರಾಮದ ರೈತ ಮಲ್ಲಿಕಾರ್ಜುನ ಗಡಗಿ ’ಜಿಲ್ಲೆಯಾಗಿ 25 ವರ್ಷಗಳಾದರೂ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾಗಿಲ್ಲ ಎನ್ನುವುದೇ ಅಚ್ಚರಿ. ನಮ್ಮಲ್ಲಿ ಸ್ಥಾಪನೆಯಾದರೆ ರೈತರಿಗೆ ವೇಗವಾಗಿ ಸಾಲ ದೊರೆಯುತ್ತದೆ. ಅಧಿಕಾರ ವಿಕೇಂದ್ರೀಕರಣವಾಗಿ ಕೆಲಸ ಸುಲಭ ವಾಗುತ್ತದೆ. ಸಾಲದ ಅರ್ಜಿ ವಿಲೇವಾರಿ ಸೇರಿದಂತೆ ಹಲವು ಕೆಲಸಗಳಿಗೆ ನೇರವಾಗಿ ಕೇಂದ್ರ ಕಚೇರಿಯ ಅಧಿಕಾರಿಗಳನ್ನೇ ಸುಲಭವಾಗಿ ಭೇಟಿಯಾಗಬಹುದು. ನಮಗೆ ಪ್ರತ್ಯೇಕವಾದರೆ ರೈತರಿಗೆ ಓಡಾಡುವುದು ಅನುಕೂಲವಾಗುತ್ತದೆ’ ಎಂದರು.

ಪ್ರತ್ಯೇಕವಾಗದ ಅಂಚೆ ವಿಭಾಗ

ಕೊಪ್ಪಳ: ಜಿಲ್ಲೆಗಳಲ್ಲಿ ಒಟ್ಟು ಅಂಚೆ ಕಚೇರಿ ಮತ್ತು ಸಿಬ್ಬಂದಿ ಹೊಂದಿರುವ ವಿಷಯದಲ್ಲಿ ಕೊಪ್ಪಳವೇ ಮುಂಚೂಣಿಯಲ್ಲಿದ್ದರೂ ಪ್ರತ್ಯೇಕ ಅಂಚೆ ವಿಭಾಗ ಸ್ಥಾಪನೆಯಾಗಿಲ್ಲ. ವಿಭಾಗೀಯ ಕಚೇರಿಯ ಅಧಿಕಾರಿಗಳನ್ನು ಭೇಟಿಯಾಗಲು ಈಗಲೂ ಗದಗಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ.

ಧಾರವಾಡ ವಿಭಾಗದ ವ್ಯಾಪ್ತಿಯಲ್ಲಿದ್ದ ಗದಗವನ್ನು 1980ರಲ್ಲಿ ಪ್ರತ್ಯೇಕ ವಿಭಾಗ ಮಾಡಲಾಯಿತು. 1997ರಲ್ಲಿ ಕೊಪ್ಪಳ ಪ್ರತ್ಯೇಕ ಜಿಲ್ಲೆಯಾದರೂ 2003ರ ಅಕ್ಟೋಬರ್‌ 1ರಂದು ಕೊಪ್ಪಳ ಜಿಲ್ಲೆಯನ್ನು ಗದಗ ವಿಭಾಗಕ್ಕೆ ಸೇರ್ಪಡೆ ಮಾಡಲಾಯಿತು.

ಗದಗ ಜಿಲ್ಲೆಯಲ್ಲಿ ಒಟ್ಟು 168 ಅಂಚೆ ಕಚೇರಿ ಮತ್ತು 271 ಸಿಬ್ಬಂದಿಯಿದ್ದರೆ, ಕೊಪ್ಪಳ ಜಿಲ್ಲೆಯಲ್ಲಿ 218 ಅಂಚೆಕಚೇರಿ ಹಾಗೂ 366 ಸಿಬ್ಬಂದಿ ಇದ್ದಾರೆ. ಆದರೂ ಈಗಲೂ ವಿಭಾಗೀಯ ಕಚೇರಿ ಗದಗನಲ್ಲಿಯೇ ಇದೆ. ಪ್ರತ್ಯೇಕ ವಿಭಾಗವಾದರೆ ಆಡಳಿತಾತ್ಮಕವಾಗಿ ಕೆಲಸ ಸುಲಭವಾಗುತ್ತದೆ. ಜಟಿಲ ಸಮಸ್ಯೆಗಳಿದ್ದರೂ ನೇರವಾಗಿ ಅಧಿಕಾರಿಗಳನ್ನು ಭೇಟಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.

ಈಗ ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಕಾರಣದಿಂದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತಿದೆ

ವಿಶ್ವನಾಥ ಪಾಟೀಲ್ ತೋರಣದಿನ್ನಿ,ಆರ್‌ಡಿಸಿಸಿ ಬ್ಯಾಂಕ್‍ ಅಧ್ಯಕ್ಷ

-ಗದಗಕ್ಕಿಂತಲೂ ಕೊಪ್ಪಳದಲ್ಲಿ ಸಿಬ್ಬಂದಿ ಹೆಚ್ಚಿದ್ದರೂ ಪ್ರತ್ಯೇಕ ವಿಭಾಗ ಸ್ಥಾಪನೆಗೆ 2.6 ಅಂಕಗಳು ಬೇಕಿವೆ. ಸದ್ಯಕ್ಕೆ 2.3 ಅಂಕಗಳು ಇವೆ.

ಚಿದಾನಂದ ಪದ್ಮಸಾಲಿ.ಅಂಚೆ ಅಧೀಕ್ಷಕ, ಗದಗ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT