ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಅಪಾರ ಭಕ್ತರ ನಡುವೆ ಸಿದ್ಧೇಶ್ವರ ಮಹಾರಥೋತ್ಸವ

Published 21 ಫೆಬ್ರುವರಿ 2024, 13:22 IST
Last Updated 21 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ಅಳವಂಡಿ (ಕೊಪ್ಪಳ ಜಿಲ್ಲೆ): ಕೊಪ್ಪಳ ತಾಲ್ಲೂಕಿನ ಅಳವಂಡಿಯ ಸಿದ್ಧೇಶ್ವರ ಮಠ ಭಾವೈಕ್ಯದ ತಾಣವಾಗಿದ್ದು, ಈಗ ಇಲ್ಲಿ ಜಾತ್ರೆ ಸಡಗರ ಮನೆ ಮಾಡಿದೆ.

ಭವ್ಯ ಪರಂಪರೆ ಹಾಗೂ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠ ಉಜ್ಜಯಿನಿ ಪಂಚಪೀಠ ಪರಂಪರೆಗೆ ಸೇರಿದೆ.

ಪ್ರತಿ ವರ್ಷವೂ ನಡೆಯುವ ಸಿದ್ದೇಶ್ವರ ಜಾತ್ರೆಗೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಸಹಸ್ರಾರು ಸಂಖ್ಯೆಯ ಜನರ ನಡುವೆ ಮಹಾ ರಥೋತ್ಸವ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.

ಬುಧವಾರ ಬೆಳಿಗ್ಗೆಯಿಂದಲೇ ವಿವಿಧ ಗ್ರಾಮಗಳ ಭಕ್ತರು ಟ್ರಾಕ್ಟರ್, ಎತ್ತಿನ ಬಂಡಿ, ಪಾದಯಾತ್ರೆ, ಬೈಕ್ ಮೂಲಕ ರಥೋತ್ಸವಕ್ಕೆ ಬಂದಿದ್ದು, ಗ್ರಾಮೀಣ ಸೊಗಡು ಅನಾವರಣ ಮಾಡಿದಂತಿತ್ತು.

ಸಂಜೆ ಹೊತ್ತೇರುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ರಥೋತ್ಸವಕ್ಕೆ ಮೊದಲು ಧ್ವಜ ಲಿಲಾವ್ ಕಾರ್ಯಕ್ರಮ ನಡೆಯಿತು. ಭಕ್ತರು ಬಣ್ಣದೋಕುಳಿ ಆಡಿ ಖುಷಿ ಪಟ್ಟರು. ನಂತರ ಮಠದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಧ್ವಜಾರೋಹಣ ಮಾಡಿ ರಥೋತ್ಸವಕ್ಕೆ ಚಾಲನೆ ಕೊಟ್ಟರು.

ರಥೋತ್ಸವದ ವೇಳೆ ಸಿದ್ದೇಶ್ವರ ಮಹಾರಾಜ್ ಕೀ ಜೈ, ಮರುಳಾರಾಧ್ಯ ಮಹಾರಾಜ್ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಭಕ್ತರು ಭಕ್ತಿ, ಭಾವದಿಂದ ರಥೋತ್ಸವಕ್ಕೆ ಉತ್ತತ್ತಿ, ಹಣ್ಣು, ಹೂಗಳನ್ನು ಎಸೆದು ತಮ್ಮ ಹರಕೆ ತೀರಿಸಿದರು. ದೀವಟಿಗೆ ಹಿಡಿದು ಭಕ್ತರು ಮುಂದೆ ಸಾಗುತ್ತಿದ್ದರೆ, ಅದರ ಹಿಂದೆ ತೇರು ಸಾಗುತ್ತಿತ್ತು.

ರಥೋತ್ಸವದ ಮುಂದೆ ಭಜನೆ, ಬಾಂಜ್ ಮೇಳ, ಡೊಳ್ಳಿನ ಮೇಳ , ವಿವಿಧ ಮೋಜು ಮಜಲುಗಳು ಭಕ್ತರ ಗಮನ ಸೆಳೆದವು. ಮೆರವಣಿಗೆ ತೇರಿನ ಮುಂದೆ ಸಾಗಿ ರಥೋತ್ಸವಕ್ಕೆ ಕಳೆ ತಂದವು.

ಮಠದ ಸಿದ್ದೇಶ್ವರ ಮೂರ್ತಿಗೆ, ಶಾಂತಮ್ಮ ದೇವಿ, ವೀರಭದ್ರೇಶ್ವರ, ಬಸವೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿದರು.

ದೇವಸ್ಥಾನದ ಮಂಭಾಗದಲ್ಲಿ ಕಾಯಿ, ಕರ್ಪೂರ,ಹೂವಿನ ಹಾರ , ಮಕ್ಕಳ ಆಟಿಕೆ ಸಾಮಗ್ರಿ, ತರಹೇವಾರಿ ತಿನಿಸು ವಿವಿಧ ಅಂಗಡಿಗಳಲ್ಲಿ ಖರೀದಿ ಹಾಗೂ ಜೋಕಾಲಿ ಆಡುವ ಮೂಲಕ ಸಂಭ್ರಮಿಸಿದರು.

ಗ್ರಾಮದ ಮನೆಯ ಮುಂದೆ ರಂಗೋಲಿ ಹಾಕಿ ಅಲಂಕಾರ ಮಾಡಲಾಗಿತ್ತು.

ಬಂದ ಎಲ್ಲ ಭಕ್ತರಿಗೆ ಅನ್ನ, ಸಾರು, ಬದನೆಕಾಯಿ ‌ಪಲ್ಲೆ, ಸಿಹಿ ಬೂಂದಿ, ಕಾಳು ಪಲ್ಲೆ, ಜೋಳದ ರೊಟ್ಟಿ ಹೀಗೆ ತರಹೇವಾರಿ ತಿನಿಸು ಮಾಡಲಾಗಿತ್ತು. ಯಾವುದೇ ಧರ್ಮ, ಬೇಧವಿಲ್ಲದೆ ಎಲ್ಲ ಸಮುದಾಯದ ಜನ ಭಕ್ತಿಯಿಂದ ವಿವಿಧ ದವಸ ಧಾನ್ಯಗಳನ್ನು ಮಠಕ್ಕೆ ಅರ್ಪಿಸಿದ್ದರು.

ಭಕ್ತರಿಗೆ ಮಠದಿಂದ ದಾಸೋಹದ ವ್ಯವಸ್ಥೆಯಾದರೆ, ಅಳವಂಡಿ ಗ್ರಾಮಸ್ಥರಲ್ಲಿ ಹಬ್ಬದ ವಾತಾವರಣ ‌ನಿರ್ಮಾಣವಾಗಿತ್ತು. ಮನೆಯನ್ನು ಅಲಂಕಾರ ಮಾಡಿರುವ ಜನ ಊರಿನಿಂದ ಸಂಬಂಧಿಕರನ್ನು ಜಾತ್ರೆಗೆ ಕರೆಯಿಸಿ ಕರ್ಚಿಕಾಯಿ, ಸಿಹಿ ಮಾದಲಿ ತಯಾರಿಸಿ ಉಣಬಡಿಸಿ ಆತಿಥ್ಯ ನೀಡಿದರು.

ಅಳವಂಡಿಯ ಸಿದ್ದೇಶ್ವರ ಮಠದ ಮಹಾ ರಥೋತ್ಸವ

ಅಳವಂಡಿಯ ಸಿದ್ದೇಶ್ವರ ಮಠದ ಮಹಾ ರಥೋತ್ಸವ

-ಪ್ರಜಾವಾಣಿ ಚಿತ್ರ / ಭರತ್ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT