ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು, ಸಂಕಷ್ಟಗಳನ್ನು ಮೆಟ್ಟಿನಿಂತ ‘ಮಹಾನಾಯಕ’

ಜಿಲ್ಲೆಯ ವಿವಿಧೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮರಣೆ: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅಭಿಮತ
Last Updated 15 ಏಪ್ರಿಲ್ 2021, 7:15 IST
ಅಕ್ಷರ ಗಾತ್ರ

ಕೊಪ್ಪಳ: ‘ಡಾ.ಬಿ.ಆರ್.ಅಂಬೇಡ್ಕರ್ ಕುರಿತಾದ ಪುಸ್ತಕಗಳನ್ನು ಓದುವ ಮೂಲಕ ಅವರ ಜೀವನದ ಸಂಘರ್ಷ, ಸಾಧನೆ ಅರಿಯಬೇಕು. ಅವರು ಕಷ್ಟಗಳನ್ನು ಮೆಟ್ಟಿನಿಂತ ಮಹಾನಾಯಕ’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಕುರಿತು ಸಾಕಷ್ಟು ಲೇಖಕರು ಪುಸ್ತಕ ರಚಿಸಿದ್ದಾರೆ. ಆ ಪುಸ್ತಕಗಳನ್ನು ಓದಿ, ಅದರಲ್ಲಿರುವ ಮಾಹಿತಿ, ಚಿಂತನೆ ಅರಿತು ನಾಲ್ಕು ಜನಕ್ಕೆ ತಿಳಿಸಬೇಕು. ಇತಿಹಾಸ ತಿಳಿಯದವನು-ಇತಿಹಾಸ ಸೃಷ್ಟಿಸಲಾರ. ಆದ್ದರಿಂದ ಅಂಬೇಡ್ಕರ್ ಅವರ ಜೀವನದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿಯಲೇಬೇಕು. ಅವರ ಬಗೆಗಿನ ವಿಚಾರಗಳನ್ನು ತಿಳಿದು, ಸ್ವಂತ ಅಭಿಪ್ರಾಯ ಹಾಗೂ ನಿಲುವು ವ್ಯಕ್ತಪಡಿಸಬೇಕು ಎಂದರು.

ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಚ್‌.ಬಸವರಾಜ ಉಪನ್ಯಾಸ ನೀಡಿ,‘ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷ ಬಜೆಟ್‌ನಲ್ಲಿ ಯಾವ, ಯಾವ ಯೋಜನೆಗಳು ಘೋಷಣೆಯಾಗುತ್ತವೆ ಎಂಬುದರ ಇಲಾಖಾವಾರು ಮಾಹಿತಿಯನ್ನು ಸಾಮಾನ್ಯ ಜನರಿಗೆ ನೀಡಬೇಕು. ಯೋಜನೆಗಳನ್ನು ಸಮರ್ಪಕವಾಗಿ ಸೂಕ್ತ ಫಲಾನುಭವಿಗಳಿಗೆ ತಲುಪಿಸಬೇಕು’ ಎಂದರು.

ಅಂಬೇಡ್ಕರ್ ಅವರು 60ಕ್ಕೂ ಅಧಿಕ ದೇಶಗಳ ಸಂವಿಧಾನಗಳನ್ನು ಅರಿತು, ಅಧ್ಯಯನ ಮಾಡಿ, ನಮ್ಮ ದೇಶದ ಸಂವಿಧಾನವನ್ನು ರೂಪಿಸಿ, ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಗಾಂಧಿ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟರೆ, ಅಂಬೇಡ್ಕರ್ ಆ ಸ್ವಾತಂತ್ರ್ಯವನ್ನು ಹೇಗೆ ಅನುಭವಿಸಬೇಕು ಎಂದು ತಿಳಿಸಿಕೊಟ್ಟರು ಎಂದರು.

ಹಿಂದೂ ಕೋಡ್ ಬಿಲ್ ಮೂಲಕ ಹೆಣ್ಣುಮಕ್ಕಳ ರಕ್ಷಣೆ, ಹಕ್ಕು ರಕ್ಷಣೆಗೆ ಹೋರಾಡಿದರು. ಕ್ಯಾಬಿನೆಟ್‌ನಲ್ಲಿ ಹಿಂದೂ ಕೋಡ್-ಬಿಲ್ ಬಗ್ಗೆ ಸರಿಯಾಗಿ ಚರ್ಚೆಯಾಗದೆ ಇರುವ ಕಾರಣದಿಂದ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದರು.

ಜಿಲ್ಲಾ ಪಂಚಾಯತಿ ಸದಸ್ಯ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯರಾದ ಸಿದ್ದು ಮ್ಯಾಗೇರಿ ಹಾಗೂ ಗುರುರಾಜ ಹಲಗೇರಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಶಿಂತ್ರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಸಮುದಾಯದ ಮುಖಂಡರಾದ ಗಾಳೆಪ್ಪ ಪೂಜಾರ, ಗವಿಸಿದ್ದಪ್ಪ ಬೆಲ್ಲದ ಹಾಗೂ ಡಾ.ಜ್ಞಾನಸುಂದರ್ ಕಂದಾರಿ ಇದ್ದರು.

ಮಹನೀಯರ ಪುತ್ಥಳಿಗೆ ಮಾಲಾರ್ಪಣೆ:ಡಾ.ಬಿ.ಆರ್.ಅಂಬೇಡ್ಕರ್ ಅವರ‌ 130ನೇ ಜನ್ಮ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ನಗರದ ಹೊಸಪೇಟೆ ರಸ್ತೆಯ ಉದ್ಯಾನವನದಲ್ಲಿರುವ ಮಹನೀಯರ ಪುತ್ಥಳಿಗೆ ಪೂಜೆ ಹಾಗೂ ಮಾಲಾರ್ಪಣೆ ಮಾಡಲಾಯಿತು.

ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಎಸ್., ನಗರಸಭೆ ಸದಸ್ಯರಾದ ಮುತ್ತುರಾಜ್ ಕುಷ್ಟಗಿ ಹಾಗೂ ಸಿದ್ದು ಮ್ಯಾಗೇರಿ ಇದ್ದರು.

ಆದರ್ಶ ಅಳವಡಿಸಿಕೊಳ್ಳಿ’

ಯಲಬುರ್ಗಾ: ‘ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ಅಂಬೇಡ್ಕರ್‌ ಅವರು ಸಮಾನತೆಯ ಹರಿಕಾರ’ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ತಾಲ್ಲೂಕು ಛಲವಾದಿ ಮಹಾಸಭಾದ ವತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ಪದ್ಧತಿಯ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ಕಲ್ಪಿಸಿಕೊಡುವ ಮೂಲಕ ಸಮಾಜ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ’ ಎಂದರು.

ಮುಖಂಡ ರಮೇಶ ಸುಗ್ಗೇನಹಳ್ಳಿ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಅಧ್ಯಕ್ಷ ಡಿ.ಕೆ. ಪರಶುರಾಮ ಛಲವಾದಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯರಾದ ಸಿ.ಎಚ್.ಪೋಲೀಸ್ ಪಾಟೀಲ, ಈರಪ್ಪ ಕುಡಗುಂಟಿ, ಮುಂಕುದರಾವ ಭವನಿಮಠ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಭಾವಿಮನಿ, ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಉಪ್ಪಾರ ಸಮಾಜದ ಅಧ್ಯಕ್ಷ ಬಸವರಾಜ ಪೂಜಾರ, ಬಿ.ಎಂ.ಶಿರೂರು, ಕೃಷಿ ಇಲಾಖೆಯ ತಾಂತ್ರಿಕಾಧಿಕಾರಿ ಶರಣಪ್ಪ ಗುಂಗಾಡಿ, ಶಂಕರ ಕಟ್ಟಿ, ಸಿದ್ದಪ್ಪ ಕಟ್ಟಿಮನಿ, ಛತ್ರಪ್ಪ ಛಲವಾದಿ, ಮಲ್ಲಿಕಾರ್ಜುನ ಜಕ್ಕಲಿ, ವಿಜಯ ಜಕ್ಕಲಿ, ಅಂದಪ್ಪ ಹಾಳಕೇರಿ, ಕನಕೇಶ ಪೆಂಟರ್, ಪ.ಪಂ. ಸರ್ವ ಸದಸ್ಯರು ಭಾಗವಹಿಸಿದ್ದರು.

‘ಸಮುದಾಯಗಳಿಗೆ ಬದುಕು ನೀಡಿದ ನಾಯಕ’

ಹನುಮಸಾಗರ: ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವ ಮೂಲಕ ತುಳಿತಕ್ಕೊಳಪಟ್ಟವರಿಗೆ ಬದುಕು ನೀಡಿದರು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ ಅಭಿಪ್ರಾಯಪಟ್ಟರು.

ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ 130ನೇ ಜಯಂತಿ ಪ್ರಯುಕ್ತ ‘ಜೈ ಭೀಮ ಕಟ್ಟಡ ಕೂಲಿ ಕಾರ್ಮಿಕರ ಯುವಕ ಸಂಘ’ ಉದ್ಘಾಟಸಿ ಮಾತನಾಡಿದರು.

‘ಅಂಬೇಡ್ಕರ್‌ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಲೇಖಕ ಕಿಶನರಾವ್ ಕುಲಕರ್ಣಿ ಮಾತನಾಡಿ,‘ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗುವ ಸಂವಿಧಾನ ರಚಿಸುವ ಮೂಲಕ ಭಾರತೀಯರಿಗೆ ನಿತ್ಯ ಸ್ಮರಣೀಯರಾಗಿದ್ದಾರೆ’ ಎಂದು ಅವರು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ,ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ದ್ಯಾವಣ್ಣವರ ಹಾಗೂ ಬಸವರಾಜ ಅಕ್ಕಿ ಮಾತನಾಡಿದರು.

ಮಾದಿಗ ಸಮಾಜದ ಅಧ್ಯಕ್ಷ ನೀಲಕಂಠಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರವ್ವ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಎಪಿಎಂಸಿ ಅಧ್ಯಕ್ಷ ಶರಣಪ್ಪ ಹುಲ್ಲೂರ, ಪ್ರಮುಖರಾದ ಸೂಚಪ್ಪ ದೇವರಮನಿ, ಚಂದ್ರು ಹಿರೇಮನಿ, ಗ್ರಾ.ಪಂ ಸದಸ್ಯರಾದ ದುರಗವ್ವ ಪೂಜಾರ, ಕಸ್ತೂರೆವ್ವ ಸಂದಿಮನಿ, ನೀಲವ್ವ ಹಕ್ಕಿ, ಶ್ರೀಶೈಲ ಮೋಟಗಿ, ಶಿವಪುತ್ರಪ್ಪ ಕಂಪ್ಲಿ, ಭವಾನಿಸಾ ಪಾಟೀಲ, ರುದ್ರಗೌಡ ಗೌಡಪ್ಪನವರ, ರಮೇಶ ಬಡಿಗೇರ, ಶ್ರೀನಿವಾಸ ಜಹಗೀರದಾರ, ಚಂದಪ್ಪ ಗುಡಗಲದಿನ್ನಿ, ಚಂದಪ್ಪ ಕುದರಿ, ಹನುಮಂತ ಪೂಜಾರ, ನೀಲಪ್ಪ ಕುದರಿ, ಶ್ರೀನಿವಾಸ ಇಲಕಲ್ಲ, ಸೋಮಪ್ಪ ಸಂದಿಮನಿ, ವಿಜಯಕುಮಾರ ಹಿರೇಮನಿ, ದುರಗಪ್ಪ ಹರಿಜನ, ಪರಶುರಾಮ ಗುಡಿಮನಿ ಇದ್ದರು.

ವೆಂಕಟೇಶ ಹೊಸಮನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT