ಬುಧವಾರ, ಜನವರಿ 22, 2020
28 °C
ಆನೆಗೊಂದಿ ಉತ್ಸವಕ್ಕೆ ಅದ್ದೂರಿ ಚಾಲನೆ

ಮೆರವಣಿಗೆಗೆ ಮೆರುಗು ತಂದ ಕಲಾತಂಡ

ಶಿವಕುಮಾರ್.ಕೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನ ಐತಿಹಾಸಿಕ 'ಆನೆಗೊಂದಿ ಉತ್ಸವ 2020ಕ್ಕೆ' ಗುರುವಾರ ಅದ್ದೂರಿ ಚಾಲನೆ ಸಿಕ್ಕಿತು. 

40 ಕ್ಕೂ ಹೆಚ್ಚು ಕಲಾ ತಂಡಗಳೊಂದಿಗೆ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಿಂದ ಸಾಗಿದ ಭವ್ಯ ಮೆರವಣಿಗೆಗೆ ಶಾಸಕ ಪರಣ್ಣ ಮುನವಳ್ಳಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ, ಡೊಳ್ಳು ಬಾರಿಸಿ ಚಾಲನೆ ನೀಡಿದರು.

ಮನ ಸೆಳೆದ ಕಲಾತಂಡಗಳು: ಇನ್ನು, ಉತ್ಸವದ ಭವ್ಯ ಮೆರವಣಿಗೆಯಲ್ಲಿ ಕಾರವಾರ, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಯಲಬುರ್ಗಾ, ತಾವರಗೇರಾ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು, ಮಹಿಳೆಯರ ಡೊಳ್ಳು ಕುಣಿತ, ಜಗ್ಗಲಿಗೆ ಮೇಳ, ಮೋಜಿನ ಗೊಂಬೆ, ಹಗಲು ವೇಷ, ಕಣಿಹಲಗಿ, ಕಟಿಹಲಗಿ, ಹಲಗೆ ವಾದನ, ತಾಷಾ ಡ್ರಮ್, ಮರಗಾಲು ಕುಣಿತ, ಸಮಾಳ ವಾದ್ಯ, ಲಂಬಾಣಿ ನೃತ್ಯ, ಪೂಜಾ ಕುಣಿತ, ಕಹಳೆ ಹೆಜ್ಜೆಮೇಳ, ಸೋಮನ ಕುಣಿತ, ಗಾರುಡಿ ಗೊಂಬೆ ಸೇರಿದಂತೆ ಸ್ಥಳೀಯ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಕಲಾ ಪ್ರದರ್ಶನವನ್ನು ನೀಡಿದರು.

ಗ್ರಾಮದ ಪ್ರಮುಖ ರಸ್ತೆ ಹಾಗೂ ಆನೆಗೊಂದಿಯ ರಾಜಬೀದಿಯಲ್ಲಿ ಮೆರವಣಿಗೆ ಸಾಗಿತು. ಶ್ರೀ ರಂಗನಾಥೇಶ್ವರ ದೇಗುಲದ ಸಮೀಪಿಸುತ್ತಿದ್ದಂತೆ ಮೆರವಣಿಗೆಯಲ್ಲಿ ಪಾಲ್ಗೋಂಡ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಮಟೆ ಬಾರಿಸುವ ಮೂಲಕ ಕಲಾವಿದರಿಗೆ ಮತ್ತಷ್ಟು ಹುಮ್ಮಸ್ಸು ತುಂಬಿದರು. ಬಳಿಕ ರಂಗನಾಥ ಸ್ವಾಮಿಯ ದರ್ಶನ ಪಡೆದರು.

ಗಮನ ಸೆಳೆದ ಫಲಪುಷ್ಪ ಪ್ರದರ್ಶನ: ಗಗನ ಮಹಲ್ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಫಲಪುಪ್ಪ ಪ್ರದರ್ಶನವನ್ನು ಸಚಿವ ಸಿ.ಟಿ.ರವಿ ಉದ್ಘಾಟಿಸಿದರು. ಬಳಿಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ತೋಟಗಾರಿಕೆ ಇಲಾಖೆ ಕೌಶಲವನ್ನು ಗುಣಗಾನ ಮಾಡಿದರು.

ಫಲಪುಷ್ಪ ಪ್ರದರ್ಶನದಲ್ಲಿ ವರ್ಟಿಕಲ್ ಗಾರ್ಡನ್, ಹಣ್ಣಿನಲ್ಲಿ ಕಲಾಕೃತಿಗಳ ರಚನೆ, ವಿವಿಧ ಬಗೆಯ ಆರ್ಯವೇದಿಕ್ ಸಸ್ಯಗಳು, ಹೂವುಗಳಾದ ಸೆಲೋಸಿಯಾ, ಆರ್ಕಿಸ್ಟ್, ಕಾನೇಶನ್, ಸುಗಂಧರಾಜ, ಜರ್ಲೇರಾ, ಪೆಟೇನೀಯಾ, ಸಾಲ್ವಿಯಾ, ಗಜೇನಿಯಾ, ಗುಲಾಬಿ, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಹೂವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹೂಗಳಿಂದ ಮಾಡಿದ ವೀಣೆ, ತಬಲಾ ಗಮನ ಸೆಳೆದವು

ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯ, ಲಲಿತಾರಾಣಿ, ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಉಪವಿಭಾಧಿಕಾರಿ ಸಿ.ಡಿ.ಗೀತಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಗಂಗಾವತಿ ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ, ಕಾರಟಗಿ ತಹಶೀಲ್ದಾರ್ ಕವಿತಾ, ಕನಕಗಿರಿ ತಹಶೀಲ್ದಾರ್ ರವಿ ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ಧಲಿಂಗೇಶ, ತೋಟಗಾರಿಕೆ ಇಲಾಖೆ ನಿರ್ದೇಶಕ ಕೃಷ್ಣ ಉಕ್ಕುಂದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಮೋಹನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು