ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಅಡುಗೆ ತಯಾರಿಸಿ ಗಮನ ಸೆಳೆದ ಮಹಿಳೆಯರು

ಆನೆಗೊಂದಿ ಉತ್ಸವ ಅಂಗವಾಗಿ ಅಡುಗೆ ತಯಾರಿಕೆ ಸ್ಪರ್ಧೆ
Last Updated 6 ಜನವರಿ 2020, 10:27 IST
ಅಕ್ಷರ ಗಾತ್ರ

ಗಂಗಾವತಿ: ಆನೆಗೊಂದಿ ಉತ್ಸವ ಅಂಗವಾಗಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ತಾಲ್ಲೂಕಿನ ಆನೆಗೊಂದಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಅಡುಗೆ ತಯಾರಿಕೆ ಸ್ಪರ್ಧೆ ನಡೆಯಿತು.

‌ಉತ್ಸವ ಆಚರಣೆಯಲ್ಲಿ ಕೂಡ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಲು ವಿಶೇಷವಾಗಿ ಅಡುಗೆ ತಯಾರಿಕೆ ಸ್ಪರ್ಧೆ ಆಯೋಜಿಸಲಾಗಿತ್ತು. ಮುಂಚಿತವಾಗಿಯೇ ಉತ್ತಮವಾಗಿ ಪ್ರಚಾರ ಮಾಡಿದ್ದರಿಂದ ಜಿಲ್ಲೆಯ ಕಾರಟಗಿ, ಕನಕಗಿರಿ, ಹನುಮಸಾಗರ, ಕೊಪ್ಪಳ, ಆನೆಗೊಂದಿ ಸೇರಿದಂತೆ ನಾನಾ ಕಡೆಗಳಿಂದ 30ಕ್ಕೂ ಅಧಿಕ ಅಡುಗೆ ತಯಾರಕರು ಭಾಗವಹಿಸಿದ್ದರು. ಇದರಲ್ಲಿ ವಿಜಯನಗರ ಕಾಲದ ಪಾರಂಪರಿಕ ಆಹಾರ ತಯಾರಿಕೆಗೆ ಒಟ್ಟು 10 ಜನರು ಹಾಗೂ ಸ್ಥಳೀಯ ಪದ್ಧತಿಯ ಆಹಾರ ತಯಾರಿಕೆಗೆ 26 ಜನ ಅಡುಗೆ ತಯಾರಕರು ಭಾಗವಹಿಸಿದ್ದರು.

ಪ್ರತಿ ಒಂದು ಅಡುಗೆ ತಯಾರಕರಿಗೂ ಪ್ರತ್ಯೇಕವಾಗಿ ಟೇಬಲ್‌ಗಳ ವ್ಯವಸ್ಥೆ ಮಾಡಿ, ಅಡುಗೆ ತಯಾರಿಕೆಗೆ ಬೇಕಾದ ಮೂಲ ಸೌಲಭ್ಯಗಳನ್ನು ಇಲಾಖೆ ವತಿಯಿಂದ ಒದಗಿಸಿಕೊಡಲಾಗಿತ್ತು. ಪಾರಂಪರಿಕ ಹಾಗೂ ಸ್ಥಳೀಯ ಪದ್ಧತಿಯ ಆಹಾರ ತಯಾರಿಕೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ನೀಡಲಾಗಿದೆ. ಪ್ರಥಮ ಸ್ಥಾನ ಪಡೆದರೆ ₹ 15,000, ದ್ವಿತೀಯ ₹ 10,000, ತೃತೀಯ ₹ ₹7,500 ನಗದು ಬಹುಮಾನ ನೀಡಲಾಗುವುದು.

ಅಡುಗೆ ತಯಾರಿಕೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ನಾನಾ ಬಗೆಯ ಅಡುಗೆಯನ್ನು ತಯಾರು ಮಾಡಲು 2 ಗಂಟೆಗಳ ಕಾಲವಕಾಶವನ್ನು ನೀಡಲಾಗಿತ್ತು. ನಾನಾ ಬಗೆಯ ಅಡುಗೆಗಳನ್ನ ತಯಾರಿಸಿದ ಸ್ಪರ್ಧಿಗಳಲ್ಲಿ ಆನೆಗೊಂದಿ ಅಡುಗೆ ರಾಣೆಯನ್ನು ಗುರುತಿಸಲು ವಿಶೇಷವಾಗಿ ಅಡುಗೆಯಲ್ಲಿ ನುರಿತ ಅಡುಗೆ ನಿರ್ಣಾಯಕರನ್ನು ನೇಮಕ ಮಾಡಲಾಗಿತ್ತು. ಅಡುಗೆ ತಯಾರಿಕೆಯಿಂದ ಹಿಡಿದು ಸಿದ್ದತೆಯ ಜೊತೆಗೆ ಅಡುಗೆ ಪೂರ್ಣಗೊಳ್ಳುವವರೆಗೆ ಹಂತ ಹಂತವಾಗಿ ನಿರ್ಣಾಯಕರು ಗಮನ ಹರಿಸಿ, ಅಂಕಗಳನ್ನು ನೀಡುತ್ತಿದ್ದರು. ಒಟ್ಟು 100 ಅಂಕಗಳನ್ನು ನಿಗದಿ ಮಾಡಲಾಗಿತ್ತು.

ಪಾರಂಪರಿಕ ಅಡುಗೆ ತಯಾರಿಕೆಯಲ್ಲಿ ವಿಶೇಷವಾಗಿ ಬಾಳೆಹೂವಿನ ಪಲ್ಲೆ, ಅಕ್ಕಿರೊಟ್ಟಿ, ಕಾಯಿ ಚಟ್ನಿ, ರಾಗಿ ಮುದ್ದೆ, ಹಸಿ ಹುಳಿ, ಸಜ್ಜೆ ರೊಟ್ಟಿ, ಕುಸಬಿ ಅನ್ನ, ಖಿಚಡಿ, ಜೋಳದ ಸಂಗಟಿ, ಮೆಂತೆ ಕಡಬು, ಗೋಧಿ ಉಗ್ಗಿ, ಹೋಳಿಗೆ ಸಾರು, ಹುಣಸೆ ಚಟ್ನಿ ಸೇರಿದಂತೆ ನಾನಾ ವಿಧಗಳಲ್ಲಿ ಅಡುಗೆಯನ್ನು ತಯಾರಿಸಿದ್ದರು. ಇನ್ನೂ ಸ್ಥಳೀಯ ಪದ್ಧತಿಯ ಆಹಾರ ತಯಾರಿಕೆಯಲ್ಲಿ ವಿಶೇಷವಾಗಿ ಹೆಸರು ಬೆಳೆ ಪಾಯಸ, ಸಿಹಿ ಪೂರಿ, ವೆಜ್ ಬಿರಿಯಾನಿ, ತಾಳಿ ಪಟ್ಟು, ಟಮೋಟೊ ಬಾಥ್, ಚಿತ್ರನ್ನಾ, ಹಿಟ್ಟಿನ ಹೊಳಿಗೆ, ಬದನೆಕಾಯಿ ಪಲ್ಲೆ, ಮುದ್ದೆ ಗೊಜ್ಜು, ಗೋಧಿ ಪಾಯಸಾ, ಕಡಬು, ಶೇಂಗಾ ಹೊಳಿಗೆ, ದೂದ್ ಪೇಡಾ ಸೇರಿದಂತೆ ನಾನಾ ಅಡುಗೆಗಳನ್ನು ತಯಾರು ಮಾಡುವ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT