ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಂದಕ್ಕೆ ಆನೆಗೊಂದಿ, ಚೆಂದಕ್ಕೆ ಹಂಪಿ'

ವಿಜಯನಗರ ಸ್ಥಾಪನೆಯಲ್ಲಿ ಆನೆಗೊಂದಿ ಪಾತ್ರ: ವಿಚಾರ ಸಂಕಿರಣ
Last Updated 9 ಜನವರಿ 2020, 12:30 IST
ಅಕ್ಷರ ಗಾತ್ರ

ವಿದ್ಯಾರಣ್ಯ ವೇದಿಕೆ, ಆನೆಗೊಂದಿ (ಕೊಪ್ಪಳ ಜಿಲ್ಲೆ): ನದಿ, ಬೆಟ್ಟ, ವೃಕ್ಷ, ಪಕ್ಷಿ ಸಂಪತ್ತಿನಿಂದ ಆನೆಗೊಂದಿ ನೈಸರ್ಗಿಕವಾಗಿಯೇ ಅಂದವಾಗಿದೆ. ಹಂಪಿಯನ್ನು ಮಾನವ ಪ್ರಯತ್ನಗಳಿಂದ ಚೆಂದಗೊಳಿಸಲಾಗಿದೆ ಎಂಬ ಮಾತಿನಂತೆ 'ಅಂದಕ್ಕೆ ಆನೆಗೊಂದಿ, ಚೆಂದಕ್ಕೆ ಹಂಪಿ' ಎಂಬ ಮಾತು ಈ ಭಾಗದಲ್ಲಿ ಪ್ರಚಲಿತದಲ್ಲಿ ಇದೆ ಎಂದುಡಾ.ಶರಣಬಸಪ್ಪ ಕೋಲ್ಕಾರ ಹೇಳಿದರು.

ಅವರು ಉತ್ಸವದ ಅಂಗವಾಗಿ 'ವಿಜಯನಗರ ಸ್ಥಾಪನೆಯಲ್ಲಿ ಆನೆಗೊಂದಿಯ ಪಾತ್ರ' ವಿಷಯ ಕುರಿತು ಮಾತನಾಡಿದರು.

ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಇಲ್ಲಿ ಮಾನವ ಸಂಕುಲ ವಾಸವಾಗಿತ್ತು ಎಂಬ ದಾಖಲೆಗಳಿವೆ. ಕಡೆಬಾಗಿಲಿನ ಸಮೀಪ ದೊರೆತ ಮಡಿಕೆ ಚೂರು ಮತ್ತು ಪ್ರಾಚ್ಯ ದಾಖಲೆಗಳನ್ನು ಅಮೇರಿಕ ಸಂಸ್ಥೆ ಪರಿಶೀಲಿಸಿ ಇದರ ಕಾಲವನ್ನು ನಿಖರಗೊಳಿಸಿದೆ. ಇಲ್ಲಿ ಬೆಟ್ಟ ಗುಡ್ಡಗಳಲ್ಲಿ ಇಂದಿಗೂ ಹಳೆಶಿಲಾಯುಗದ ಕಾಲದ ಅನೇಕ ಶಿಲಾಚಿತ್ರಗಳು ಕಾಣಸಿಗುತ್ತವೆ.11ನೇ ಶತಮಾನದಲ್ಲಿ ಸ್ಥಾಪಿತವಾದ ಪಂಪಾಂಬಿಕೆ ದೇಗುಲವಿದೆ. ಆದರೆ ಅದು ಜಯಲಕ್ಷ್ಮಿ ದೇವಾಲಯ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.

ವಾನ ಭದ್ರೇಶ್ವರ, ಸೋಮೇಶ್ವರ, ಜಂಬುನಾಥೇಶ್ವರ, ಕಿನ್ನೂರೇಶ್ವರ ಹೀಗೆ ನಾಲ್ಕು ಗಡಿ ಲಿಂಗಗಳು ಈ ಪಂಪಾಂಬಿಕೆಗೆ ಇದ್ದವು. ಪಂಪಾಂಬಿಕೆ ಅಥವಾ ಹಂಪಮ್ಮ ಆನೆಗೊಂದಿಯವಳು ಆಕೆಯನ್ನು ಮದುವೆಯಾಗಿ ಇಲ್ಲಿಗೆ ಬಂದ ಶಿವನು ಪಂಪಾಪತಿ ಎನಿಸಿಕೊಂಡ ಎಂಬ ಪೌರಾಣಿಕ ಹಿನ್ನೆಲೆ ಈ ಸ್ಥಳಕ್ಕೆ ಇದೆ. ಇಲ್ಲಿ ವಾನರು ಎಂಬ ಬುಡಕಟ್ಟು ಸಮುದಾಯ ಇತ್ತು. ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಗೆ ಆನೆಗೊಂದಿ ಮತ್ತು ದಕ್ಷಿಣ ಭಾರತದ ಭೌಗೋಳಿಕ ಪರಿಚಯ ಚೆನ್ನಾಗಿಯೇ ಇದ್ದ ಪರಿಣಾಮವಾಗಿ ಈ ಪ್ರದೇಶಕ್ಕೆ ರಾಮಾಯಣ ಮಹಾಕಾವ್ಯದ ನಂಟು ಇದೆ ಎಂದು ಹೇಳಿದರು.

ಅದ್ಭುತ ಸಾಂಸ್ಕೃತಿಕ ವೀರ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗ ಕ್ರಿ.ಶ.1327 ರಲ್ಲಿ ಪತನವಾದ ಬಳಿಕ ಕುಮಾರರಾಮನ ಅಕ್ಕ ಮಾರಾಂಬಿಕೆಯ ಪತಿ ಸಂಗಮನ ನೇತೃತ್ವದಲ್ಲಿ ಚಳವಳಿ ಈ ಭಾಗದಲ್ಲಿ ಜಾಗೃತವಾಯಿತು. ಆತನ ಮಕ್ಕಳಾದ ಹಕ್ಕ ಬುಕ್ಕರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಅಸ್ತಿಭಾರ ಆನೆಗೊಂದಿಯಲ್ಲಿ ಹಾಕಲಾಯಿತು ಎಂದು ವಿವರಿಸಿದರು.

ಹಕ್ಕ (ಹರಿಹರರಾಯ) ಆನೆಗೊಂದಿಯಿಂದಲೇ ಆಳ್ವಿಕೆ ನಡೆಸಿದ. ನಂತರ ಬುಕ್ಕರಾಯ ಸಾಮ್ರಾಜ್ಯದ ಇನ್ನಷ್ಟು ರಕ್ಷಣೆಯ ಕಾರಣದಿಂದ ಹಂಪಿಗೆ ರಾಜಧಾನಿ ಸ್ಥಳಾಂತರಿಸಿದ. ಆನೆಗೊಂದಿ ಸೇನಾ ನೆಲೆಯಾಗಿ ಮುಂದುವರೆಯಿತು ಎಂದರು.

ಗಂಡುಗಲಿ ಕುಮಾರರಾಮ ಎಂಬ ವಿಷಯದ ಕುರಿತು ಡಾ.ಅರುಣ ಜೋಳದ ಕೂಡ್ಲಿಗಿ ಮಾತನಾಡಿ, ದಕ್ಷಿಣ ಕರ್ನಾಟಕದ ಸೋಲಿಗರು, ನೀಲಗಾರರಿಂದ ಹಿಡಿದು ಬೆಳಗಾವಿಯ ಅನೇಕ ಭಾಗಗಳಲ್ಲಿ ಜನಪದರ ಮೂಲಕ ಆನೆಗೊಂದಿಯ ಕುಮಾರರಾಮ ಪುನರ್ ಸೃಷ್ಟಿಯಾಗಿದ್ದಾನೆ. ಕೆರೆ ಕಟ್ಟೆಗಳನ್ನು ನಿರ್ಮಿಸಿ ಜನಪರವಾದ, ಕೃಷಿಕರ ಪರವಾದ ಆಡಳಿತ ನೀಡಿದ ಕುಮಾರರಾಮನನ್ನು ಎಲ್ಲ ಕಾಲಕ್ಕೂ ಸ್ಮರಿಸುತ್ತಾರೆ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಸರದ ಸದಸ್ಯ ಅಶೋಕ ರಾಯ್ಕರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಬೀಜ ಆನೆಗೊಂದಿಯಲ್ಲಿ ಬಿತ್ತಲಾಯಿತು.ಮುಂದೆ ಅದು ಹೆಮ್ಮರವಾಗಿ ಹಂಪಿಯಲ್ಲಿ ಸಾಮ್ರಾಜ್ಯ ವಿಸ್ತರಣೆಯಾಗಿ ಭಾರತದ ಸಂಸ್ಕೃತಿಯನ್ನು ವೈಭವದ ಔನ್ನತ್ಯಕ್ಕೆ ಕೊಂಡೊಯ್ದಿತ್ತು ಎಂದರು.

ಜಿಲ್ಲೆಯ ರಂಗಭೂಮಿ ಕುರಿತು ಎಸ್.ವಿ.ಪಾಟೀಲ ಮಾತನಾಡಿದರು. ಹಿರಿಯ ಸಾಹಿತಿ ಹೆಚ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಪತ್ರಕರ್ತರಾದ ಮೆಹಬೂಬ ಹುಸೇನ್ ಕನಕಗಿರಿ, ಎಂ.ಪರಶುರಾಮಪ್ರಿಯ ಪ್ರತಿಕ್ರಿಯೆ ನೀಡಿದರು. ಜೀವನಸಾಬ ಬಿನ್ನಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT