ಗಂಗಾವತಿ: ಅಂಗನವಾಡಿ ಕಟ್ಟಡದ ಚಾವಣಿಯ ಸಿಮೆಂಟ್ ಚಕ್ಕಳೆ( ಪದರು) ಬಿದ್ದು ನಾಲ್ವರು ಮಕ್ಕಳು ಗಾಯಗೊಂಡ ಮೆಹಬೂಬ ನಗರದ 11ನೇ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಏಳು ವರ್ಷವಾದರೂ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಹಸ್ತಾಂತರವಾಗಿಲ್ಲ.
ಗಂಗಾವತಿ ನಗರದ 7ನೇ ವಾರ್ಡ್‌ನ ಮೆಹಬೂಬ ನಗರದ 1 1ನೇ ಅಂಗನವಾಡಿ ಕೇಂದ್ರ ದುರ್ಗಮ್ಮ ಹಳ್ಳದ (ಕೊಳಚೆ ನೀರು ಸಂಚರಿಸುವ ಕಾಲುವೆ) ಸಮೀಪವಿದ್ದು, 2016-17 ನೇ ಸಾಲಿನಲ್ಲಿ ಉದ್ಘಾಟನೆಯಾಗಿದೆ.
ಈ ಅಂಗನವಾಡಿ ಕಟ್ಟಡ ನಗರಸಭೆಯಿಂದ ಯಾವ ಅನುದಾನ, ಗುತ್ತಿಗೆದಾರರು ಯಾರು? ಯಾವ ಆಧಾರದ ಮೇಲೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ನೀಡಲಾಗಿದೆ ಎಂಬ ಮಾಹಿತಿಯೇ ಇಲ್ಲ.
ಇದೀಗ ಅಂಗನವಾಡಿ ಕಟ್ಟಡದ ಚಾವಣಿಯ ಸಿಮೆಂಟ್ ಚಕ್ಕಳ ಬಿದ್ದು ಮಕ್ಕಳು ಗಾಯಗೊಂಡ ನಂತರ ಸಿಡಿಪಿಒ ಮತ್ತು ನಗರಸಭೆ ಪೌರಾಯುಕ್ತರು ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ದಾಖಲೆ ಮತ್ತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಳಪೆಯಲ್ಲಿ ಕಟ್ಟಡ ನಿರ್ಮಾಣ: ಮೆಹಬೂಬ ನಗರದ 11ನೇ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಕಳಪೆಯಾಗಿದೆ. ಮಳೆ ನೀರಿಗೆ ಗೋಡೆಗಳು ತಂಪು ಹಿಡಿದಿವಿ. ಇನ್ನೂ ಈ ಕಟ್ಟಡದ ಪಕ್ಕ, ಖಾಲಿ ಸ್ಥಳಗಳಿದ್ದು, ಕೇಂದ್ರ ಮುಂಭಾಗ, ಹಿಂಭಾಗ ಕಸ ಬೆಳೆದು, ಸರಿಸೃಪಗಳ ಭಯದ ಭೀತಿ ಇದೆ.
ಈ ಕಟ್ಟಡ ನಿರ್ಮಾಣ ಮಾಹಿತಿ ಕುರಿತು ದೂರವಾಣಿ ಮೂಲಕ ನಗರಸಭೆ ಪೌರಾಯುಕ್ತರನ್ನ ಸಂಪರ್ಕಿಸಿದರೇ ಅವರು ಕರೆಗೆ ಸ್ಪಂದಿಸಲಿಲ್ಲ.
ಮೆಹಬೂಬ ನಗರದ 11ನೇ ಅಂಗನವಾಡಿ ಕೇಂದ್ರದ ಕಟ್ಟಡ ನಮ್ಮ ಇಲಾಖೆಗೆ ಕಾನೂನು ಬದ್ಧವಾಗಿ ಹಸ್ತಾಂತರವಾಗಿಲ್ಲ. ಹಿಂದಿನ ಅಧಿಕಾರಿಗಳು ಮೌಖಿಕ ಆಧಾರದಡಿ ಪಡೆದಿರುಬಹದು. ಕಟ್ಟಡದ ಅಗತ್ಯ ದಾಖಲೆಗಳಿಗಾಗಿ ನಗರಸಭೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವೆ.