ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ರೈತ ವಿರೋಧಿ ನಡೆ: ನಡಹಳ್ಳಿ ಆರೋಪ

Published 11 ಏಪ್ರಿಲ್ 2024, 15:47 IST
Last Updated 11 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಕೊಪ್ಪಳ: ‘ಕೇಂದ್ರ ಮತ್ತು ಹಿಂದಿನ ನಮ್ಮ ರಾಜ್ಯ ಸರ್ಕಾರ ರೈತರಿಗೆ ನೀಡಿದ್ದ ಯೋಜನೆಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರ ರದ್ದುಪಡಿಸಿ ರೈತ ವಿರೋಧಿ ನಡೆ ಅನುಸರಿಸುತ್ತಿದೆ’ ಎಂದು ಬಿಜೆಪಿ ರೈತ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಆರೋಪಿಸಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ರದ್ದಾಗಿದೆ. ಬಂಗಾರಪ್ಪ ಕಾಲದಲ್ಲಿ ಆರಂಭವಾಗಿದ್ದ ವಿದ್ಯುತ್ ಸಬ್ಸಿಡಿ ಯೋಜನೆಗೂ ಕೊಕ್ಕೆ ಹಾಕಿದೆ’ ಎಂದು ಆರೋಪಿಸಿದರು.

‘ಹಾಲು ಉತ್ಪಾದನೆ ಮಾಡಿದ ಕುಟುಂಬಗಳಿಗೆ ಸಬ್ಸಿಡಿ ತೆಗೆದು ಹಾಕಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ರೈತರು ಈಗಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ. ಈ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಹಣ ದುರ್ಬಳಕೆ ಮಾಡುತ್ತಿದೆ’ ಎಂದರು.

‘ಬರ ಪರಿಹಾರದ ವಿಚಾರದಲ್ಲಿ ಕಾಂಗ್ರೆಸ್‌ ಸಮಯ ವ್ಯರ್ಥ ಮಾಡಿದ್ದು, ಅದನ್ನು ನಮ್ಮ ಪಕ್ಷದ ವತಿಯಿಂದ ಜಿಲ್ಲೆಯ ರೈತರ ಮನೆಮನೆಗೆ ಮುಟ್ಟಿಸಲಾಗುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ರಾಜ್ಯ ಸರ್ಕಾರ ಮೊದಲು ಬರ ಪರಿಹಾರ ಬಿಡುಗಡೆ ಮಾಡಿ ಕೇಂದ್ರದಿಂದ ಬರುವ ತನಕ ಕಾಯಬೇಕಾಗುತ್ತದೆ. ಈ ವಿಷಯವನ್ನು ಅರಿಯದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಗತ್ಯವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬರ ಪರಿಸ್ಥಿತಿಯಿದ್ದರೂ ರಾಜ್ಯ ಸರ್ಕಾರ ಮೇವು ಬ್ಯಾಂಕ್‌ ಆರಂಭಿಸಿಲ್ಲ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಕಿತ್ತೊಗೆಯಲು ನಿರಂತರ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು. ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರೈತ ಮೋರ್ಚಾ ಘಟಕದ ಭಾರತಿ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಅಶೋಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ ತಂಗಡಗಿ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಬಸವಣ್ಣನ ನಾಡಿನಿಂದ ಬಂದವರು ಈ ಮಾತು ಆಡಬಾರದು.
ಎ.ಎಸ್‌. ಪಾಟೀಲ ನಡಹಳ್ಳಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT