ಮಂಗಳವಾರ, ಜನವರಿ 19, 2021
24 °C

ಕಲಾವಿದನಿಗೆ ಸಂದ ಗೌರವ

ಕೆ.ಶರಣಬಸವ ನವಲಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತಾವರಗೇರಾ: ಪಟ್ಟಣದ ಗೋಂದಳಿ ಸಮುದಾಯದ ತಿಪ್ಪಣ್ಣ ಅಂಬಾಜಿ ಸುಗೇತಕರ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಯ ಅಲೆಮಾರಿ ಕಲಾವಿದರಿಗೆ ಸಂದ ಗೌರವವಾಗಿದೆ.

ಪಟ್ಟಣದ ಗೋಂದಳಿ ಸಮುದಾಯದ 55ರ ಇಳಿವಯಸ್ಸಿನ ಈ ಅಜ್ಞಾತ ಜನಪದ ಕಲಾವಿದ ತಿಪ್ಪಣ್ಣ ಬಾಲ್ಯದಿಂದಲೂ ತಮ್ಮ ಮನೆತನದ ಗೋಂದಳಿ ಜನಪದ ಕಲೆಯನ್ನು ರೂಢಿಸಿಕೊಂಡು ಪೋಷಿಸಿಕೊಂಡು ಬಂದು ಜನ ಮನ್ನಣೆ ಗಳಿಸಿದ್ದಾರೆ.

ಕೇವಲ ನಾಲ್ಕನೇ ತರಗತಿಯವರಿಗೆ ವ್ಯಾಸಂಗ ಮಾಡಿರುವ ತಿಪ್ಪಣ್ಣ ಅಂಬಾಜಿ ಸುಗೇತಕರ ಕಂಠಪಾಠವಾಗಿ ನೂರಾರು ಹಾಡುಗಳನ್ನು ಒಳಗೊಂಡು, 32 ಕಥೆಗಳನ್ನು ಸೊಗಸಾಗಿ ಹಾಡುತ್ತಾರೆ.

ಸಾಂಸ್ಕೃತಿಕ ಹಾಗೂ ಜಾನಪದ ಸೊಗಡಿನ ಕುಟುಂಬ ಗೋಂದಳಿ ಸಮುದಾಯ ಎಂದರೇ ಅದೊಂದು ಸಾಂಸ್ಕೃತಿಕ ಲೋಕದ ಜನಪದ ಕಲಾವಿದರ ಕುಟುಂಬ ಜಾತ್ರೆ, ಸಭೆ, ಸಮಾರಂಭ, ಅದ್ದೂರಿ ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ತಮ್ಮದೇ ವಿಭಿನ್ನ ಶೈಲಿಯ ಮೂಲಕ ಹಾಡು ಮತ್ತು ಕಥೆಗಳನ್ನು ಹೇಳುವ ಮೂಲಕ ಜನರನ್ನು ಮನರಂಜಿಸುತ್ತಾರೆ.

ಅಂತಹ ಸಮುದಾಯದ ಜನಪದ ಕಲಾವಿದನಿಗೆ ರಾಜ್ಯ ಮಟ್ಟದ ಜಾನಪದ ಅಕಾಡೆಮಿ ‍ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ.

ಜನಪದ ಕಲಾವಿದ ತಿಪ್ಪಣ್ಣ ಅಂಬಾಜಿ ಸುಗೇತಕರ ರವರು ಸವದತ್ತಿ ಎಲ್ಲಮ್ಮ, ಹುಲಿಗಿಯ ಹುಲಿಗೆಮ್ಮ, ಚನ್ನಬಸವಣ್ಣ, ಶಿವಧ್ಯಾನ ಸೇರಿದಂತೆ ನೂರಾರು ಹಾಡುಗಳನ್ನು, ಬಾಲ ಭಿಕ್ಷುಕ ರಾಜನ ಕಥೆ, ಸತ್ಯವಾನ ಸಾವಿತ್ರಿ ಕಥೆ, ಲವ, ಕುಶ ಕಥೆ, ನೀಲಂಜನ ಕುಮಾರ ಕಥೆ, ರಾಜಸತ್ಥಳ ಸೈನ್ಯ, ಬಂಗಾರ ಕುದಲ ಜಯರಾಣಿ ಕಥೆ ಸೇರಿದಂತೆ ಒಟ್ಟು 32 ಕಥೆಗಳನ್ನು ಗೋಂದಳಿ ಸಮುದಾಯ ಜನಪದ ಶೈಲಿಯಲ್ಲಿ ತನ್ನದೇ ವಿಭಿನ್ನ ಕಂಠದಿಂದ ಹಾಡುತ್ತಾ ಊರು ಊರು ಸುತ್ತಿ ಜನರಿಗೆ ಜಾನಪದ ಹಾಡಿನ ಸವಿ ಉಣಿಸುತ್ತಿದ್ದಾರೆ.

‘ಈ ಹಿಂದೆ ಊರು ಗೌಡ್ರು, ಶಾನಭೋಗರು, ದೇಸಾಯಿ, ಕುಲಕರ್ಣಿಯವರು ಸೇರಿದಂತೆ ಇನ್ನಿತರ ಶ್ರೀಮಂತ ವ್ಯಕ್ತಿಗಳು ಜಾತ್ರೆ, ಸಭೆ, ಸಮಾರಂಭ, ಅದ್ದೂರಿ ಮದುವೆ, ಮುಂಜಿ ಕಾರ್ಯಕ್ರಮಗಳಿಗೆ ನಮ್ಮನ್ನು ಆಹ್ವಾನಿಸಿ ವಿಭಿನ್ನ ಶೈಲಿಯ ಹಾಡು ಮತ್ತು ಕಥೆಗಳನ್ನು ಕೇಳಿ ನಮ್ಮಂತ ಕಲಾವಿದರಿಗೆ ಹಣ, ಒಡವೆ, ಕಾಳು, ಕಡಿ, ಬಟ್ಟೆ, ಬರೇ ನೀಡಿ ಸತ್ಕರಿಸುತ್ತಿದ್ದರು. ಆದರೆ ಈಗ ಕಲೆಗೆ ಪ್ರೋತ್ಸಾಹವಿಲ್ಲ. ವೃತ್ತಿಗಾಗಿ ಮನೆ, ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದೇವೆ. ಅಲ್ಪ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.