ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಆಟೊ ಚಾಲಕರು

ಕೊರೊನಾ ಸೋಂಕು ಭೀತಿ: ಆಟೊ ಹತ್ತದ ಪ್ರಯಾಣಿಕರು
Last Updated 12 ಅಕ್ಟೋಬರ್ 2020, 6:20 IST
ಅಕ್ಷರ ಗಾತ್ರ

ತಾವರಗೇರಾ: ಕೊರೊನಾ ಸೋಂಕು ಹರಡುತ್ತಿದಂತೆ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿ, ಒಂದು ತಿಂಗಳು ಸಂಪೂರ್ಣ ವ್ಯಾಪಾರ, ವಹಿವಾಟು ಸ್ಥಗಿತವಾಗಿ ಜನಜೀವನ ಅಸ್ತವ್ಯಸ್ತ ಕಂಡುಬಂದಿತು. ಆಟೊ ಚಾಲನೆ ಮಾಡಿಕೊಂಡು ಕುಟುಂಬ ನಡೆಸುತ್ತಿದ್ದ ಚಾಲಕರು ತುಂಬ ಸಂಕಷ್ಟದಲ್ಲಿ ಜೀವನ ನಿರ್ವಹಣೆ ಮಾಡಿದ್ದರು. ಆದರೆ, ಇಂದಿಗೂ ಸಹ ಪ್ರಯಾಣಿಕರು ಆಟೊ ಹತ್ತದ ಕಾರಣ ಆಟೊ ಚಾಲಕರು ಸಂಕಷ್ಟದಲ್ಲಿದ್ದಾರೆ.

ಕೊರೊನಾ ಸೋಂಕು ಹಿನ್ನಲೆಯಲ್ಲಿ ಆಟೊ ಪ್ರಯಾಣ ಮಾಡುವರ ಸಂಖ್ಯೆ ಕಡಿಮೆಯಾಗಿದೆ. ಪ್ರಯಾಣಿಕರು ಸಹ ಜೀವ ಭಯದಲ್ಲಿ ಹೆಚ್ಚಾಗಿ ಆಟೊ ಬಳಕೆ ಮಾಡುತ್ತಿಲ್ಲ. ಇದರಿಂದ ಆಟೊ ಚಾಲನೆ ಬಿಟ್ಟು ಕೆಲವರು ಸ್ವಯಂ ಉದ್ಯೋಗ ಮಾಡಿಕೊಂಡಿರುವ ಉದಾ ಹರಣೆಗಳು ಕಂಡುಬರುತ್ತಿವೆ. ಸ್ಥಳೀಯ ಶ್ಯಾಮೀದಲಿ ಆಟೊ ಚಾಲಕರ ಸಂಘದ ಸದಸ್ಯರಲ್ಲಿ ಕೆಲವರು ತರಕಾರಿ ವ್ಯಾಪಾರ ನಡೆಸಿದ್ದಾರೆ. ಬೆಂಗಳೂರಿಗೆ ದುಡಿಯಲು ಕೂಡ ಹೋಗಿದ್ದಾರೆ.

ಸರ್ಕಾರ ಈಚೆಗೆ ವಿಶೇಷ ಪ್ಯಾಕೇಜ್‌ ಮೂಲಕ ಪ್ರತಿಯೊಬ್ಬ ಆಟೊ ಚಾಲಕರಿಗೆ ₹5,000 ಒಂದು ಬಾರಿ ಪರಿಹಾರ ಘೋಷಣೆ ಮಾಡಿದ್ದರೂ ಸ್ಥಳೀಯರಿಗೆ ಈ ಯೋಜನೆ ಮಾತ್ರ ಸಿಕ್ಕಿಲ್ಲ. ಇದರಿಂದ ಇವರ ಕುಟುಂಬಗಳು ಸಂಕಷ್ಟದಲ್ಲಿಯೇ ಜೀವನ ನಡೆಸುತ್ತಿವೆ.

‘ಇತ್ತೀಚೆಗೆ ಚಾಲಕರ ಲೈಸೆನ್ಸ್ ಪಡೆಯಲು ಶಿಕ್ಷಣ ಮತ್ತು ವಿವಿಧ ದಾಖಲಾತಿಗಳನ್ನು ಕೇಳುತ್ತಿದ್ದು, ಆದರೆ ಕೆಲವು ಬಡ ಕುಟುಂಬದ ಚಾಲಕರು ಶಾಲಾ– ಕಾಲೇಜು ಕಲಿತಿಲ್ಲ. ಇದರಿಂದ ದಾಖಲಾತಿಗೆ ಯಾವೂದೇ ಅಧಿಕೃತ ದಾಖಲಾತಿ ಕೊಡುವುದು ಸಾಧ್ಯವಾಗಿದೆ. ಸರ್ಕಾರ ಈ ನೂತನ ದಾಖಲಾತಿ ಪ್ರಕ್ರಿಯೆ ಕೈಬಿಡಬೇಕು. ಆಟೊ ಚಾಲಕರಿಗೆ ವಿಶೇಷವಾದ ಕಾರ್ಯ ಯೋಜನೆ ಮೂಲಕ ಚಾಲನಾ ಪರವಾನಗಿ ನೀಡುವಂತೆ’ ಸ್ಥಳೀಯ ಆಟೊ ಚಾಲಕರಾದ ಸಂಗಪ್ಪ ಹುನಗುಂದ, ಅಶೋಕ ಹುನಗುಂದ, ವಿಶ್ವನಾಥ ಪತ್ರಿಮಠ ಒತ್ತಾಯಿಸಿದರು.

‘ಪ್ರತಿದಿನ ₹500 ದುಡಿಯುತ್ತಿದ್ದ ಆಟೊ ಚಾಲಕರು ಪ್ರಯಾಣಿಕರ ಕೊರತೆಯಿಂದ ಸದ್ಯ ₹100 ದುಡಿಯುತ್ತಿದ್ದು, ಕಳೆದ 6 ತಿಂಗಳಿಂದ ಬದುಕು ದುಸ್ಥರವಾಗಿದೆ. ಆಟೊ ನಡೆಸಿ ಜೀವನ ಸಾಗಿಸುವ ಈ ಕುಟುಂಬದಲ್ಲಿ ಮಕ್ಕಳು, ವೃದ್ಧರು ಸಹ ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಉದ್ಭವವಾಗಿದೆ. ಆದ್ದರಿಂದ ಸರ್ಕಾರ ಇಂತಹ ಸೇವಾ ವಲಯದವರಿಗೆ ವಿಶೇಷ ಪ್ಯಾಕೇಜ್‌ ಅನ್ನು ಘೋಷಣೆ ಮಾಡಬೇಕು. ನೇರವಾಗಿ ದೊರೆಯುವಂತಹ ಯೋಜನೆ ಜಾರಿ ಮಾಡಿದರೆ ನಾವು ಮತ್ತು ನಮ್ಮ ಕುಟುಂಬಗಳು ಜೀವನ ನಡೆಸಲು ಸಹಾಯವಾಗುತ್ತದೆ. ಇಲ್ಲವಾದರೆ ಆಟೊ ಸಾಲದ ಕಂತುಗಳನ್ನು ಕಟ್ಟುವಂತಹ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ’ ಎಂದು ಸ್ಥಳೀಯ ಆಟೊ ಚಾಲಕರ ಸಂಘದ ಅಧ್ಯಕ್ಷ ಶ್ಯಾಮಣ್ಣ, ಗರೀಬ್, ಕಲೀಲಪಾಷಾ, ಜಗನ್ನಾಥ ಸಿಂಗ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT